ಧಾರವಾಡ,ಜೂ.8- ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್ ದರ ಏರಿಕೆಯಿಂದ ಕೇಂದ್ರ ಸರ್ಕಾರಕ್ಕೂ ಬೇಸರವಾಗಿದೆ. ಆದರೆ ಪ್ರಸ್ತುತ ಜಾಗತಿಕ ಪರಿಸ್ಥಿತಿಯನ್ನು ಗಮನಿಸಿದರೆ ದರ ಏರಿಕೆ ಅನಿವಾರ್ಯವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾಸ್ ಸಿಲಿಂಡರ್ ದರ ಹೆಚ್ಚಳದ ಬಗ್ಗೆ ನಮಗೂ ತುಂಬಾ ದುಃಖ ಮತ್ತು ವಿಷಾದವಿದೆ. ಆದರೆ ಟೀಕಿಸುವ ಮೊದಲು ಜಗತ್ತಿನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಇಡೀ ವಿಶ್ವವೇ ಗಂಭೀರ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಹೇಳಿದರು.
ದೇಶೀಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 29 ಹೆಚ್ಚಿಸಲಾಗಿದೆ.
ಕಳೆದ ಮೂರು ತಿಂಗಳಲ್ಲಿ ಇದು ಎರಡನೇ ಬಾರಿ ದರ ಏರಿಕೆಯಾಗಿದ್ದು, ಜಾಗತಿಕ ಇಂಧನ ವೆಚ್ಚಗಳ ಏರಿಕೆಯಿಂದ ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಒತ್ತಡಕ್ಕೆ ಒಳಗಾಗಿವೆ.
ಪ್ರಸ್ತುತ ಎಲ್‌ಪಿಜಿ ಪೂರೈಕೆ ಕೆಲವೇ ಮೂಲಗಳಿಂದ ಲಭ್ಯವಾಗುತ್ತಿದೆ. ಜಾಗತಿಕ ಸಾಗಾಣಿಕೆ (ಟ್ರಾನ್‌್ಸಶಿಪ್‌ಮೆಂಟ್) ವ್ಯವಸ್ಥೆಯೂ ಅಸ್ತವ್ಯಸ್ತಗೊಂಡಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ತೊಂದರೆಯಾಗದಂತೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೊಸ ಪೂರೈಕೆ ಮೂಲಗಳನ್ನು ಹುಡುಕುತ್ತಿದೆ ಎಂದು ಜೋಶಿ ಹೇಳಿದರು.
ಭಾರತ ಈಗ ದೂರದ ದೇಶಗಳಿಂದ ಎಲ್‌ಪಿಜಿ ಖರೀದಿ ಮಾಡುತ್ತಿರುವುದರಿಂದ ಸಾರಿಗೆ ವೆಚ್ಚ ಹೆಚ್ಚಾಗಿದೆ. ಮೂಲ ಬೆಲೆಯೂ ಏರಿಕೆಯಾಗಿದೆ. 40 ರಿಂದ 45ದಿನಗಳ ಸಾಗಾಣಿಕೆಯಿಂದ ವಿಮಾ ವೆಚ್ಚವೂ ಹೆಚ್ಚಾಗಿದೆ ಎಂದು ಅವರು ವಿವರಿಸಿದರು.ಸಾಮಾನ್ಯ ಜನರ ಸಂಕಷ್ಟದ ಬಗ್ಗೆ ನಮಗೂ ಕಾಳಜಿ ಇದೆ. ಆದರೆ ಇಂತಹ ಪರಿಸ್ಥಿತಿಯಲ್ಲಿ ದರ ಏರಿಕೆ ಅನಿವಾರ್ಯವಾಗಿದೆ ಎಂದು ಅವರು ಹೇಳಿದರು.
ಇತ್ತೀಚಿನ ಪರಿಷ್ಕರಣೆಯ ಮೊದಲು ಪ್ರತಿ ಎಲ್‌ಪಿಜಿ ಸಿಲಿಂಡರ್ ಮಾರಾಟದ ಮೇಲೆ ಸರ್ಕಾರಿ ತೈಲ ಕಂಪನಿಗಳಿಗೆ ಸುಮಾರು 703 ನಷ್ಟವಾಗುತ್ತಿತ್ತು ಎಂದು ಅಂದಾಜಿಸಲಾಗಿತ್ತು.
ಪಶ್ಚಿಮ ಏಷ್ಯಾದ ಯುದ್ಧ ಪರಿಸ್ಥಿತಿಯಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್‌ಪಿಜಿ ದರಗಳು ತೀವ್ರವಾಗಿ ಏರಿಕೆಯಾಗಿದ್ದರೂ, ಭಾರತೀಯ ಕುಟುಂಬಗಳು ಜಗತ್ತಿನಲ್ಲೇ ಕಡಿಮೆ ಬೆಲೆಯಲ್ಲಿ ಅಡುಗೆ ಅನಿಲ ಪಡೆಯುತ್ತಿರುವ ದೇಶಗಳಲ್ಲಿ ಒಂದಾಗಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಭಾರತದ ಎಲ್‌ಪಿಜಿ ಆಮದು ವೆಚ್ಚವು ಜಾಗತಿಕ ಮಾನದಂಡವಾದ ಸೌದಿ ಕಾಂಟ್ರಾಕ್ಟ್ ಪ್ರೈಸ್‌ಆಧಾರಿತವಾಗಿದೆ. ಪರ್ಷಿಯನ್ ಕೊಲ್ಲಿಯ ಪೂರೈಕೆ ಮೇಲೆ ಪರಿಣಾಮ ಬೀರಿದ ಹೊರ್ಮಜ್ ಜಲಸಂಧಿ ಪ್ರದೇಶದ ಅಡಚಣೆಗಳಿಂದ ಫೆಬ್ರುವರಿಯಿಂದ ಈ ಮಾನದಂಡದ ಬೆಲೆ ಸುಮಾರು 46 ಶೇಕಡಾ ಏರಿಕೆಯಾಗಿದೆ ಎಂದು ಸರ್ಕಾರ ತಿಳಿಸಿದೆ.
ರಾಜ್ಯದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಗುಂಪುಗಾರಿಕೆ ಹೆಚ್ಚಾಗಿದೆ ಎಂದು ಇದೇ ವೇಳೆ ಕರ್ನಾಟಕ ಸರ್ಕಾರದ ವಿರುದ್ಧವೂ ಜೋಶಿ ವಾಗ್ದಾಳಿ ನಡೆಸಿದರು. ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಒಬ್ಬ ಸಚಿವ ರಾಜೀನಾಮೆ ನೀಡಿದರು. ಇನ್ನೂ ಕೆಲವರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಿಂದ ಸರ್ಕಾರ ಮತ್ತು ಆಡಳಿತದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಜೋಶಿ ಹೇಳಿದರು.
