Sunday, April 19, 2026
Homeರಾಜ್ಯಗ್ಯಾಸ್ ಟ್ರಬಲ್ : ಭಾನುವಾರದ ಬಾಡೂಟಕ್ಕೆ ಬ್ರೇಕ್‌

ಗ್ಯಾಸ್ ಟ್ರಬಲ್ : ಭಾನುವಾರದ ಬಾಡೂಟಕ್ಕೆ ಬ್ರೇಕ್‌

LPG Shortage hit sunday meals

ಬೆಂಗಳೂರು,ಮಾ.15- ವಾಣಿಜ್ಯ ಸಿಲಿಂಡರ್‌ ಸಮಸ್ಯೆ ಇನ್ನೂ ಬಗೆಹರಿಯದ ಹಿನ್ನಲೆಯಲ್ಲಿ ನಗರದಲ್ಲಿ ಕೆಲ ನಾನ್‌ವೆಜ್‌ ಹೋಟೆಲ್‌ಗಳು ಬಂದ್‌ ಆಗಿದ್ದು, ಭಾನುವಾರದ ಬಾಡೂಟಕ್ಕೆ ಬ್ರೇಕ್‌ ಬಿದ್ದಂತಾಗಿದೆ.

ಬಹುತೇಕ ನಗರ ನಿವಾಸಿಗಳು ಭಾನುವಾರ ರಜಾ ದಿನ. ಅಡುಗೆ ಮಾಡೋಗೋಜಿಗೆ ಹೋಗುವುದಿಲ್ಲ. ಹೋಟೆಲ್‌ನಲ್ಲಿ ಪಾರ್ಸೆಲ್‌ ತಂದು ತಿಂದ್ರಾಯಿತು ಎಂದವರಿಗೆ ಗ್ಯಾಸ್‌‍ ಟ್ರಬಲ್‌ ಉಂಟಾಗಿದೆ.

ಕೆಲವು ನಾನ್‌ವೆಜ್‌ ಹೋಟೆಲ್‌ಗಳಲ್ಲಿ ಸೌಧೆಯಲ್ಲಿ ಅಡುಗೆ ಮಾಡಲಾಗುತ್ತಿದೆ ಆದರೂ ಕೆಲವು ಐಟಂಗಳಿಗೆ ಮಾತ್ರ ಸೀಮಿತ ಮಾಡಲಾಗಿದೆ. ಪಾರ್ಸೆಲ್‌ ನಿಲ್ಲಿಸಲಾಗಿದೆ.ಭಾನುವಾರ ಹೆಚ್ಚಾಗಿ ವ್ಯಾಪಾರವಾಗುವ ನಾನ್‌ವೆಜ್‌ ಹೋಟೆಲ್‌ಗಳೇ ಬಂದ್‌ ಆಗಿದೆ.

ಸಿಲಿಂಡರ್‌ ಅಭಾವದಿಂದ ದೋಸೆ, ಚಪಾತಿ, ಪರೋಟ, ಕಬಾಬ್‌, ಸೂಪ್‌, ನಂತಹ ಖಾದ್ಯಗಳನ್ನು ನಿಲ್ಲಿಸಲಾಗಿದ್ದು, ಕೆಲವು ಕಡೆ ಬಿರಿಯಾನಿ ಮಾತ್ರ ತಯಾರು ಮಾಡಲಾಗುತ್ತಿದ್ದು, ಬಾಡೂಟ ಸವಿಯಲು ಆಸೆಯಿದ್ದ ಗ್ರಾಹಕರಿಗೆ ನಿರಾಸೆಯಾದಂತಾಗಿದೆ.ಈ ಹಿನ್ನೆಲೆಯಲ್ಲಿ ಬಹುತೇಕ ಜನರು ಮನೆಯಲ್ಲೇ ನಾನ್‌ವೆಜ್‌ ತಯಾರಿಸಿ ಸವಿದಿದ್ದಾರೆ.

