ನವದೆಹಲಿ, ಜೂ. 16- ರಾಜ್ಯದಲ್ಲಿ 66 ಮಂದಿಯನ್ನು ರೌಡಿ ಶೀಟರ್‌ನಿಂದ ಕೈ ಬಿಡುವ ಪ್ರಸ್ತಾವನೆಯನ್ನು ತಡೆಹಿಡಿಯಲು ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೈಬಿಡಲು ನಿರ್ಧರಿಸಲಾದ ಪಟ್ಟಿಯಲ್ಲಿ 10 ರಿಂದ 12 ಮಂದಿ ನಟೋರಿಯಸ್ ರೌಡಿಗಳಿದ್ದಾರೆ ಎಂಬ ಮಾಹಿತಿ ಇದೆ. ಈ ರೀತಿಯ ಯಡವಟ್ಟು ನಡೆಯಲು ಹೇಗೆ ಸಾಧ್ಯ ಎಂದು ವಿವರಣೆ ನೀಡುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದೇನೆ ಎಂದರು.
ಲೋಪಗಳನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ರೌಡಿ ಶೀಟರ್‌ನಿಂದ ಕೈಬಿಡಲು ಪ್ರಸ್ತಾಪಿಸಲಾದ ಪಟ್ಟಿಯಲ್ಲಿ ಕೆಲವು ಬಿಜೆಪಿ ಕಾರ್ಯಕರ್ತರುಗಳ ಹೆಸರುಗಳಿವೆ ಎಂದು ಸ್ಪಷ್ಟಪಡಿಸಿದರು.
ಪತ್ರ ಸಮರ್ಥನೆ:
ಆರ್‌ಎಸ್‌ಎಸ್ ಸಂಘಟನೆ ಕುರಿತು ಮೋಹನ್ ಭಾಗವತ್ ಅವರಿಗೆ ತಾವು ಬರೆದಿರುವ ಪತ್ರವನ್ನು ಸಮರ್ಥಿಸಿಕೊಂಡ ಅವರು, ಇದು ವೈಯಕ್ತಿಕ ಅಭಿಪ್ರಾಯವಲ್ಲ, ಕರ್ನಾಟಕ ಸರ್ಕಾರದ ಸಚಿವನಾಗಿ ನಾನು ಪತ್ರ ಬರೆದಿದ್ದೇನೆ, ಉತ್ತರ ನೀಡಲೇಬೇಕು, ಉಡಾಫೆಯಾಗಿ ಮಾತನಾಡಿದರೆ ಪ್ರಯೋಜನ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸಂಘ ಪರಿವಾರದ ಅತ್ಯುನ್ನತ ನೀತಿ ನಿರೂಪಣಾ ಸಂಸ್ಥೆ ಭಾರತೀಯ ಪ್ರಾತಿನಿಧಿ ಸಭಾ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ರಾಜ್ಯದಲ್ಲಿ ಆರ್‌ಎಸ್‌ಎಸ್‌ನ 4,127 ಶಾಖೆಗಳಿವೆ. 562 ಪಥ ಸಂಚಲನಗಳನ್ನು ನಡೆಸಲಾಗಿದೆ. 20 ಲಕ್ಷ ಜನ ಸೇರುವ ಕಾರ್ಯಕ್ರಮ ನಿರ್ವಹಣೆ ಮಾಡಿದ್ದಾರೆ. ಇಷ್ಟೆಲ್ಲಾ ಬೃಹತ್ ಚಟುವಟಿಕೆಗಳನ್ನು ನಿರ್ವಹಿಸುವ ಸಂಸ್ಥೆಗೆ ಉತ್ತರದಾಯಿತ್ವ ಬೇಕಲ್ಲವೇ? ಎಂದು ಪ್ರಶ್ನಿಸಿದರು.
ಚುನಾವಣೆ ಆಯೋಗ ನಡೆಸುವ ಎಸ್‌ಐಆರ್‌ಗೆ ದಾಖಲೆ ಪತ್ರಗಳನ್ನು ಕೊಡಿ ಎಂದು ಬಹಳ ಸಂತೋಷದಿಂದ ಕೇಳುತ್ತಿದ್ದರು. ಈಗ ಅವರ ಸಂಘಟನೆಯ ದಾಖಲೆಗಳನ್ನು ಕೇಳಿದರೆ, ಉತ್ತರ ನೀಡಲು ಹೆಣಗಾಡುತ್ತಿದ್ದಾರೆ. ನಾನು ಪತ್ರ ಬರೆದಿರುವುದು ಆರ್‌ಎಸ್‌ಎಸ್ ಮುಖ್ಯಸ್ಥರಿಗೆ. ಉತ್ತರ ನೀಡುತ್ತಿರುವುದು ಬಿಜೆಪಿಯವರು. ಇದು ಎಲ್ಲಿಂದ ಎಲ್ಲಿಗೆ ಸಂಪರ್ಕ?. ಆರ್‌ಎಸ್‌ಎಸ್ ತಾನು ರಾಜಕೀಯ ಹೊರತಾದ ಸಂಘಟನೆ ಎಂದು ಹೇಳಿಕೊಳ್ಳುತ್ತಿದೆ. ಹಾಗಿದ್ದರೆ ಬಿಜೆಪಿಯವರು ಏಕೆ ಪ್ರತಿಕ್ರಿಯಿಸುತ್ತಿದ್ದಾರೆ? ಎಂದು ಪ್ರಶ್ನಿಸಿದರು.
