ಗದಗ, ಜ.18- ನಿಧಿಗಳ ಪತ್ತೆಗಾಗಿ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನದ ವೇಳೆ ಇಂದು ಬೃಹತ್ ಸರ್ಪವೊಂದು ಕಾಣಿಸಿಕೊಂಡಿದ್ದು, ಅಲ್ಲಿದ್ದವರು ಬೆಚ್ಚಿಬಿದ್ದಿದ್ದಾರೆ.ಲಕ್ಕುಂಡಿಯಲ್ಲಿ ದೇವಸ್ಥಾನ, ಚಿನ್ನದ ನಾಣ್ಯಗಳನ್ನು ಮುದ್ರಿಸುತ್ತಿದ್ದ ಟಂಕಶಾಲೆ ಸೇರಿದಂತೆ ಹಲವು ಐತಿಹಾಸಿಕ ತಾಣಗಳಿದ್ದು, ಅದು ಮಣ್ಣಿನಲ್ಲಿ ಹೂತುಕೊಂಡಿದೆ ಎಂದು ಹೇಳಿದ್ದರು. ಅದರಂತೆ ಹಲವಾರು ಹಿಂದಿನ ಕಾಲದ ಪರಿಕರಗಳು ಪತ್ತೆಯಾಗುತ್ತಿವೆ. ಇಂದು ಅಗೆಯುವ ವೇಳೆ ದೊಡ್ಡ ಹಾವು ಕಾಣಿಸಿಕೊಂಡು ಎಲ್ಲರೂ ಅಲ್ಲಿಂದ ಓಡಿ ಹೋಗಿದ್ದಾರೆ.
ನಿಧಿಯನ್ನು ಸರ್ಪ ಕಾಯುತ್ತಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದರು. ಅದು ಈಗ ಸಾಬೀತಾಗಿದೆ ಎಂದು ಕೆಲವರು ತಿಳಿಸಿದ್ದಾರೆ.ಮಳೆಗಾಲದ ಸಂದರ್ಭದಲ್ಲಿ ಚಿನ್ನದ ತುಂಡುಗಳು ಕಾಣಿಸಿಕೊಳ್ಳುತ್ತಿದ್ದು, ಅದರ ಹಿಂದೆ ಹೋದವರು ರಕ್ತ ಕಾರಿ ಸಾಯುತ್ತಿದ್ದರು ಎಂದು ಗ್ರಾಮದ ಹಿರಿಯರು ಹೇಳುತ್ತಿದ್ದು, ಈಗ ಸರ್ಪ ಕಂಡಿರುವುದರಿಂದ ವಿವಿಧ ಅಭಿಪ್ರಾಯಗಳು ವ್ಯಕ್ತವಾಗಿವೆ.
ಇಂದು ಬೆಳಗ್ಗೆ ಏಕಾಏಕಿ ದೊಡ್ಡ ಗಾತ್ರದ ಸರ್ಪ ಕಾಣಿಸಿಕೊಂಡಿದ್ದರಿಂದ ಸ್ವಾಭಾವಿಕವಾಗಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಜೆಸಿಬಿ ಚಾಲಕ ಇದನ್ನು ನೋಡಿದ ತಕ್ಷಣ ಇತರರನ್ನು ಎಚ್ಚರಿಸಿ ಅಲ್ಲಿಂದ ಗಾಬರಿಗೊಂಡು ಓಡಿದ್ದಾನೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