ಇಡ್ಲಿಗೆ ಸಾಂಬರ್‌ ಡಿಪ್‌ ಇಲ್ಲ:
ಸಿಲಿಂಡರ್‌ ಪೂರೈಕೆ ವ್ಯತ್ಯೆಯ ನಡುವೆಯೂ ಕೆಲ ಹೋಟೆಲ್‌ಗಳು ಬೆಳಗ್ಗೆ ತಿಂಡಿಯಷ್ಟೇ ಮಾಡಿದ್ದು, ಇಲ್ಲಿ ಇಡ್ಲಿಗೆ ಸಾಂಬರ್‌ ಡಿಪ್‌ ಮಾಡುತ್ತಿಲ್ಲ. ಪ್ರತ್ಯೇಕವಾಗಿ ಚಟ್ನಿ ಹಾಗೂ ಒಂದು ಕಪ್‌ ಸಾಂಬರ್‌ ಕೊಡುತ್ತಿದ್ದಾರೆ.ಇನ್ನೂ ವೆಜ್‌ ಹೋಟೆಲ್‌ಗಳಲ್ಲಿ ಪೂರಿ, ಚಪಾತಿ, ದೋಸೆಯನ್ನು ಸಂಪೂರ್ಣವಾಗಿ ಬಂದ್‌ ಮಾಡಲಾಗಿದೆ.

ತರಕಾರಿ ವ್ಯಾಪಾರವಿಲ್ಲ:
ನಗರದಲ್ಲಿ ಬಹುತೇಕ ಹೋಟೆಲ್‌ಗಳು ಬಾಗಿಲು ಹಾಕಿದ್ದು, ತರಕಾರಿ ಮಾರಾಟಗಾರರಿಗೂ ಹೊಡೆತ ಬಿದ್ದಿದೆ. ಸಾಮಾನ್ಯ ದಿನಗಳಲ್ಲಿ ಮಾರಾಟವಾಗುತ್ತಿದ್ದ ತರಕಾರಿಗಳು ಕಳೆದ ಮೂರ್ನಾಲ್ಕು ದಿನಗಳಿಂದ ವ್ಯಾಪಾರವಾಗದೇ ಒಣಗುತ್ತಿವೆ.

ಹೋಟೆಗಳು ತೆರೆದಿದ್ದರೆ ವ್ಯಾಪಾರವಾಗುತ್ತಿತ್ತು. ಆದರೆ ಅಡುಗೆ ಅನಿಲ ವ್ಯತ್ಯಯದಿಂದ ದೊಡ್ಡ ದೊಡ್ಡ ಹೋಟೆಲ್‌ಗಳಿಂದ ಹಿಡಿದು ಕೆಲ ಹೋಟೆಲ್‌ಗಳು ಬಂದ್‌ ಆಗಿದ್ದು, ವ್ಯಾಪಾರ ಇಲ್ಲದಂತಾಗಿದೆ ಎಂದು ರಾಜಾಜಿನಗರದ ತರಕಾರಿ ವ್ಯಾಪಾರಿ ಹನುಮಂತರಾಜು ಎಂಬುವವರು ತಿಳಿಸಿದ್ದಾರೆ.

ಮೀನು ಮಾರಾಟ ಕುಂಠಿತ
ಬೆಂಗಳೂರು,ಮಾ.15- ಎಲ್‌ಪಿಜಿ ವಾಣಿಜ್ಯ ಸಿಲಿಂಡರ್‌ಗಳ ಕೊರತೆಯಿಂದ ನಗರದ ಹೋಟೆಲ್‌ ಹಾಗೂ ರೆಸ್ಟೋರೆಂಟ್‌ ಉದ್ಯಮಗಳು ಕುಂಠಿತವಾಗಿದ್ದು, ಇದರ ನೇರ ಪರಿಣಾಮ ಮೀನಿನ ಮಾರುಕಟ್ಟೆಗಳ ಮೇಲೆ ಬೀರಿದ್ದು, ದಿನನಿತ್ಯ ಹೋಟೆಲ್‌ಗಳಿಗೆ ಸರಬರಾಜಾಗುತ್ತಿದ್ದ ಮೀನುಗಳಿಗೆ ಈಗ ಬೇಡಿಕೆ ಕಡಿಮೆಯಾಗಿರುವುದರಿಂದ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ನಗರದ ಪ್ರಮುಖ ಮಾರುಕಟ್ಟೆಯಾಗಿರುವ ಶಿವಾಜಿನಗರದ ರಸೆಲ್‌ ಮೀನು ಮಾರುಕಟ್ಟೆಯಲ್ಲಿರುವ ಸುಮಾರು 150ಕ್ಕೂ ಹೆಚ್ಚು ಮೀನಿನ ವ್ಯಾಪಾರಿಗಳು ವ್ಯಾಪಾರ ಇಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ಹೋಟೆಲ್‌ ಹಾಗೂ ರೆಸ್ಟೋರೆಂಟ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಮೀನುಜಔ ಖರೀದಿ ಮಾಡುತ್ತಿದ್ದರು. ಈಗ ಖರೀದಿ ಪ್ರಮಾಣ ಕಡಿಮೆ ಮಾಡಿರುವುದಾಗಿ ವ್ಯಾಪಾರಿಗಳು ತಿಳಿಸಿದ್ದಾರೆ.

