Saturday, April 18, 2026
Homeರಾಜ್ಯಮೆಟ್ರೋ ದರ ಹೆಚ್ಚಳ ಜಟಾಪಟಿ : ರಾಜಕೀಯ ಲಾಭ ಪಡೆಯಲು ಪರಸ್ಪರ ಹವಣಿಕೆ

ಮೆಟ್ರೋ ದರ ಹೆಚ್ಚಳ ಜಟಾಪಟಿ : ರಾಜಕೀಯ ಲಾಭ ಪಡೆಯಲು ಪರಸ್ಪರ ಹವಣಿಕೆ

Metro fare hike controversy: Mutual taunting to gain political benefits

ಬೆಂಗಳೂರು, ಫೆ.7- ಜನ ಸಾಮಾನ್ಯರ ತೀವ್ರ ವಿರೋಧದ ಬಳಿಕ ಮೇಟ್ರೋ ದರ ಹೆಚ್ಚಳದಲ್ಲಿ ಕೊಂಚ ಕಡಿಮೆ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಗ್ಗಜಗ್ಗಾಟದ ಮೂಲಕ ಮೇಟ್ರೋ ಪ್ರಯಾಣ ದರ ಹೆಚ್ಚಳ ಮಾಡಿ ಜನರ ಗಾಯದ ಮೇಲೆ ಬರೆ ಎಳೆಯಲು ಮುಂದಾಗಿದ್ದವು.

ಬೆಂಗಳೂರಿನ ಮೆಟ್ರೋದಲ್ಲಿ ಒಂದು ಟರ್ಮಿನಲ್‌ ನಿಂದ ಮತ್ತೊಂದು ಟರ್ಮಿನಲ್‌ಗೆ ಪ್ರಯಾಣಿಸಲು ಕನಿಷ್ಠ 90 ರೂಪಾಯಿ ಖರ್ಚು ಮಾಡಬೇಕಿದೆ. ಹೋಗಿ ಬರಲು ಪಾರ್ಕಿಂಗ್‌ ಶುಲ್ಕವೂ ಸೇರಿ ಸರಾಸರಿ 250 ರೂಪಾಯಿ ಖರ್ಚಾಗುವ ಸನ್ನಿವೇಶ ಸೃಷ್ಟಿಯಾಗಿತ್ತು.
ಅಷ್ಟು ಹಣ ಕೊಡುವ ಬದಲು ಮೂರು ಜನ ಸೇರಿ ಆಟೋದಲ್ಲಿ ಪ್ರಯಾಣಿಸಿದರೆ ಇನ್ನೂ ಕಡಿಮೆ ಹಣ ವೆಚ್ಚವಾಗುವ ಅಂದಾಜುಗಳಿದ್ದವು.

ಇತ್ತೀಚೆಗೆ ಹೈಕೋರ್ಟ್‌ ಆದೇಶದ ಮೇರೆಗೆ ಬೈಕ್‌ ಟ್ಯಾಕ್ಸಿ ಸೇವೆ ರಾಜಾರೋಷವಾಗಿ ಪುನರ್‌ ಆರಂಭಗೊಂಡಿತ್ತು. ಅದು ಎಲ್ಲದಕ್ಕಿಂತಲೂ ಅಗ್ಗ ಮತ್ತು ಮನೆಬಾಗಿಲಿಗೆ ಸೇವೆ ದೊರೆಯುತ್ತಿತ್ತು. ಹಾಗಾಗಿ ಜನ ಸರ್ಕಾರಕ್ಕೆ ಹಿಡಿ ಶಾಪ ಹಾಕಿ, ಮೆಟ್ರೋಕ್ಕೆ ವಿರುದ್ಧ ಮುಖ ಮಾಡಿದ್ದರು. ಬಿಎಂಟಿಸಿ ಸೇವೆಯನ್ನೂ ಅಧ್ವಾನ ಮಾಡಿ, ಸರ್ಕಾರ ಜನರಿಗೆ ಬೇರೆ ಆಯ್ಕೆಗಳಿಲ್ಲದಂತೆ ಮಾಡಿತ್ತು.

