Homeರಾಜ್ಯಮಾದಪಟ್ಟಣ ಕ್ವಾರಿ ದುರಂತ : ಮ್ಯಾನೇಜರ್‌ ಸೇರಿ ಮೂವರ ಬಂಧನ

ಮಾದಪಟ್ಟಣ ಕ್ವಾರಿ ದುರಂತ : ಮ್ಯಾನೇಜರ್‌ ಸೇರಿ ಮೂವರ ಬಂಧನ

Madapatna quarry tragedy: Three arrested including manager

ಬೆಂಗಳೂರು,ಜು.3- ಮಾದಪಟ್ಟಣ ಗ್ರಾಮದ ಬಳಿಯ ಕಾವೇರಿ ಕ್ವಾರಿಯಲ್ಲಿ ಕಲ್ಲು ಬಂಡೆ ಬಿದ್ದು ಏಳು ಮಂದಿ ಕಾರ್ಮಿಕರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವರೆಕೆರೆ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಬಸವೇಶ್ವರ ಕ್ವಾರಿಯನ್ನು ಉಪ ಗುತ್ತಿಗೆಗೆ ತೆಗೆದುಕೊಂಡಿದ್ದ ಪಾಂಡುರಂಗ ಮತ್ತು ಮ್ಯಾನೇಜರ್‌ ಉಮಾಪತಿ ಹಾಗೂ ಕಾವೇರಿ (ಉದಯ್‌)ಕ್ವಾರಿಯ ಮ್ಯಾನೇಜರ್‌ ರಾಜು ಬಂಧಿತ ಆರೋಪಿಗಳು.

ಈ ಪ್ರಕರಣದಲ್ಲಿ ಇನ್ನಷ್ಟು ಆರೋಪಿಗಳನ್ನು ಸದ್ಯದಲ್ಲೇ ಬಂಧಿಸಲಾಗುವುದು, ಇಡೀ ಘಟನೆಗೆ ಕಾರಣರಾದ ಬಸವೇಶ್ವರ ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ಜೆಸಿಬಿಯ ಚಾಲಕ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.
ಮೃತಪಟ್ಟ ಏಳು ಮಂದಿ ಕಾರ್ಮಿಕರಲ್ಲಿ ನಾಲ್ವರ ಶವ ಪರೀಕ್ಷೆ ನಡೆದಿದ್ದು, ಮೃತದೇಹಗಳನ್ನು ಅವರ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.

ಉಳಿದ ಮೂರು ಶವಗಳು ಆರ್‌ಆರ್‌ ಆಸ್ಪತ್ರೆಯ ಶವಗಾರದಲ್ಲಿ ಇವೆ. ಅವರ ಸಂಬಂಧಿಕರು ಅಥವಾ ಪೋಷಕರು ಬಂದ ತಕ್ಷಣ ಶವ ಪರೀಕ್ಷೆ ನಡೆಸಲಿದ್ದಾರೆ.ಗಾಯಗೊಂಡ ಐವರು ಕಾರ್ಮಿಕರು ಆರ್‌ ಆರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಿನ್ನೆ ಬೆಳಗ್ಗೆ 7.30 ರ ಸಮಯದಲ್ಲಿ ಕಾವೇರಿ (ಉದಯ್‌) ಕ್ವಾರಿಯಲ್ಲಿ ಬಂಡೆಗಳು ಕುಸಿದು ಬಿದ್ದು ಏಳು ಮಂದಿ ಕಾರ್ಮಿಕರು ಸಾವನ್ನಪ್ಪಿದ್ದು, ನಾಲ್ಕು ವಾಹನಗಳು ಜಖಂಗೊಂಡಿವೆ.
ಈ ಘಟನೆ ಬಗ್ಗೆ ತಾವರೆಕೆರೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES
spot_img

Latest News