ಹುಬ್ಬಳ್ಳಿ, ಮಾ.16-ಇಲ್ಲಿಯ ಸಿದ್ಧೇಶ್ವರ ಪಾರ್ಕ್‌ನ ಶಿವಸಾಗರ ಹೋಟೆಲ್‌ನಲ್ಲಿ ಅನಧಿಕೃತವಾಗಿ ಸಂಗ್ರಹಿಸಿಟ್ಟುಕೊಂಡಿದ್ದ ವಾಣಿಜ್ಯ ಬಳಕೆಯ ಅನಿಲದ ಸಿಲಿಂಡರ್‌ಗಳನ್ನು ಆಹಾರ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಪೊಲೀಸ್ ಸಹಕಾರದೊಂದಿಗೆ ತಡರಾತ್ರಿ ದಾಳಿ ನಡೆಸಿದ ಅಧಿಕಾರಿಗಳು, ಅನಿಲ ತುಂಬಿದ 25 ಸಿಲಿಂಡರ್‌ಗಳನ್ನು ಪತ್ತೆ ಹಚ್ಚಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಅಗತ್ಯ ವಸ್ತುಗಳ ಅಕ್ರಮ ದಾಸ್ತಾನು ಕಾಯ್ದೆಯಡಿ ಹೋಟೆಲ್ ಸಹ ಮಾಲೀಕ ಸತೀಶ ಬಂಡಿ ವಿರುದ್ಧ ಆಹಾರ ನಿರೀಕ್ಷಕ ವಿಜಯಕುಮಾರ ಪತ್ತಾರ ದೂರು ನೀಡಿದ್ದಾರೆ.
ಗೋ ಗ್ಯಾಸ್ ಕಂಪನಿಯಿಂದ ಪೂರೈಕೆಯಾಗುವ ಅನಿಲದ ಸಿಲಿಂಡರ್‌ಗಳನ್ನು ಹೋಟೆಲ್‌ನಲ್ಲಿ ಹೆಚ್ಚುವರಿಯಾಗಿ ದಾಸ್ತಾನು ಮಾಡಲಾಗಿತ್ತು. ಎಲ್ಲಿಂದ ಪೂರೈಕೆಯಾಗಿದೆ ಎನ್ನುವ ಕುರಿತು ತನಿಖೆ ನಡೆಯುತ್ತಿದೆ ಎಂದು ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾರು ಇಲಾಖೆ ವಿಜಯಕುಮಾರ ಹೆಗ್ಗಳಗಿ ತಿಳಿಸಿದರು.
45 ಸಿಲಿಂಡರ್‌ಗಳು ಜಪ್ತಿ :
ಗ್ಯಾಸ್ ಏಜೆನ್ಸಿ ಮಳಿಗೆಯೊಂದರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಖಾಸಗಿ ಕಂಪನಿಯ 45 ಸಿಲಿಂಡರ್‌ಗಳನ್ನು ಪೀಣ್ಯಾ ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ.ಬೆಂಗಳೂರು ಉತ್ತರ ತಾಲ್ಲೂಕು ಆಹಾರ ನಿರೀಕ್ಷರಾದ ಪ್ರಸನ್ನ ಕುಮಾರ್ ಅವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳಾದ ರಾಮಾಚಾರ್ ಮತ್ತು ಶಮಂತ್ ಅವರೊಂದಿಗೆ ಚೊಕ್ಕಸಂದ್ರ ಮುಖ್ಯ ರಸ್ತೆಯಲ್ಲಿರುವ ಶ್ರೀ ವಿನಾಯಕ ಗ್ಯಾಸ್ ಏಜೆನ್ಸಿ ಮಳಿಗೆ ಮೇಲೆ ದಾಳಿ ಮಾಡಿದಾಗ ಮಳಿಗೆಯಲ್ಲಿ ಯಾವುದೇ ಅಧಿಕೃತ ಪರವಾನಗಿ ಇಲ್ಲದೇ ಅಕ್ರಮವಾಗಿ ದಾಸ್ತಾನು ಮಾಡಿದ 45 ಸಿಲಿಂಡರ್‌ಗಳು ಕಂಡು ಬಂದಿವೆ.
ಗ್ಯಾಸ್ ವಿತರಣೆಗೆ ಸಂಬಂಧಿಸಿದ ಅಧಿಕೃತ ಡೀಲರ್‌ಶಿಪ್ ದಾಖಲೆಗಳು, ಬಿಲ್‌ಗಳನ್ನು ಮಳಿಗೆಯಲ್ಲಿದ್ದ ಜನಾರ್ದನ್ ಎಂಬುವವರು ಅಧಿಕಾರಿಗಳ ಮುಂದೆ ಹಾಜರು ಪಡಿಸಲು ವಿಫಲರಾಗಿದ್ದಾರೆ.
ಅಲ್ಲದೇ ಜನನಿಬಿಡ ಪ್ರದೇಶದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಅನಿಲ ಸಿಲಿಂಡರ್‌ಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿರುವುದು ಕಂಡು ಬಂದ ಹಿನ್ನಲೆಯಲ್ಲಿ ಪೀಣ್ಯಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಎಎಸ್‌ಐ ವೆಂಕಟೇಶ್ ಅವರು, ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, 45 ಗ್ಯಾಸ್ ಸಿಲಿಂಡರ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಮಳಿಗೆಯ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