ಮೊದಲು 10 ಕೆಜಿ, 20 ಕೆಜಿ, 30 ಕೆಜಿ ಮೀನುಗಳನ್ನು ಖರೀದಿ ಮಾಡುತ್ತಿದ್ದ ಹೋಟೆಲ್‌ಗಳು, ಈಗ 3ರಿಂದ 4 ಕೆಜಿ ಮಾತ್ರ ತೆಗೆದುಕೊಳ್ಳುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಪರಿಣಾಮ ಮಾರುಕಟ್ಟೆಯಲ್ಲಿ ಮೀನುಗಳ ಮಾರಾಟ ಕುಂಠಿತಗೊಂಡಿದೆ.

ಇನ್ನೊಂದೆಡೆ ಬೇಸಿಗೆ ಆರಂಭವಾಗಿರುವ ಹಿನ್ನೆಲೆ ಮೀನಿನ ಬೆಲೆಗಳೂ ಏರಿಕೆಯಾಗಿವೆ. ಮಾರುಕಟ್ಟೆಯಲ್ಲಿ ಎಲ್ಲಾ ರೀತಿಯ ಮೀನುಗಳ ಬೆಲೆಯಲ್ಲಿ ಶೇ.40ರಷ್ಟು ಹೆಚ್ಚಳವಾಗಿದೆ. ಇದರಿಂದ ಗ್ರಾಹಕರ ಮೇಲೂ ಹೆಚ್ಚುವರಿ ಹೊರೆ ಬಿದ್ದಿದೆ.

ಸಾಮಾನ್ಯವಾಗಿ ರಸೆಲ್‌ ಮಾರುಕಟ್ಟೆಯಲ್ಲಿ ದಿನನಿತ್ಯ ಸುಮಾರು 20 ಟನ್‌ ಮೀನು ವ್ಯಾಪಾರ ನಡೆಯುತ್ತಿತ್ತು. ಆದರೆ ಈಗ ವ್ಯಾಪಾರ ಕುಸಿತಗೊಂಡಿರುವುದರಿಂದ ಮಾರುಕಟ್ಟೆಯಲ್ಲಿರುವ ಸುಮಾರು 220 ಅಂಗಡಿಗಳು ಖಾಲಿ ಖಾಲಿ ಕಾಣಿಸುತ್ತಿವೆ. ವ್ಯಾಪಾರ ಇಲ್ಲದೆ ಬೇಸರ ವ್ಯಕ್ತಪಡಿಸಿದ ವ್ಯಾಪಾರಿಗಳು, ಖರೀದಿ ಮಾಡಿರುವ ಮೀನುಗಳು ಮಾರಾಟವಾಗದೆ ಉಳಿಯುತ್ತಿರುವುದರಿಂದ ನಷ್ಟದ ಭೀತಿ ಎದುರಿಸುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿಲಿಂಡರ್‌ ಕೊರತೆ ಸಮಸ್ಯೆ ಶೀಘ್ರದಲ್ಲೇ ಬಗೆಹರಿಯದಿದ್ದರೆ, ಹೋಟೆಲ್‌ ಉದ್ಯಮದ ಜೊತೆಗೆ ಮೀನಿನ ವ್ಯಾಪಾರಕ್ಕೂ ಇನ್ನಷ್ಟು ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

RELATED ARTICLES

Latest News