Tuesday, April 14, 2026
Homeರಾಜ್ಯಚಾಮುಂಡಿಬೆಟ್ಟ ಪ್ರದೇಶದಲ್ಲಿ ಯಾವುದೇ ಶಾಶ್ವತ ಕಾಮಗಾರಿ ಮಾಡದಂತೆ ಹೈಕೋರ್ಟ್ ಸೂಚನೆ

ಚಾಮುಂಡಿಬೆಟ್ಟ ಪ್ರದೇಶದಲ್ಲಿ ಯಾವುದೇ ಶಾಶ್ವತ ಕಾಮಗಾರಿ ಮಾಡದಂತೆ ಹೈಕೋರ್ಟ್ ಸೂಚನೆ

High Court orders not to carry out any permanent works in Chamundi Hills area

ಮೈಸೂರು, ಜ.16: ಚಾಮುಂಡಿಬೆಟ್ಟ ಪ್ರದೇಶದಲ್ಲಿ ಯಾವುದೇ ಶಾಶ್ವತ ಕಾಮಗಾರಿ ನಿರ್ಮಾಣ ಮಾಡಬಾರದು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಚಾಮುಂಡಿಬೆಟ್ಟ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಚನೆಯ ಸಿಂಧುತ್ವವನ್ನು ಪ್ರಶ್ನಿಸಿ ಮೈಸೂರು ರಾಜವಂಶದ ಪ್ರಮೋದಾ ದೇವಿ ಒಡೆಯರ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಮಧ್ಯಂತರ ಆದೇಶ ನೀಡಿದೆ.

ವಿಚಾರಣೆ ವೇಳೆ ಪ್ರಮೋದಾ ದೇವಿ ಪರ ವಕೀಲರು, ದೇವಾಲಯದ ಆಸ್ತಿ ಮಾಲೀಕತ್ವ ವಿವಾದವು ಇದೇ ಹೈಕೋರ್ಟ್‌ನ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಾಕಿ ಇದೆ. ಈ ಮಧ್ಯೆ ರಾಜ್ಯ ಸರ್ಕಾರ, ಚಾಮುಂಡಿಬೆಟ್ಟ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವನ್ನು ಅಸ್ತಿತ್ವಕ್ಕೆ ತಂದಿದೆ. ಈ ಪ್ರಾಧಿಕಾರ ಅರ್ಜಿದಾರರಿಗೆ ಯಾವುದೇ ಸಭೆಯ ನೋಟಿಸ್‌ಗಳನ್ನು ನೀಡದೆ, ದೇವಾಲಯದ ಆವರಣದಲ್ಲಿ ಕೆಲವು ಶಾಶ್ವತ ನಿರ್ಮಾಣ ಕಾಮಗಾರಿಗಳನ್ನು ನಡೆಸುತ್ತಿದೆ ಎಂದು ದೂರಿದರು.

ದೇವಾಲಯದ ಆಸ್ತಿ ಮಾಲೀಕತ್ವ ವಿವಾದವು ಇದೇ ಹೈಕೋರ್ಟ್‌ನ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಾಕಿ ಇದೆ. ಈ ನಡುವೆ ರಾಜ್ಯ ಸರ್ಕಾರ ಶಾಸನದ ಮೂಲಕ ಚಾಮುಂಡಿಬೆಟ್ಟ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವನ್ನು ಅಸ್ತಿತ್ವಕ್ಕೆ ತಂದಿದೆ. ಈ ಪ್ರಾಧಿಕಾರವು ಅರ್ಜಿದಾರರಿಗೆ ಯಾವುದೇ ಸಭೆಯ ನೋಟಿಸ್‌ಗಳನ್ನು ನೀಡಿಲ್ಲ ಮತ್ತು ದೇವಾಲಯದ ಆವರಣದಲ್ಲಿ ಕೆಲವು ಶಾಶ್ವತ ನಿರ್ಮಾಣ ಕಾಮಗಾರಿಗಳನ್ನು ನಡೆಸುತ್ತಿದೆ ಎಂದು ದೂರಿದರು.

