ಮೈಸೂರು,ಅ.3- ದಸರಾ ಮಹೋತ್ಸವಕ್ಕೆ ಹೊಸ ಸ್ಪರ್ಶ ನೀಡಲು ಈ ಬಾರಿ ಕರಾವಳಿಯ ಜನಪ್ರಿಯ ಕಂಬಳ ಕ್ರೀಡೆಯನ್ನು ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಕಂಬಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಅ.18 ರಂದು ಕಂಬಳ ಆಯೋಜಿಸಲು ಉದ್ದೇಶಿಸಲಾಗಿದೆ. ಸಂಪೂರ್ಣ ಜವಾಬ್ದಾರಿಯನ್ನು ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ವಹಿಸಿದ್ದು, ಜಿಲ್ಲಾಡಳಿತ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದರು.
ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಕಂಬಳಕ್ಕೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಜಿಲ್ಲಾಡಳಿತ ಕಲ್ಪಿಸಿಕೊಡಲಿದೆ. ಮುಖ್ಯಮಂತ್ರಿಗಳು ದಸರಾಗೆ ವಿಶೇಷ ಆಸಕ್ತಿ ವಹಿಸಿದ್ದು, ಹಣಕಾಸಿನ ನೆರವು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದರು.
ಶಾಸಕ ಅಶೋಕ್ ರೈ ಮಾತನಾಡಿ, 145 ಮೀಟರ್ ಉದ್ದದ ಟ್ರ್ಯಾಕ್ ಸಿದ್ಧಪಡಿಸಲಾಗುತ್ತಿದೆ. 150 ರಿಂದ 160 ಜೋಡಿ ಕೋಣಗಳು ಭಾಗವಹಿಸಲಿವೆ. ವಿಜೇತರಿಗೆ 16 ಗ್ರಾಂ ಹಾಗೂ 8 ಗ್ರಾಂ ಚಿನ್ನದ ಬಹುಮಾನ ನೀಡಲಾಗುವುದು. ವೀಕ್ಷಣೆಗೆ ಉಚಿತ ಪ್ರವೇಶವಿದ್ದು, 8 ಸಾವಿರ ಮಂದಿಗೆ ಆಸನ ವ್ಯವಸ್ಥೆ ಹಾಗೂ ವಿದೇಶಿ ಪ್ರವಾಸಿಗರಿಗೆ ವಿಶೇಷ ವ್ಯವಸ್ಥೆ ಇದೆ ಎಂದರು.
ಕಂಬಳದ ಜೊತೆಗೆ ಕರಾವಳಿ ಖಾದ್ಯಗಳ ಮಳಿಗೆಗಳು ಇರಲಿದ್ದು, ಅ.18 ರಂದು ಸಂಜೆ 6.30ಕ್ಕೆ ಉದ್ಘಾಟನೆಯಾಗಿ 19 ರ ಸಂಜೆವರೆಗೆ ನಿರಂತರವಾಗಿ ನಡೆಯಲಿದೆ ಎಂದು ಹೇಳಿದರು.
