ಬೆಂಗಳೂರು, ಜು.3- ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ನಿನ್ನೆ ತಡ ರಾತ್ರಿ ನಗರದಲ್ಲಿ ಗಸ್ತು ತಿರುಗುವ ಮೂಲಕ ಸ್ವಚ್ಛತೆ, ಸಂಚಾರ ದಟ್ಟಣೆ, ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು.
ಸಚಿವರ ನೈಟ್ ರೌಂಡ್್ಸ ವೇಳೆ ಅಧಿಕಾರಿಗಳ ಕಳ್ಳಾಟ ಪತ್ತೆಯಾಗಿದ್ದು ಕೆಲವರನ್ನು ಸ್ಥಳದಲ್ಲೇ ತರಾಟೆಗೆ ತೆಗೆದುಕೊಳ್ಳಲಾಯಿತು. ಸಿಲ್ಕ್ ಬೋರ್ಡ್ ಜಂಕ್ಷನ್ನಿಂದ ಬೈಯ್ಯಪ್ಪನಹಳ್ಳಿ ಮೆಟ್ರೋ ನಿಲ್ದಾಣದವರೆಗೆ ರಸ್ತೆ ಸಮಗ್ರ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಸಂಬಂಧ, ಲೋರಿ ಜಂಕ್ಷನ್ನಿಂದ ಇಬ್ಲೂರು ಜಂಕ್ಷನ್ವರೆಗೆ ಸಚಿವರು ಸ್ಥಳ ಪರಿಶೀಲನೆ ನಡೆಸಿದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊರ ವರ್ತುಲ ರಸ್ತೆ ಸಮಗ್ರ ಅಭಿವೃದ್ಧಿ ಯೋಜನೆಯ ವಿನ್ಯಾಸವನ್ನು ಸ್ಥಳೀಯ ನಾಗರಿಕರೊಂದಿಗೆ ಸಮಾಲೋಚನೆ ನಡೆಸಿ ಅಂತಿಮಗೊಳಿಸಲಾಗುವುದು ಎಂದರು.
ನಗರದ ಅತ್ಯಂತ ಸಂಚಾರ ದಟ್ಟಣೆ ಹೊಂದಿರುವ ರಸ್ತೆಗಳಲ್ಲಿ ಹೊರ ವರ್ತುಲ ರಸ್ತೆಯೂ ಒಂದಾಗಿದೆ. ಈ ರಸ್ತೆಯನ್ನು ಸುಮಾರು 450 ಕೋಟಿ ರೂ. ವೆಚ್ಚದಲ್ಲಿ ಪುನರ್ ನಿರ್ಮಿಸಿ ಅಭಿವೃದ್ಧಿಪಡಿಸಲು ಮುಖ್ಯ ಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಉದ್ದೇಶಿಸಿದ್ದಾರೆ. ಆದರೆ, ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ಮೊದಲು ಸಂಚಾರ ದಟ್ಟಣೆ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಹಿಡಿಯುವುದು ಅಗತ್ಯವೆಂದು ಹೇಳಿದರು.
ಹೊರ ವರ್ತುಲ ರಸ್ತೆಯುದ್ದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಅಪಾರ್ಟ್ಮೆಂಟ್ಗಳು, ಕಂಪನಿಗಳು ಹಾಗೂ ವಾಣಿಜ್ಯ ಚಟುವಟಿಕೆಗಳು ಇರುವುದರಿಂದ ಸ್ಥಳೀಯ ಪರಿಸ್ಥಿತಿಯನ್ನು ಸಮಗ್ರವಾಗಿ ಅಧ್ಯಯನ ಮಾಡಿ ರಸ್ತೆ ವಿನ್ಯಾಸ ರೂಪಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ವಿನ್ಯಾಸ ಸಿದ್ಧಪಡಿಸಿದ ನಂತರ ಸ್ಥಳೀಯ ನಾಗರಿಕರೊಂದಿಗೆ ಸಮಾಲೋಚನೆ ನಡೆಸಿ ಅಂತಿಮ ವಿನ್ಯಾಸವನ್ನು ನಿರ್ಧರಿಸಲಾಗುವುದು ಎಂದು ತಿಳಿಸಿದರು.
