ಬೆಂಗಳೂರು, ಜ.18- ಹಾಸನದಲ್ಲಿ ಪಕ್ಷದ ಬೃಹತ್ ಸಮಾವೇಶ ನಡೆಸುವ ಮೂಲಕ ಶಕ್ತಿ ಪ್ರದರ್ಶನ ಮಾಡಲು ಜೆಡಿಎಸ್ ಮುಂದಾಗಿದೆ. ಜ.24ರಂದು ಬೃಹತ್ ಸಮಾವೇಶ ನಡೆಸುವ ಮೂಲಕ ಜೆಡಿಎಸ್ ನೆಲೆ ಭದ್ರವಾಗಿದೆ ಎಂಬುದನ್ನು ಸಾಬೀತುಪಡಿಸಲು ಉದ್ದೇಶಿಸಿದ್ದು, ಸಮಾವೇಶದ ಪೂರ್ವ ಸಿದ್ಧತೆಗಳು ಬರದಿಂದ ಸಾಗಿವೆ.
ಸುಮಾರು 2ಲಕ್ಷದಷ್ಟು ಜನರನ್ನು ಸೇರಿಸಿ ಸಮಾವೇಶ ಮಾಡಬೇಕು ಎಂಬುದು ಜೆಡಿಎಸ್ ವರಿಷ್ಠರ ನಿರ್ದೇಶನವಾಗಿದೆ. ಹೀಗಾಗಿ ಹಾಸನ ಜಿಲ್ಲೆಯ ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು ಹಾಗೂ ಪಕ್ಷದ ಪದಾಧಿಕಾರಿಗಳು, ಮುಖಂಡರು ಸಮಾವೇಶದ ಸಿದ್ಧತೆಯಲ್ಲಿ ತೊಡಗಿದ್ದಾರೆ.
ತಾಲ್ಲೂಕು ಹಾಗೂ ವಿಧಾನಸಭೆ ಕ್ಷೇತ್ರವಾರು ಸಭೆಗಳನ್ನು ನಡೆಸುವ ಮೂಲಕ ಸಮಾವೇಶದ ರೂಪು-ರೇಷೆ ಹಾಗೂ ಪೂರ್ವ ಸಿದ್ಧತೆಗಳ ಸಭೆ ನಡೆಸಿ ನಿರ್ದೇಶ ನೀಡಲಾಗಿದೆ. ಅಲ್ಲದೆ, ಮುಖಂಡರಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಹಾಸನದಲ್ಲಿ ಎರಡು ಸಮಾವೇಶ ನಡೆಸುವ ಮೂಲಕ ಪಕ್ಷ ಬಲವರ್ಧನೆಗ ಮುಂದಾಗಿದೆ. ಇದರಿಂದ ಜೆಡಿಎಸ್ ಭದ್ರಕೋಟೆಗೆ ಕಾಂಗ್ರೆಸ್ ನುಗ್ಗುತ್ತಿದೆ ಎಂದು ಭಾವಿಸಿರುವ ಜೆಡಿಎಸ್ ನಾಯಕರು, ಕಾಂಗ್ರೆಸ್‌ಗಿಂತ ಜೆಡಿಎಸ್ ನೆಲೆ ಗಟ್ಟಿಯಾಗಿದೆ ಎಂಬುದನ್ನು ಬಹಿರಂಗವಾಗಿ ತೋರಿಸುವ ಉದ್ದೇಶದಿಂದ ಸಮಾವೇಶ ನಡೆಸಲಾಗುತ್ತಿದೆ.
ಈಗಾಗಲೇ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಸಮಾವೇಶ ಕುರಿತು ಪಕ್ಷದ ಎರಡು -ಮೂರು ಸಭೆಗಳನ್ನು ನಡೆಸಿ ಸಲಹೆ-ಸೂಚನೆ ನೀಡಲಾಗಿದೆ. ಜೆಡಿಎಸ್ ನೆಲೆ ಕಳೆದುಕೊಳ್ಳುತ್ತಿದೆ ಎಂದು ಆರೋಪಿಸುವ ಕಾಂಗ್ರೆಸ್‌ಗೆ ಸಮಾವೇಶದ ಮೂಲಕವೇ ತಿರುಗೇಟು ನೀಡಲು ತೀರ್ಮಾನಿಸಲಾಗಿದೆ.
ಹಾಸನ ಮಾತ್ರವಲ್ಲದೆ, ಬೆಂಗಳೂರು ಹಾಗೂ ಉತ್ತರ ಕರ್ನಾಟಕ ಭಾಗದಲ್ಲೂ ಪಕ್ಷದ ಸಮಾವೇಶಗಳನ್ನು ನಡೆಸಲು ಉದ್ದೇಶಿಸಲಾಗಿದ್ದು, ಇನ್ನೂ ದಿನಾಂಕ ಹಾಗೂ ಸಮಯ ನಿಗದಿಯಾಗಿಲ್ಲ. ಎನ್‌ಡಿಎ ಮೈತ್ರಿಕೂಟದಲ್ಲಿ ಜೆಡಿಎಸ್ ಭಾಗಿಯಾಗಿದ್ದರೂ ತಳಮಟ್ಟದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡುವ ಉದ್ದೇಶ ಹೊಂದಿದ್ದು, ಅದಕ್ಕೆ ಪೂರಕವಾಗಿ ಸಭೆ, ಸಮಾವೇಶಗಳನ್ನು ಮಾಡಲಾಗುತ್ತದೆ ಎಂದು ಜೆಡಿಎಸ್ ಮೂಲಗಳು ಹೇಳಿವೆ.