ಅದಕ್ಕಾಗಿ ಮೆಟ್ರೋ ಪ್ರಯಾಣ ಜನಪ್ರಿಯತೆ ಗಳಿಸಿತ್ತು. ಆದರೆ ಅಲ್ಲಿ ವರ್ಷಕ್ಕೆ ಎರಡು ಬಾರಿ ಪ್ರಯಾಣ ದರ ಹೆಚ್ಚಳ ಮಾಡಿ ಜನರ ಸಹನೆ ಕೆಡಿಸಲಾಗುತ್ತಿದೆ. ಈಗಾಗಲೇ ಜನ ಮೆಟ್ರೋ ಪ್ರಯಾಣದಿಂದ ಹಿಮುಖವಾಗಿದ್ದರು. ಫೆಬ್ರವರಿ 9ರಿಂದ ಶೇ.5ರಷ್ಟು ದರ ಹೆಚ್ಚಳವಾದ ಬಳಿಕ ಮತ್ತಷ್ಟು ಪ್ರಯಾಣಿಕರ ಸಂಖ್ಯೆ ತಗ್ಗುವ ಸಾಧ್ಯತೆ ಇತ್ತು.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮೆಟ್ರೋ ದರ ಹೆಚ್ಚಳ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿವೆ. ಬಿಜೆಪಿಯ ಸಂಸದರು, ಕೇಂದ್ರ ಸರ್ಕಾರ ತನ್ನ ಪಾಲಿನ ಅನುದಾನವನ್ನು ಬಿಎಂಆರ್‌ಸಿಎಲ್‌ಗೆ ಬಿಡುಗಡೆ ಮಾಡುತ್ತಿದೆ. ಆದರೆ ರಾಜ್ಯ ಸರ್ಕಾರ ದಿವಾಳಿಯಾಗಿದ್ದು, ತನ್ನ ಪಾಲಿನ ಹಣವನ್ನು ಕಾಲಕಾಲಕ್ಕೆ ನೀಡುತ್ತಿಲ್ಲ. ಅದಕ್ಕಾಗಿ ನಿರ್ವಹಣಾ ವೆಚ್ಚವನ್ನು ಸರಿದೂಗಿಸಲು ಬಿಎಂಆರ್‌ಸಿಎಲ್‌ ಸಂಸ್ಥೆ ದರ ಹೆಚ್ಚಳ ಮಾಡುತ್ತಿದೆ ಎಂದು ವಾದಿಸುತ್ತಿದ್ದಾರೆ.

ಗ್ಯಾರಂಟಿಗಳಿಗೆ ಹಣ ನೀಡಿ ಬೊಕ್ಕಸ ಬರಿದು ಮಾಡಿಕೊಂಡಿರುವ ಕಾಂಗ್ರೆಸ್‌‍ ಸರ್ಕಾರವೇ ಮೆಟ್ರೋ ದರ ಹೆಚ್ಚಳಕ್ಕೆ ಹೊಣೆ ಎಂಬುದು ಬಿಜೆಪಿಯ ವಾದ.ಇದಕ್ಕೆ ವ್ಯತಿರಿಕ್ತವಾಗಿ ಕಾಂಗ್ರೆಸ್‌‍ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದೆ. ಬಿಎಂಆರ್‌ಸಿಎಲ್‌ ದರ ಪರಿಷ್ಕರಣೆ ಸಮಿತಿಗೆ ಕೇಂದ್ರ ಸರ್ಕಾರದ ಅಧಿಕಾರಿಯೇ ಅಧ್ಯಕ್ಷರು ಎಂದು ಹೇಳುತ್ತಿದೆ. ಆದರೆ ಸಮಿತಿಯಲ್ಲಿ ರಾಜ್ಯ ಸರ್ಕಾರದ ನಾಲ್ವರು ಅಧಿಕಾರಿಗಳು ಇದ್ದಾರೆ ಎಂಬ ಕಾರಣಕ್ಕೆ ಹೊಣೆಗಾರಿಕೆ ಯಾರದು ಎಂಬ ಪ್ರಶ್ನೆ ಪದೇ ಪದೇ ಕಾಡುತ್ತಿದೆ.

ಹತ್ತು ತಿಂಗಳ ಹಿಂದೆ ಬಿಎಂಆರ್‌ಸಿಎಲ್‌ ಶೇ.105ರಷ್ಟು ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆಗ ಬಿಜೆಪಿಯ ಸಂಸದರು ಪ್ರಧಾನಮಂತ್ರಿ ಸೇರಿದಂತೆ ಕೇಂದ್ರದ ಹಲವು ಸಚಿವರಿಗೆ ಪತ್ರ ಬರೆದಿದ್ದರು. ನಂತರ ಪ್ರಯಾಣ ದರ ಏರಿಕೆ ಶೇ.71ರಷ್ಟಾಗಿತ್ತು. ದರ ಹೆಚ್ಚಳ ಕಡಿಮೆಯಾಗಲು ನಾವೇ ಕಾರಣ, ನಮ ಪ್ರಯತ್ನದಿಂದಲೇ ಇದು ಸಾಧ್ಯವಾಯಿತು ಎಂದು ಬಿಜೆಪಿ ನಾಯಕರು ಹೇಳಿಕೊಂಡಿದ್ದರು.

ಆದರೆ ಈಗ ಪರಸ್ಪರ ಕೆಸರು ಎರಚಾಟ ನಡೆಯುತ್ತಿದೆ. ಕೇಂದ್ರ ಸರ್ಕಾರ ಮೆಟ್ರೋ ಯೋಜನೆಗೆ ಶೇ.12 ರಿಂದ 20ರಷ್ಟು ಮಾತ್ರ ಅನುದಾನ ನೀಡುತ್ತಿದೆ. ಮೂಲ ಒಪ್ಪಂದದಂತೆ ಶೇ.50ರಷ್ಟು ವೆಚ್ಚ ಭರಿಸಲಿ ಎಂದು ರಾಜ್ಯ ಸರ್ಕಾರ ಆಗ್ರಹಿಸುತ್ತಿದೆ.

