ಬೆಂಗಳೂರು,ಫೆ.3- ಪ್ರಧಾನಿ ನರೇಂದ್ರ ಮೋದಿಯವರಿಗೆ ಅಪಮಾನವಾಗುವ ರೀತಿಯಲ್ಲಿ ಮಾತನಾಡಿರುವ ವಿಧಾನಪರಿಷತ್ ಸದಸ್ಯ ನಜೀರ್ ಅಹಮದ್ ವಿರುದ್ಧ ಕ್ರಮ ಕೈಗೊಳ್ಳಬೇಕು, ಈ ವಿಚಾರವನ್ನು ಸದನ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಮೇಲನೆ ಸದಸ್ಯ ಸಿ.ಟಿ.ರವಿ ಒತ್ತಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಸದನದ ಗೌರವ ಉಳಿಯುವುದಿಲ್ಲ. ನಾವು ಗೌರವ ಉಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಪದೇಪದೇ ತಪ್ಪೆಸಗುವ ಜನರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸೌದಿ ಅರೇಬಿಯಾ ಸೇರಿದಂತೆ 16ಕ್ಕೂ ಹೆಚ್ಚು ದೇಶಗಳು ತಮ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಮೋದಿಯವರಿಗೆ ಕೊಟ್ಟಿವೆ. ಅಂಥವರಿಗೆ ನಜೀರ್ ಅಹಮದ್ ಅವರು ಬಳಸಿರು ಪದ ಸರಿಯಲ್ಲ. ದೇಶದ್ರೋಹಿಗಳಿಗೆ ಗುನ್ನ ಹಾಕುವ ಕೆಲಸವನ್ನು ಪ್ರಧಾನಿ ಮಾಡಿದ್ದು, ನಕ್ಸಲ್, ಉಗ್ರವಾದ ಕೊನೆಗಾಣಿಸಲು ಕೆಲಸ ಮಾಡುತ್ತಿದ್ದಾರೆ. ದೇಶಭಕ್ತ ಪ್ರಧಾನಿ ಬಗ್ಗೆ ಅವರು ಮಾಡಿರುವ ಆರೋಪ ಸಹಿಸಲಾಗದು. ದೇಶಭಕ್ತರ ಬಗ್ಗೆ ಅವರು ಮಾಡಿರುವ ಆರೋಪದ ಬಗ್ಗೆ ಕಾಂಗ್ರೆಸ್ ಪಕ್ಷ ಉತ್ತರ ಕೊಡಬೇಕು. ಮೇಲನೆ ಸಭಾಪತಿಗಳು ಕ್ರಮ ಕೈಗೊಳ್ಳಬೇಕು.
ಈಗಾಗಲೇ ಅವರ ವಿರುದ್ಧ ಕ್ರಮ ಕೈಗೊಳ್ಳಲು ನಾವು ದೂರು ಕೊಟ್ಟಿದ್ದೇವೆ. ವಿವಾದ ಹುಟ್ಟುಹಾಕುವ ಕೆರಳಿಸುವ ಕೆಲಸವನ್ನು ಕಾಂಗ್ರೆಸ್ ವ್ಯವಸ್ಥಿತವಾಗಿ ಮಾಡಿಕೊಂಡು ಬಂದಿದೆ. ಅಬಕಾರಿ ಇಲಾಖೆ ಸಚಿವರ ಮೇಲಿನ ಭ್ರಷ್ಟಾಚಾರದ ಆರೋಪಕ್ಕೆ ಉತ್ತರ ಕೊಡಲು ಆಗಿಲ್ಲ. ಬಂಧಿತರಾಗಿರುವ ತಮಣ್ಣ ಯಾರ ಸಂಬಂಧಿ?, ಎಲ್ಲವನ್ನೂ ದುರ್ಬೀನ್ ಹಾಕಿಕೊಂಡು ಹುಡುಕುವುದು ಬೇಡ. ಸತ್ಯಾಂಶವಿದ್ದರೆ ಹೊರಗಡೆ ಬರುತ್ತದೆ. ವಿಷಯಾಂತರ ಮಾಡಲು ಈ ರೀತಿ ಮಾಡಿದ್ದಾರೆ. ಮೋದಿಯವರು ಏನೆಂಬುದು ದೇಶದ ಜನತೆಗೆ ಗೊತ್ತಿರುವುದರಿಂದಲೇ 3 ಬಾರಿ ಪ್ರಧಾನಿಯಾಗಿದ್ದಾರೆ ಎಂದು ಸಿ.ಟಿ.ರವಿ ಸಮರ್ಥಿಸಿಕೊಂಡರು.