ನಾನು ಆರ್‌ಎಸ್‌ಎಸ್‌ನ ಚಟುವಟಿಕೆಗಳಿಗೆ ವಿರೋಧಿಯಲ್ಲ, ಯಾವುದಕ್ಕೂ ಅಡ್ಡಿಪಡಿಸುವುದೂ ಇಲ್ಲ. ಆದರೆ ನೆಲದ ಕಾನೂನನ್ನು ಪಾಲಿಸಲೇಬೇಕು. ಉತ್ತರ ನೀಡುವುದಿಲ್ಲ ಎಂದು ಹೇಳಿ ಜಾರಿಕೊಳ್ಳಲು ಅವಕಾಶ ಇಲ್ಲ. ನಾನು ಸರ್ಕಾರದ ಪ್ರತಿನಿಧಿಯಾಗಿ ಪತ್ರ ಬರೆದಿದ್ದೇನೆ. ಚರ್ಚೆಗೆ ಆರ್‌ಎಸ್‌ಎಸ್ ಮುಖ್ಯಸ್ಥರು ಪ್ರತಿನಿಧಿಯನ್ನು ನೇಮಿಸಬೇಕೆಂದು ಮನವಿ ಮಾಡಿರುವುದಾಗಿ ಹೇಳಿದರು.
ಕಾನೂನು ಮತ್ತು ಸಂವಿಧಾನಬದ್ಧವಾಗಿ ಪಾರದರ್ಶಕತೆಯಿಂದ, ಉತ್ತರದಾಯಿತ್ವದೊಂದಿಗೆ ಅವರು ಯಾವುದೇ ಚಟುವಟಿಕೆ ಮಾಡಿದರೂ ನನ್ನ ಆಕ್ಷೇಪವಿಲ್ಲ ಎಂದಿದ್ದಾರೆ. ಈ ದೇಶದಲ್ಲಿ ಪ್ರತಿಯೊಂದು ಚಟುವಟಿಕೆ ನಡೆಸುವ ಸಂಸ್ಥೆಗಳು ನೋಂದಣಿಯಾಗಲೇಬೇಕಿದೆ. ಆದಾಯ ತೆರಿಗೆ ಪಾವತಿಯಿಂದ ವಿನಾಯಿತಿ ದೊರೆತಿದೆ ಎಂದು ಹೇಳಿಕೊಳ್ಳುತ್ತಿರುವ ಆರ್‌ಎಸ್‌ಎಸ್‌ನವರು, ಯಾವ ನಿಯಮದಡಿ ತೆರಿಗೆ ಪಾವತಿಸದಂತೆ ಬ್ಲಾಂಕೆಟ್ ಯುಮಿನಿಟಿ ನೀಡಲಾಗಿದೆ ಎಂಬುದನ್ನು ಬಹಿರಂಗ ಪಡಿಸಲಿ.
ಕಾಂಗ್ರೆಸ್‌ಗೆ 140 ವರ್ಷ ಆಗಿದೆ ಎಂಬ ಕಾರಣಕ್ಕಾಗಿ ತೆರಿಗೆ ಪಾವತಿಸಲು ವಿನಾಯಿತಿ ಕೇಳಿದರೆ ಒಪ್ಪುತ್ತಾರೆಯೇ ಎಂದು ಕೇಳಿದರು. ಆರ್‌ಎಸ್‌ಎಸ್ ಮುಖ್ಯಸ್ಥರಿಗೆ ತಾವು ಬರೆದ ಪತ್ರವನ್ನು ಜೂನ್ 15ರಂದು ಬಹಿರಂಗ ಪಡಿಸಿದ್ದೇನೆ. ಜೂನ್ 13ರಂದು ತ್ರಿಶೂರ್‌ನಲ್ಲಿ ಮೋಹನ್ ಭಾಗತ್ ಅವರು ಸಮಜಾಯಿಷಿ ನೀಡಿರುವುದು ನನ್ನ ಪತ್ರಕ್ಕೆ ಅಲ್ಲ, ಈ ಮೊದಲು ಚಿತ್ತಾಪುರದಲ್ಲಿ ಪಥ ಸಂಚಲನಕ್ಕೆ ಅವಕಾಶ ಸಿಗದೇ ಇದ್ದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದಾರೆ. ತಮ ಪತ್ರಕ್ಕೆ ಅವರ ಕಡೆಯಿಂದ ಇನ್ನೂ ಪ್ರತಿಕ್ರಿಯೆ ಬಂದಿಲ್ಲ ಎಂದರು.
