ಬೆಂಗಳೂರು,ಫೆ.10- ಪಿಎಸ್‌ಐ ನೇಮಕಾತಿ ಅಕ್ರಮದ ಬಳಿಕ ಇದೀಗ ಆರ್ಮಿ ಗ್ರೂಪ್ ಸಿ ಹುದ್ದೆ ಪರೀಕ್ಷೆಯಲ್ಲೂ ಅಕ್ರಮ ನಡೆದಿರುವುದು ನಗರದಲ್ಲಿ ಕಂಡು ಬಂದಿದೆ.ಫೆ.8 ರಂದು ಹಲಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರ್ಮಿ ಗ್ರೂಪ್ ಸಿ ಹುದ್ದೆಗೆ ಬೆಳಗ್ಗೆ 10 ಗಂಟೆಯಿಂದ 12 ಗಂಟೆಯವರೆಗೆ ಪರೀಕ್ಷೆ ನಡೆಯುತ್ತಿತ್ತು. ಈ ಪರೀಕ್ಷೆ ಬರೆಯಲು ಹರಿಯಾಣ ಸೇರಿದಂತೆ ವಿವಿಧ ರಾಜ್ಯಗಳಿಂದ ಅಭ್ಯರ್ಥಿಗಳು ಬಂದಿದ್ದರು.
ಪರೀಕ್ಷಾ ಕೇಂದ್ರದಲ್ಲಿ 18 ಅಭ್ಯರ್ಥಿಗಳು ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿ ಪರೀಕ್ಷೆ ಬರೆದಿದ್ದಾರೆಂದು ತಿಳಿದು ಬಂದಿದೆ. ಪರೀಕ್ಷೆ ಆವರಣದಲ್ಲಿ ಎಲೆಕ್ಟ್ರಾನಿಕ್ ಡಿವೈಸ್‌ಗಳು ಹಾಗೂ ಇಬ್ಬರು ಅಭ್ಯರ್ಥಿಗಳ ಬ್ಯಾಗ್‌ಗಳಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳು ಪತ್ತೆಯಾಗಿವೆ.
ಈ ಸಂಬಂಧ ಮೂರು ಮೊಬೈಲ್‌ಗಳು ಹಾಗೂ ಎಲೆಕ್ಟ್ರಿಕ್ ಡಿವೈಸ್ ವಶಕ್ಕೆ ಪಡೆಯಲಾಗಿದೆ.
ಈ ಸಂಬಂಧ ಪರೀಕ್ಷಾ ಕೇಂದ್ರದ ಕರ್ನಲ್, ಸೆಕ್ಯೂರಿಟಿ ಆಫೀಸರ್ ಹಲಸೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, 18 ಅಭ್ಯರ್ಥಿಗಳ ಮೇಲೆ ಎಫ್‌ಐಆರ್ ದಾಖಲಾಗಿದ್ದು, ಅವರೆಲ್ಲರನ್ನೂ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ವಿಕ್ರಮ್ ಅಮಟೆ ಈ ಸಂಜೆಗೆ ತಿಳಿಸಿದ್ದಾರೆ.