ಇದಕ್ಕೆ ರಾಜ್ಯ ಸರ್ಕಾರದ ಪರ ಹಾಜರಾದ ಅಡ್ವೊಕೇಟ್ ಜನರಲ್ ಎನ್. ದೇವದಾಸ್ (AG), ಕೇಂದ್ರ ಸರ್ಕಾರದ ಪ್ರಸಾದ್ ಯೋಜನೆಯಡಿ ಚಾಮುಂಡಿಬೆಟ್ಟದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ದೇವಾಲಯದ ಆವರಣದಲ್ಲಿ ಯಾವುದೇ ಶಾಶ್ವತ ಕಾಮಗಾರಿ ನಡೆಸುವುದಿಲ್ಲ. ಬರುವ ಭಕ್ತರ ಹಿತದೃಷ್ಟಿಯಿಂದ ತಂಗುದಾಣವನ್ನು ನಿರ್ಮಿಸಲಾಗುತ್ತಿದೆ ಎಂದು ವಿವರಿಸಿದರು.

ಪೀಠ, ಅರ್ಜಿಯ ಮುಂದಿನ ವಿಚಾರಣೆ ದಿನಾಂಕದವರೆಗೆ ಚಾಮುಂಡಿಬೆಟ್ಟದಲ್ಲಿ ಯಾವುದೇ ಶಾಶ್ವತ ಕಾಮಗಾರಿ ನಿರ್ಮಾಣ ಮಾಡಬಾರದು. ಕೇಂದ್ರ ಸರ್ಕಾರದ ಯೋಜನೆಯಡಿ ಯಾವ ರೀತಿಯ ಕಾಮಗಾರಿಗಳಿಗೆ ಅವಕಾಶವಿದೆ. ಆ ಯೋಜನೆ ಮತ್ತು ಅದರ ಜಾರಿಗೆ ಸಂಬಂಧಿಸಿದ ಮಾಹಿತಿ ನೀಡಬೇಕು ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆಯನ್ನು ಫೆ.13ಕ್ಕೆ ಮುಂದೂಡಿತು.

ಕೇಂದ್ರ ಪ್ರವಾಸೋದ್ಯಮ ಸಚಿವಾಲಯವನ್ನೂ ಪ್ರತಿವಾದಿಯಾಗಿ ಸೇರಿಸಬೇಕೆಂಬ ಮಧ್ಯಂತರ ಅರ್ಜಿ ಸ್ವೀಕರಿಸಿದ ನ್ಯಾಯಪೀಠ ಡೆಪ್ಯುಟಿ ಸೊಲಿಸಿಟರ್ ಜನರಲ್ ಜಿ. ಶಾಂತಿಭೂಷಣ ಅವರಿಗೆ ನೋಟಿಸ್ ನೀಡಲು ಸೂಚಿಸಿತು.

ಪ್ರಕರಣದ ವಿವರ: ರಾಜ್ಯ ಸರ್ಕಾರ ಸಂವಿಧಾನದ ನಿಯಮಕ್ಕೆ ವಿರುದ್ಧವಾಗಿ ಮತ್ತು ಏಕಪಕ್ಷೀಯವಾಗಿ ಈ ಚಾಮುಂಡಿಬೆಟ್ಟ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ ರೂಪಿಸಿದೆ. ಅಲ್ಲದೆ, ಚಾಮುಂಡಿಬೆಟ್ಟದಲ್ಲಿ ಶಾಶ್ವತ ಕಾಮಗಾರಿಗಳನ್ನು ಕೈಗೊಳ್ಳಲು ಮುಂದಾಗಿದೆ. ಪ್ರಾಧಿಕಾರದ ಸಭೆಯಲ್ಲಿ ಭಾಗಿಯಾಗಲು ತಮ್ಮಗೆ ನೋಟಿಸ್ ನೀಡಿಲ್ಲ. ಹೀಗಾಗಿ, ಕಾಯ್ದೆಯನ್ನು ಅಸಿಂಧುಗೊಳಿಸಬೇಕು. ಚಾಮುಂಡಿಬೆಟ್ಟದಲ್ಲಿ ಶಾಶ್ವತ ಕಾಮಗಾರಿ ನಿರ್ಮಿಸದಂತೆ ಸರ್ಕಾರಕ್ಕೆ ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

RELATED ARTICLES

Latest News