ಬೆಂಗಳೂರು, ಸೆ.24- ಕೆಎಂಎಫ್ ನಂದಿನಿ ಹಾಲು ಹಾಗೂ ಇತರ ಉತ್ಪನ್ನಗಳ ದರವನ್ನು ಸರಿಸುಮಾರು ₹2ರಷ್ಟು ಹೆಚ್ಚಿಸಲು ರಾಜ್ಯ ಸರ್ಕಾರ ಅನುಮತಿಸುವ ಸಾಧ್ಯತೆ ಇದೆ. ವಿಧಾನಸಭೆ ಹಾಗೂ ವಿಧಾನಪರಿಷತ್ತಿನಲ್ಲಿ ಬರ ಪರಿಸ್ಥಿತಿ ಕುರಿತು ನಡೆದ ಚರ್ಚೆಯಲ್ಲಿ ಭಾಗವಹಿಸಿದ್ದ ಬಹುತೇಕ ಶಾಸಕರು ನಂದಿನಿ ಹಾಲಿನ ದರ ಹೆಚ್ಚಿಸಲು ಒತ್ತಡ ಹೇರಿದ್ದಾರೆ. ಆಡಳಿತ ಪಕ್ಷಗಳ ಸದಸ್ಯರಷ್ಟೇ ಅಲ್ಲದೆ, ವಿರೋಧ ಪಕ್ಷಗಳ ಸದಸ್ಯರಿಂದಲೂ ಇದೇ ಒತ್ತಾಯ ಕೇಳಿಬಂದಿದೆ.
ಹಾಲು ಮಹಾಮಂಡಳ ಹಾಗೂ ಅದರ ಒಕ್ಕೂಟಗಳು ಪ್ರತಿ ಲೀಟರ್‌ಗೆ ಸುಮಾರು ₹10 ದರ ಏರಿಕೆ ಮಾಡಬೇಕೆಂದು ಪಟ್ಟು ಹಿಡಿದಿವೆ. ನಾಳೆ ಕೆಎಂಎಫ್‌ನ ಆಡಳಿತ ಮಂಡಳಿ ಸಭೆ ನಡೆಯಲಿದ್ದು, ದರ ಏರಿಕೆಗೆ ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆಸಿವೆ. ಮುಂದಿನ ವಾರ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಹೋದರ ಡಿ.ಕೆ. ಸುರೇಶ್ ಅಧ್ಯಕ್ಷರಾಗುವ ಸಾಧ್ಯತೆ ಇದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಪಶು ಮೇವು ಹಾಗೂ ಇತರ ಹೈನುಗಾರಿಕೆ ವೆಚ್ಚಗಳು ದುಬಾರಿಯಾಗಿದ್ದು, ಹಾಲು ಉತ್ಪಾದಕರು ನಷ್ಟ ಅನುಭವಿಸುತ್ತಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಈ ನಷ್ಟವನ್ನು ಸರಿದೂಗಿಸಲು ಹಾಲಿನ ದರ ಏರಿಕೆಗೆ ಅನುಮತಿ ನೀಡಲೇಬೇಕು ಎಂಬ ಒತ್ತಡವಿದೆ. ಪಶು ಆಹಾರದ ಬೆಲೆ ಪ್ರತಿ ಚೀಲಕ್ಕೆ ₹720ರಿಂದ ₹1,250ರವರೆಗೆ ಏರಿಕೆಯಾಗಿದೆ.
ಹಾಲು ಒಕ್ಕೂಟಗಳೂ ನಷ್ಟದಲ್ಲಿದ್ದು, ಹಾಲಿನ ದರ ಏರಿಕೆಗೆ ಅನುಮತಿ ನೀಡದಿದ್ದರೆ ಸರ್ಕಾರವೇ ನಷ್ಟದ ಹಣವನ್ನು ಭರಿಸಿಕೊಡಬೇಕು ಎಂಬ ಬೇಡಿಕೆ ಕೇಳಿಬರುತ್ತಿದೆ. ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದ್ದು, ಹಾಲಿನ ಪ್ರೋತ್ಸಾಹಧನ ಬಿಡುಗಡೆ ಮಾಡಲು ಪರದಾಡುತ್ತಿದೆ. ಹೀಗಿರುವಾಗ ನಷ್ಟದ ಮೊತ್ತವನ್ನು ಭರಿಸಿಕೊಡಬೇಕು ಎಂದು ಕೇಳಿದರೆ, ಸದ್ಯದ ಪರಿಸ್ಥಿತಿಯಲ್ಲಿ ಅದು ಅಸಾಧ್ಯದ ಮಾತು ಎಂದು ಹೇಳಲಾಗುತ್ತಿದೆ.
ಹಾಲು ಒಕ್ಕೂಟಗಳಿಗೆ ಪ್ರತಿದಿನ 1.11 ಕೋಟಿ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಪ್ರಸ್ತುತ ಪ್ರತಿ ಲೀಟರ್ ಹಾಲನ್ನು ₹35 ದರದಲ್ಲಿ ಉತ್ಪಾದಕರಿಂದ ಖರೀದಿಸಲಾಗುತ್ತಿದೆ. ರಾಷ್ಟ್ರಮಟ್ಟದಲ್ಲಿ ಸರಾಸರಿ ಪ್ರತಿ ಲೀಟರ್ ಹಾಲನ್ನು ₹41ರ ದರದಲ್ಲಿ ಖರೀದಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ₹8ರಿಂದ ₹10ರಷ್ಟು ದರ ಏರಿಕೆ ಮಾಡಿದರೆ ರೈತರು ಹಾಗೂ ಹಾಲು ಉತ್ಪಾದಕರು ಅನುಭವಿಸುತ್ತಿರುವ ನಷ್ಟವನ್ನು ಸರಿಪಡಿಸಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.
ಇದೇ ವೇಳೆ ಪ್ರತಿ ಲೀಟರ್ ಹಾಲಿಗೆ ಸರ್ಕಾರ ನೀಡುತ್ತಿರುವ ಪ್ರೋತ್ಸಾಹಧನವನ್ನು ₹5ರಿಂದ ₹8ಕ್ಕೆ ಹೆಚ್ಚಿಸಬೇಕು ಎಂಬ ಒತ್ತಾಯವೂ ಇದೆ. ಹಾಲು ಒಕ್ಕೂಟಗಳ ಪ್ರಮುಖರು ಎರಡು ದಿನಗಳ ಹಿಂದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಹಾಲಿನ ದರ ಹೆಚ್ಚಳಕ್ಕೆ ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ.
ಹಾಲಿನ ದರ ಹೆಚ್ಚಳದಿಂದ ರೈತರಿಗೆ ಅನುಕೂಲವಾಗಲಿದೆ. ಗ್ರಾಮೀಣ ಭಾಗದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇದು ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಗಬಹುದು ಎಂಬ ಲೆಕ್ಕಾಚಾರವೂ ನಡೆದಿದೆ ಎನ್ನಲಾಗಿದೆ. ಆದರೆ ಹಾಲು ಖರೀದಿಸುವ ಗ್ರಾಹಕರಿಗೆ ಹೊರೆಯಾಗುವುದನ್ನು ಪರಿಗಣಿಸಿ ₹10ರ ಬದಲಿಗೆ ₹2ರಷ್ಟು ದರ ಹೆಚ್ಚಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