ಈ ಬಾರಿ ಶೇ.5ರಷ್ಟು ದರ ಹೆಚ್ಚಳ ಮಾಡಿರುವುರಿಂದ ಅದರಲ್ಲೂ ಕಡಿಮೆ ಮಾಡಿಸಲು ಬಿಜೆಪಿ ಸಂಸದರು ಹಿಂದೇಟು ಹಾಕುತ್ತಿದ್ದಾರೆ. ಈ ಬಾರಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಾವೇ ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿದ್ದಾರೆ.

ಬಿಎಂಆರ್‌ಸಿಎಲ್‌ ಮೆಟ್ರೋ ಪ್ರಯಾಣ ದರ ಹೆಚ್ಚಳ ಮಾಡಿರುವುದು ತಮ ಗಮನಕ್ಕೆ ಬಂದಿಲ್ಲ. ನನಗೆ ಅಧಿಕೃತವಾಗಿ ಯಾವುದೇ ಮಾಹಿತಿಯನ್ನೂ ನೀಡಿಲ್ಲ ಎಂದು ಡಿ.ಕೆ.ಶಿವಕುಮಾರ್‌ ಹೇಳುತ್ತಿದ್ದಾರೆ.ಈಗಾಗಲೇ ಬೆಂಗಳೂರಿನಲ್ಲಿ ನೀರಿನ ಕರ, ಆಸ್ತಿ ತೆರಿಗೆ, ಬಸ್‌‍ ಪ್ರಯಾಣ ದರ ಹೀಗೆ ನಾನಾ ಹೆಚ್ಚಳಗಳಿಂದ ಜನ ಬೇಸತ್ತು ಹೋಗಿದ್ದಾರೆ.ಮುಂದಿನ ದಿನಗಳಲ್ಲಿ ನಡೆಯುವ ಗ್ರೇಟರ್‌ ಬೆಂಗಳೂರು ಹಾಗೂ ಇತರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜನರ ಉತ್ತರ ಬೇರೆಯಾಗಿರಬಹುದು ಎಂಬ ಆತಂಕ ಸರ್ಕಾರವನ್ನು ಕಾಡುತ್ತಿದೆ.

ಅದಕ್ಕಾಗಿ ಮೆಟ್ರೋ ದರ ಹೆಚ್ಚಳದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಮಾಡಿ, ರಾಜ್ಯ ಸರ್ಕಾರ ಜನಪರವಾಗಿದೆ ಎಂದು ಬಿಂಬಿಸಿಕೊಳ್ಳುವ ಯತ್ನಗಳು ನಡೆದಿವೆ.ಮಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಡಿ.ಕೆ.ಶಿವಕುಮಾರ್‌, ಮೆಟ್ರೋ ದರ ಬಗ್ಗೆ ತೀರ್ಮಾನ ಮಾಡಲು ಪ್ರತ್ಯೇಕ ಸಮಿತಿ ಇದೆ. ಕೇಂದ್ರ ಸರ್ಕಾರದ ಕಾರ್ಯದರ್ಶಿ ಇದರ ಮುಖ್ಯಸ್ಥರು. ಮೆಟ್ರೋ ದರ ಏರಿಕೆ ವಿಚಾರವಾಗಿ ನಮ ಅಭಿಪ್ರಾಯವನ್ನು ಕೇಳಿಲ್ಲ ಎಂದಿದ್ದಾರೆ.

ನಾನು ಬೆಂಗಳೂರಿಗೆ ಮರಳಿದ ಬಳಿಕ ಈ ಬಗ್ಗೆ ಚರ್ಚೆ ಮಾಡುತ್ತೇನೆ. ಜನರಿಗೆ ತೊಂದರೆ ನೀಡಲು ನಮಗೆ ಇಷ್ಟವಿಲ್ಲ. ಆರ್ಥಿಕ ಸ್ಥಿತಿಗತಿ ಪರಿಶೀಲನೆ ಮಾಡುತ್ತೇನೆ ಎಂದು ಹೇಳುವ ಮೂಲಕ ಈಗ ಹೆಚ್ಚಳವಾಗಿರುವುದರಲ್ಲಿ ಕೊಂಚ ಪ್ರಮಾಣದಲ್ಲಿ ಕಡಿಮೆ ಮಾಡುವ ಸುಳಿವು ನೀಡಿದ್ದಾರೆ. ಬಿಜೆಪಿ ನಾಯಕರು ಇದರ ರಾಜಕೀಯ ಲಾಭ ಪಡೆಯುವ ಮುನ್ನವೇ ತಾವೇ ಸಕ್ರಿಯವಾಗಬೇಕು ಎಂಬ ತಂತ್ರಗಾರಿಕೆಯನ್ನು ಕಾಂಗ್ರೆಸ್‌‍ ಅನುಸರಿಸುತ್ತಿದೆ.

RELATED ARTICLES

Latest News