Homeರಾಜ್ಯಮನ್‌ಮುಲ್‌‍ ಹಾಲಿನ ಪುಡಿ ಕಲಬೆರಕೆ ಪ್ರಕರಣ : ಮಾಜಿ ಅಧ್ಯಕ್ಷ ಶಿವಪ್ಪ ಬಂಧನ

ಮನ್‌ಮುಲ್‌‍ ಹಾಲಿನ ಪುಡಿ ಕಲಬೆರಕೆ ಪ್ರಕರಣ : ಮಾಜಿ ಅಧ್ಯಕ್ಷ ಶಿವಪ್ಪ ಬಂಧನ

ಮಂಡ್ಯ,ಅ.5- ರಾಜ್ಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ ಮನ್‌ಮುಲ್‌‍ ನಂದಿನಿ ಹಾಲಿನ ಪುಡಿ ಕಲಬೆರಕೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಲ್ಲಿ ಮಂಡ್ಯ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಉಮ್ಮಡಹಳ್ಳಿ ಶಿವಪ್ಪ ಅವರನ್ನು ಮದ್ದೂರು ಪೊಲೀಸರು ತಡರಾತ್ರಿ ಬಂಧಿಸಿದ್ದಾರೆ.

ಪ್ರಕರಣದಲ್ಲಿ ಶಿವಪ್ಪ ಅವರ ಪಾತ್ರವಿರುವುದು ಮೇಲ್ನೋಟಕ್ಕೆ ದೃಢಪಟ್ಟ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದು, ಇಂದು ಮದ್ದೂರು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ.

ಪ್ರಕರಣದ ಪ್ರಮುಖ ಆರೋಪಿ ಪ್ರದೀಪ್‌ ಕುಮಾರ್‌ ಜಾದವ್‌‍, ಒಬ್ಬ ನಿರ್ದೇಶಕರೊಂದಿಗೆ ನಡೆಸಿದ್ದ ಎನ್ನಲಾದ ಆಡಿಯೋ ಸಂಭಾಷಣೆಯಲ್ಲಿ ಹಾಲಿನ ಪುಡಿ ಕಲಬೆರಕೆ ಅಕ್ರಮದಲ್ಲಿ ಶಿವಪ್ಪ ಅವರ ಪಾತ್ರದ ಬಗ್ಗೆ ಪ್ರಸ್ತಾಪಿಸಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಜಾದವ್‌ ಅವರನ್ನು ಪೊಲೀಸರು ಮತ್ತೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

ಬಳಿಕ ಜಾದವ್‌ ಮತ್ತು ಮಾಜಿ ಅಧ್ಯಕ್ಷ ಶಿವಪ್ಪ ಅವರನ್ನು ಮುಖಾಮುಖಿಯಾಗಿ ಕೂರಿಸಿ ವಿಚಾರಣೆ ನಡೆಸಲಾಯಿತು. ಈ ವೇಳೆ ಜಾದವ್‌ ಅವರು ಶಿವಪ್ಪ ವಿರುದ್ಧ ಅಕ್ರಮದ ಆರೋಪಗಳನ್ನು ಮಾಡಿದ್ದು, ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ.

ವಿಚಾರಣೆ ವೇಳೆ ಶಿವಪ್ಪ ಅವರ ಪಾತ್ರಕ್ಕೆ ಸಂಬಂಧಿಸಿದಂತೆ ಮಹತ್ವದ ಸುಳಿವುಗಳು ದೊರೆತ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆದು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಈಗಾಗಲೇ ಪ್ರದೀಪ್‌ ಕುಮಾರ್‌ ಜಾದವ್‌ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದರು. ಇದೀಗ ಶಿವಪ್ಪ ಅವರ ಬಂಧನದೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ.
ಅಕ್ರಮ ಜಾಲದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ತನಿಖೆ ಮುಂದುವರಿದಿದ್ದು, ಮತ್ತಷ್ಟು ಮಂದಿಯನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.

RELATED ARTICLES
spot_img

Latest News