ಸಕಲೇಶಪುರ,ಆ.4- ತಾಲ್ಲೂಕಿನಲ್ಲಿ ಮಳೆಯಿಂದ ಎಡಕುಮರಿ ಹಾಗೂ ಶಿರವಾಗಿಲು ನಡುವಿನ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತ ಉಂಟಾದ ಹಿನ್ನಲೆಯಲ್ಲಿ ಮಣ್ಣನ್ನು ತೆರವುಗೊಳಿಸಲಾಗಿದ್ದು, ಈ ಮಾರ್ಗದಲ್ಲಿ ರೈಲುಗಳು ಸಂಚಾರವನ್ನು ಪುನರಾರಂಭಿಸಿವೆ.
ಕಳೆದ ಶನಿವಾರ ರಾತ್ರಿ ಮಳೆಯಿಂದಾಗಿ ಬೆಟ್ಟದ ಮಣ್ಣು ಮತ್ತು ಬಂಡೆಗಳು ಕುಸಿದು ರೈಲ್ವೆ ಹಳಿ ಮೇಲೆ ಉರುಳಿಬಿದ್ದಿತ್ತು. ಇದರಿಂದ ಬೆಂಗಳೂರು, ಕರಾವಳಿ, ಕೇರಳ ಭಾಗವನ್ನು ಸಂಪರ್ಕಿಸುವ ಪ್ರಮುಖ ರೈಲುಗಳ ಸಂಚಾರ ಸಂಪೂರ್ಣವಾಗಿ ಬಂದ್ ಆಗಿತ್ತು.
ಕೂಡಲೇ ರೈಲ್ವೆ ಇಲಾಖೆಯ ತಾಂತ್ರಿಕ ತಂಡ ಹಾಗೂ ಕಾರ್ಮಿಕರು ಮಳೆಯ ನಡುವೆಯೂ ಮೂರುದಿನಗಳ ಹಗಲಿರುಳು ಕಾರ್ಯಾಚರಣೆ ನಡೆಸಿ ರೈಲ್ವೆ ಹಳಿ ಮೇಲೆ ಬಿದ್ದಿದ್ದ ಮಣ್ಣನ್ನು ಸಂಪೂರ್ಣವಾಗಿ ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದ್ದಾರೆ.ಗುಡ್ಡ ಕುಸಿತ ಉಂಟಾಗುವ ಪ್ರದೇಶಗಳಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವಂತೆ ರೈಲ್ವೆ ಇಲಾಖೆಯ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.
