Homeರಾಜ್ಯಪರಿಷತ್ ಚುನಾವಣೆ : ಅಡ್ಡ ಮತದಾನದ ಭೀತಿ, ಕಾಂಗ್ರೆಸ್ ಶಾಸಕರು ರೆಸಾರ್ಟ್‌ಗೆ ಶಿಫ್ಟ್

ಪರಿಷತ್ ಚುನಾವಣೆ : ಅಡ್ಡ ಮತದಾನದ ಭೀತಿ, ಕಾಂಗ್ರೆಸ್ ಶಾಸಕರು ರೆಸಾರ್ಟ್‌ಗೆ ಶಿಫ್ಟ್

Legislative Council elections: Fear of cross-voting, Congress MLAs shift to resort

ಬೆಂಗಳೂರು, ಜೂ. 16- ವಿಧಾನ ಸಭೆಯಿಂದ ವಿಧಾನ ಪರಿಷತ್ತಿನ ಏಳು ಸದಸ್ಯರ ಆಯ್ಕೆಗಾಗಿ ನಡೆಯುವ ಚುನಾವಣೆಯಲ್ಲಿ ಅಡ್ಡ ಮತದಾನದ ಭೀತಿಯಿಂದಾಗಿ ಕಾಂಗ್ರೆಸ್‌‍ ಪಕ್ಷ ಇಂದಿನಿಂದ ಎರಡು ದಿನಗಳ ಕಾಲ ತಮ್ಮ ಶಾಸಕರಿಗೆ ರೆಸಾರ್ಟ್‌ ವಾಸ್ತವ್ಯ ಕಡ್ಡಾಯಗೊಳಿಸಿದೆ.
ಬಿಡದಿಯ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಶಾಸಕರಿಗಾಗಿ 150 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ.

ಇಂದು ಸಂಜೆಯೊಳಗೆ ಎಲ್ಲಾ ಶಾಸಕರೂ ಇದೇ ತಿಂಗಳ 18ರ ವರೆಗೂ ವಾಸ್ತವ್ಯಕ್ಕೆ ಅಗತ್ಯವಾದ ಪೂರ್ವ ಸಿದ್ಧತೆಗಳೊಂದಿಗೆ ಆಗಮಿಸುವಂತೆ ಸೂಚನೆ ನೀಡಲಾಗಿದೆ.
ಸಂಜೆ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌‍ ಶಾಸಕಾಂಗ ಪಕ್ಷದ ನಾಯಕ ಡಿ.ಕೆ.ಶಿವಕುಮಾರ್‌ ಅವರ ಅಧ್ಯಕ್ಷತೆಯಲ್ಲಿ ಶಾಸಕಾಂಗ ಸಭೆ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಕಾಂಗ್ರೆಸ್‌‍ ಶಾಸಕಾಂಗ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಆಗಮಿಸುವ ನಿರೀಕ್ಷೆಯಿದೆ. ಕಾಂಗ್ರೆಸ್‌‍ ತನ್ನ ಸಂಖ್ಯಾ ಬಲವನ್ನು ಮೀರಿ 5ನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಮೊದಲ 4 ಅಭ್ಯರ್ಥಿಗಳಾದ ಬಿ.ಕೆ.ಹರಿಪ್ರಸಾದ್‌, ತಿಪ್ಪಣ್ಣಪ್ಪ ಕಮಕನೂರು, ಪಿ.ವಿ.ಮೋಹನ್‌, ಶಿವಣ್ಣ ಮಳವಳ್ಳಿ ಬಿ.ಎಸ್‌‍. ಕಣದಲ್ಲಿದ್ದಾರೆ.

ಹೆಚ್ಚುವರಿ 5ನೇ ಅಭ್ಯಥಿಯನ್ನಾಗಿ ಡಿ.ಕೆ.ಶಿವಕುಮಾರ್‌ ಅವರ ಆಪ್ತ ವಿನಯ್‌ ಕಾರ್ತಿಕ್‌ ಅವರನ್ನು ಕಣಕ್ಕಿಳಿಸಲಾಗಿದೆ. ವಿಧಾನ ಪರಿಷತ್‌ ಚುನಾವಣೆ ಕಾಂಗ್ರೆಸ್‌‍ ಪಾಲಿಗೆ ಪ್ರತಿಷ್ಠೆಯ ಕಣವಾಗಿದೆ. ಮುಖ್ಯಮಂತ್ರಿಯಾದ ಬಳಿಕ ಡಿ.ಕೆ.ಶಿವಕುಮಾರ್‌ ಅವರಿಗೆ ಮೊದಲ ಚುನಾವಣೆಯಾಗಿರುವುದರಿಂದ ಅಗ್ನಿ ಪರೀಕ್ಷೆ ಎಂದೇ ಭಾವಿಸಲಾಗಿದೆ.

ಕಾಂಗ್ರೆಸ್‌‍ ತನ್ನ ಬುಟ್ಟಿಯಲ್ಲಿ 134 ಅಧಿಕೃತ ಸದಸ್ಯರನ್ನು ಹೊಂದಿದೆ. ಪಕ್ಷೇತರರು, ಬಿಜೆಪಿಯ ಉಚ್ಛಾಟಿತರು ಹಾಗೂ ಜೆಡಿಎಸ್‌‍ ಅಥವಾ ಬಿಜೆಪಿಯ ಭಿನ್ನಮತಿಯ ಶಾಸಕರ ಬೆಂಬಲ ಪಡೆಯಲು ಪ್ರಯತ್ನಿಸಲಾಗುತ್ತಿದೆ.

