ಬೆಂಗಳೂರು,ಜ.18- ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಜಂಗಲ್ ರಾಜ್ ತಲೆ ಎತ್ತಿದ್ದು , ಪ್ರಾಮಾಣಿಕ ಅಧಿಕಾರಿಗಳಿಗೆ ಉಳಿಗಾಲವಿಲ್ಲ ಎಂಬ ವಾತಾವರಣ ನಿರ್ಮಾಣವಾಗಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ವಾಗ್ದಳಿ ಮಾಡಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಶಿಡ್ಲಘಟ್ಟದ ಪೌರಾಯುಕ್ತೆಯ ಮೇಲೆ ನಿಂದನೆ, ಬೆದರಿಕೆ ಪ್ರಕರಣ ಬೆನ್ನಲ್ಲೇ ಈಗ ಸಿಎಂ ಸಿದ್ದರಾಮಯ್ಯ ಅವರ ಸ್ವಕ್ಷೇತ್ರ ವರುಣಾದಲ್ಲಿ ಮಹಿಳಾ ಅಧಿಕಾರಿಯೊಬ್ಬರ ಮೇಲೆ ನಿಂದನೆ ನಡೆಸಿ, ಜೀವ ಬೆದರಿಕೆ ಹಾಕಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ ಎಂದು ಉಲ್ಲೇಖಿಸಿದ್ದಾರೆ.
ವರುಣಾ ಹೋಬಳಿ ಗುಡಮಾದನಹಳ್ಳಿ ಗ್ರಾಮದ ಬಳಿ ನಿಮ್ಹಾನ್‌್ಸ ಮಾದರಿಯ ಆಸ್ಪತ್ರೆ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಗುರುತಿಸಲಾದ ಜಮೀನು ಪರಿಶೀಲನೆಗಾಗಿ ತೆರಳಿದ್ದ ಭವ್ಯ ಎಂಬ ಮಹಿಳಾ ಅಧಿಕಾರಿ ವಿರುದ್ಧ ಸ್ಥಳೀಯ ಪುಡಾರಿಯೊಬ್ಬ ಜಗಳ ತೆಗೆದು ಕೊಲೆ ಬೆದರಿಕೆ ಹಾಕಿರುವ ಆಘಾತಕಾರಿ ಘಟನೆಯಿಂದ ರಾಜ್ಯದಲ್ಲಿ ಈಗಾಗಲೇ ಕುಸಿದಿರುವ ಅಧಿಕಾರಿಗಳ ಮನೋಬಲವನ್ನು ಮತ್ತಷ್ಟು ಕುಗ್ಗಿಸುವ ಅಪಾಯ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಚಿಕ್ಕಜಂತಕಲ್ ಗ್ರಾಮದ ಅಂಬೇಡ್ಕರ್ ಏರಿಯಾ ಮಹಿಳೆಯರು ಸಮುದಾಯ ಶೌಚಾಲಯಕ್ಕೆ ಹೋರಾಡಿ ಬೇಸತ್ತು ಈಗ ಬಯಲನ್ನೇ ಶೌಚಾಲಯ ಮಾಡಿಕೊಂಡು ಸೀರೆಯನ್ನೇ ಬಾಗಿಲು ಮಾಡಿಕೊಂಡಿರುವ ಮನಕಲಕುವ ಘಟನೆ ಕಾಂಗ್ರೆಸ್ ಪಕ್ಷದ ಆಷಾಢಭೂತನ, ಬೂಟಾಟಿಕೆಗೆ ಜೀವಂತ ಉದಾಹರಣೆಯಾಗಿದೆ. ದಶಕಗಳ ಕಾಲ ಕಲ್ಯಾಣ ಕರ್ನಾಟಕದ ಜನತೆಯ ಮೇಲೆ ಸವಾರಿ ಮಾಡಿ ಅಧಿಕಾರ, ಐಷಾರಾಮಿ ಜೀವನ ಅನುಭವಿಸಿದ ಸಚಿವ ಪ್ರಿಯಾಂಕ ಖರ್ಗೆ ಅವರ ಕುಟುಂಬದ ಸಾಧನೆಗೆ ಕನ್ನಡಿ ಹಿಡಿದಿದೆ ಎಂದು ಆರೋಪಿಸಿದ್ದಾರೆ.
ಅಂಬೇಡ್ಕರ್, ಗಾಂಧಿ, ದಲಿತರ ಹೆಸರಲ್ಲಿ ರಾಜಕೀಯ ಮಾಡುವ ಕಾಂಗ್ರೆಸ್ ಪಕ್ಷಕ್ಕೆ ಇದಕ್ಕಿಂತ ದೊಡ್ಡ ನಾಚಿಕೆಗೇಡಿನ ಸಂಗತಿ ಮತ್ತೊಂದು ಇರಲಿಕ್ಕಿಲ್ಲ.ಅಹಿಂದ ಹೆಸರಿನಲ್ಲಿ ಅತ್ಯಂತ ದೀರ್ಘಾವಧಿ ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿರುವ ಸಿಎಂ ಸಿದ್ದರಾಮಯ್ಯ ಅವರು, ಮಾತೆತ್ತಿದರೆ ಬುದ್ಧ, ಬಸವ, ಅಂಬೇಡ್ಕರ್ ಎಂದು ಭಾಷಣ ಬಿಗಿಯುವ ಸಚಿವ ಡಾ. ಹೆಚ್.ಸಿ ಮಹಾದೇವಪ್ಪ ಅವರು, ನಾನು ಈ ಭಾಗದಲ್ಲೇ ಹುಟ್ಟಬೇಕಿತ್ತು ಎಂದು ನಾಟಕವಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಚಿಕ್ಕಜಂತಕಲ್ ಗ್ರಾಮದ ಮಹಿಳೆಯ ಈ ಶೋಚನೀಯ ಪರಿಸ್ಥಿತಿಗೆ ಉತ್ತರಿಸುತ್ತರಾ? ಎಂದು ಅಶೋಕ್ ಪ್ರಶ್ನೆ ಮಾಡಿದ್ದಾರೆ.