ಸ್ಥಳ ಪರಿಶೀಲನೆಯಿಂದ ರಸ್ತೆಯ ಸಂಪೂರ್ಣ ಸ್ಥಿತಿಗತಿಗಳ ಕುರಿತು ಸ್ಪಷ್ಟ ಚಿತ್ರಣ ದೊರೆತಿದೆ. ಅದಕ್ಕೆ ಅನುಗುಣವಾಗಿ ರಸ್ತೆ ವಿನ್ಯಾಸವನ್ನು ಅಂತಿಮಗೊಳಿಸಿ, ಅಗತ್ಯ ಅನುಮೋದನೆಗಳ ನಂತರ ಅಭಿವೃದ್ಧಿ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿ 2 ಸಾವಿರ ಕೋಟಿ ರೂ. ವೆಚ್ಚದಲ್ಲಿ 260 ಕಿ.ಮೀ. ಉದ್ದದ ರಾಜ ಕಾಲುವೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಮಳೆ ನೀರಿನ ಪ್ರವಾಹ ಪರಿಸ್ಥಿತಿ ಉಂಟಾಗುವ ಸ್ಥಳಗಳಲ್ಲಿ ಆದ್ಯತೆ ಮೇರೆಗೆ ಕಾಮಗಾರಿ ಕೈಗೊಳ್ಳಲಾಗುವುದು, ಶೀಘ್ರವೇ ಕೆಲಸ ಆರಂಭಿಸಲು ಮುಖ್ಯಮಂತ್ರಿಯವರು ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.
ತರಾಟೆ:
ರಸ್ತೆಯನ್ನು ಅಗೆದಿರುವ ಕುರಿತು ಸಚಿವರು ಪ್ರಶ್ನೆ ಕೇಳಿದಾಗ ಬಿಡಬ್ಲ್ಯೂಎಸ್ಎಸ್ಬಿ ಕೆಲಸಕ್ಕಾಗಿ ಅಗೆಯಲಾಗಿದೆ ಎಂದು ಅಧಿಕಾರಿ ಉತ್ತರಿಸಿದರು. ಆದರೆ ಸ್ಥಳದಲ್ಲೇ ಇದ್ದ ಬಿಡಬ್ಲ್ಯೂಎಸ್ಎಸ್ಬಿ ಅವರು ಇದು ತಮ ಕೆಲಸವಲ್ಲ ಎಂದು ಸ್ಪಷ್ಟನೆ ನೀಡಿದರು. ತಕ್ಷಣವೇ ಅಧಿಕಾರಿ ಮಾತು ಬದಲಿಸಿ ಬೆಸ್ಕಾಂನವರ ಮೇಲೆ ಹೇಳಿದರು. ಅವರೂ ಕೂಡ ನಿರಾಕರಣೆ ಮಾಡಿದಾಗ ಸಚಿವರು ಸಿಟ್ಟಾದರು. ಅಧಿಕಾರಿ ತಬ್ಬಿಬ್ಬಾದರು. ಓಎಫ್ಸಿ ಕೇಬಲ್ನವರು ರಸ್ತೆ ಅಗೆಯಲು ಅವಕಾಶ ಮಾಡಿಕೊಟ್ಟು ಸರ್ಕಾರದ ವಿವಿಧ ಇಲಾಖೆಗಳ ಮೇಲೆ ಸುಳ್ಳು ಹೇಳುತ್ತೀರಾ? ಎಂದು ಕೃಷ್ಣಭೈರೇಗೌಡರವರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ಜಲಮಂಡಳಿ ಅಧ್ಯಕ್ಷರಾದ ಮಂಜುಳಾ, ವಿಶೇಷ ಆಯುಕ್ತರಾದ ನಿತೀಶ್, ನಗರ ಪಾಲಿಕೆ ಆಯುಕ್ತರಾದ ರಮೇಶ್ ಡಿ.ಎಸ್. ಹಾಗೂ ರಮೇಶ್ ಕೆ.ಎನ್., ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ಕಾರ್ತಿಕ್ ರೆಡ್ಡಿ, ಅಪರ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್, ಬಿ-ಸೈಲ್ ತಾಂತ್ರಿಕ ನಿರ್ದೇಶಕರಾದ ಡಾ. ಬಿ.ಎಸ್. ಪ್ರಹ್ಲಾದ್, ವಿವಿಧ ಹಿತಾಸಕ್ತಿದಾರರು ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