ಮತ್ತೊಂದೆಡೆ ಬಿಜೆಪಿ ಮತ್ತು ಜೆಡಿಎಸ್‌‍ ಪಕ್ಷಗಳು ತಮ ಪಕ್ಷದ ಶಾಸಕರ ಮತಗಳನ್ನು ಕಾಪಾಡಿಕೊಳ್ಳಲು ಹಾಗೂ ಕಾಂಗ್ರೆಸ್‌‍ನಲ್ಲಿ ಅಸಮಾಧಾನಿತರನ್ನು ಸೆಳೆದು, ಜೆಡಿಎಸ್‌‍ ಅಭ್ಯರ್ಥಿ ಗೋವಿಂದರಾಜ್‌ ಅವರನ್ನು ಗೆಲ್ಲಿಸಿಕೊಳ್ಳಲು ತೆರೆಮರೆಯಲ್ಲಿ ಪ್ರಯತ್ನಿಸುತ್ತಿದೆ.
ಕಾಂಗ್ರೆಸ್‌‍ ತನ್ನ ಮೊದಲ ಸಾಲಿನ ನಾಲ್ವರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಮೂಲಕ ಬಾಕಿ ಉಳಿದ ಮತಗಳ ಜೊತೆಗೆ ಎರಡನೇ ಪ್ರಾಶಸ್ತ್ಯ ಮತಗಳೊಂದಿಗೆ 5ನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ.

ಜೆಡಿಎಸ್‌‍-ಬಿಜೆಪಿಯ ಭಿನ್ನಮತಿಯರು ಕೈಕೊಟ್ಟರೂ ತನ ಪಕ್ಷದ ಶಾಸಕರ 2ನೇ ಪ್ರಾಶಸ್ತ್ಯ ಮತಗಳಲ್ಲಿ 5ನೇ ಅಭ್ಯರ್ಥಿಯನ್ನು ಗೆಲ್ಲಿಸುವುದು ಡಿ.ಕೆ.ಶಿವಕುಮಾರ್‌ ಅವರ ತಂತ್ರಗಾರಿಕೆಯಾಗಿದೆ. ಹೀಗಾಗಿ ಯಾವ ರೀತಿ ಮತ ಚಲಾಯಿಸಬೇಕು ಎಂಬ ಬಗ್ಗೆ ಶಾಸಕರಿಗೆ ಮನದಟ್ಟಾಗುವಂತೆ 2 ದಿನಗಳ ಕಾಲ ತರಬೇತಿ ಆಯೋಜಿಸಲಾಗಿದೆ.

ರೆಸಾರ್ಟ್‌ ರಾಜಕೀಯವು ರಂಗೇರುತ್ತಿದೆ. ಈ ಹಿಂದೆ ಈಗಲ್‌ಟನ್‌ ರೆಸಾರ್ಟ್‌ನಲ್ಲೇ ಕಾಂಗ್ರೆಸ್‌‍ ಶಾಸಕಾಂಗ ಸಭೆ ಆಯೋಜಿಸಿದ್ದಾಗ ಮಧ್ಯರಾತ್ರಿ ಬಳ್ಳಾರಿ ಜಿಲ್ಲೆಯ ಶಾಸಕ ಕಂಪ್ಲಿ ಗಣೇಶ್‌, ವಿಜಯನಗರ ಶಾಸಕ ಆನಂದ್‌ ಸಿಂಗ್‌ ಮೇಲೆ ಹಲ್ಲೆ ಮಾಡಿ ವಿವಾದ ಸೃಷ್ಟಿಯಾಗಿತ್ತು. ಈ ಭಾರೀ ಅಂತಹ ಅವಘಡಗಳು ನಡೆಯದಂತೆ ಬೌನ್ಸರ್‌ಗಳು ಹಾಗೂ ಪೊಲೀಸ್‌‍ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಮಾಜಿ ಸಂಸದ ಡಿ.ಕೆ.ಸುರೇಶ್‌ ನೇತೃತ್ವದಲ್ಲಿ ಕೆಪಿಸಿಸಿಯ ಪದಾಧಿಕಾರಿಗಳು ರೆಸಾರ್ಟ್‌ ರಾಜಕೀಯದ ಉಸ್ತುವಾರಿ ನಿರ್ವಹಣೆ ಮಾಡುತ್ತಿದ್ದಾರೆ. ವಿಧಾನ ಪರಿಷತ್‌ ಚುನಾವಣೆಗೆ ರಹಸ್ಯ ಮತದಾನವಾಗಿರುವುದರಿಂದ ಕಾಂಗ್ರೆಸ್‌‍ ನಾಯಕರಿಗೆ ಒಳಗೊಳಗೆ ಆತಂಕ ಇದೆ. ಹೀಗಾಗಿ ಎಲ್ಲಾ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ.

RELATED ARTICLES

Latest News