Saturday, April 11, 2026
Homeರಾಜ್ಯಲೋಕಸಭೆಯಲ್ಲಿ ಆರೋಗ್ಯ, ಪರಿಸರ, ಮೂಲಸೌಕರ್ಯ ಕುರಿತ ಮಹತ್ವದ ವಿಷಯಗಳನ್ನು ಪ್ರಸ್ತಾಪಿಸಿದ ಸಂಸದ ಡಾ. ಸಿ.ಎನ್. ಮಂಜುನಾಥ್

ಲೋಕಸಭೆಯಲ್ಲಿ ಆರೋಗ್ಯ, ಪರಿಸರ, ಮೂಲಸೌಕರ್ಯ ಕುರಿತ ಮಹತ್ವದ ವಿಷಯಗಳನ್ನು ಪ್ರಸ್ತಾಪಿಸಿದ ಸಂಸದ ಡಾ. ಸಿ.ಎನ್. ಮಂಜುನಾಥ್

MP Dr. C.N. Manjunath raised important issues related to health, environment, infrastructure in Lok Sabha

ನವದೆಹಲಿ, ಮಾ.13-ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಾ.ಸಿ.ಎನ್.ಮಂಜುನಾಥ್ ಅವರು ಲೋಕಸಭೆಯಲ್ಲಿಂದು ಪೂರಕ ಅನುದಾನಗಳ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ದೇಶದ ಸಾರ್ವಜನಿಕ ಆರೋಗ್ಯ ಪರಿಸರ ಸಂರಕ್ಷಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಮಹತ್ವದ ವಿಷಯಗಳನ್ನು ಪ್ರಸ್ತಾಪಿಸಿದರು.

ಬಾಲಕಿಯರಲ್ಲಿ ಗರ್ಭಾಶಯ ಗ್ರೀವಾ ಕ್ಯಾನ್ಸರ್ ತಡೆಗಟ್ಟುವ ಉದ್ದೇಶದಿಂದ ಮಾನವ ಪ್ಯಾಪಿಲೋಮಾ ವೈರಸ್ (HPV) ಲಸಿಕೆ ಕಾರ್ಯಕ್ರಮವನ್ನು ಆರಂಭಿಸಿರುವುದಕ್ಕೆ ಕೇಂದ್ರ ಸರ್ಕಾರವನ್ನು ಅವರು ಅಭಿನಂದಿಸಿದರು. ರಾಜಸ್ಥಾನದ ಅರ್ಸ್ಪೀನಲ್ಲಿ ಕಳೆದ ವಾರ ಪ್ರಾರಂಭವಾದ ಈ ಕಾರ್ಯಕ್ರಮವು ಮಹಿಳೆಯರ ಆರೋಗ್ಯ ಸಬಲೀಕರಣದ ದಿಸೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ತಿಳಿಸಿದರು.

ಭಾರತದಲ್ಲಿ ಆರೋಗ್ಯ ಮೂಲಸೌಕರ್ಯ ಹಾಗೂ ವೈದ್ಯಕೀಯ ಸೇವೆಗಳ ಸುಧಾರಣೆಯಿಂದ ಭಾರತೀಯರ ಸರಾಸರಿ ಆಯುಷ್ಯವು ಈಗ ಸುಮಾರು 71 ರಿಂದ 72 ವರ್ಷಗಳಷ್ಟಾಗಿದೆ ಎಂದು ಅವರು ಹೇಳಿದರು. ಮಕ್ಕಳಿಗಾಗಿ ಭಾರತದಲ್ಲಿ ಯಶಸ್ವಿಯಾಗಿ ನಡೆಯುತ್ತಿರುವ ವಿಶ್ವವ್ಯಾಪಿ ಲಸಿಕಾ ಕಾರ್ಯಕ್ರಮದಡಿ ಸುಮಾರು ಶೇ.97 ರಷ್ಟು ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ ಎಂಬುದನ್ನು ಅವರು ಶ್ಲಾಘಿಸಿದರು. ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಭಾರತ ಕೈಗೊಂಡಿರುವ ಕ್ರಮಗಳನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಸಹ ಪ್ರಶಂಸಿಸಿರುವುದನ್ನು ಅವರು ಉಲ್ಲೇಖಿಸಿದರು.

ನ್ಯೂಮೋನಿಯಾ ಸೋಂಕಿನಿಂದ ವಯಸ್ಕರು ಹಾಗೂ ವಿಶೇಷವಾಗಿ ಹಿರಿಯ ನಾಗರಿಕರಲ್ಲಿ ಸಾವಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಯಸ್ಕರ ಲಸಿಕಾ ಕಾರ್ಯಕ್ರಮಕ್ಕೂ ಸಮಾನ ಮಹತ್ವ ನೀಡಬೇಕೆಂದು ಅವರು ಒತ್ತಾಯಿಸಿದರು.

ಪ್ರತಿ ವರ್ಷ ಸುಮಾರು 4 ರಿಂದ 5 ಮಿಲಿಯನ್ ಜನರು ನ್ಯೂಮೋನಿಯಾ ಮತ್ತು ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಹಾಗೂ ಮರಣ ಪ್ರಮಾಣವು ಸುಮಾರು ಶೇ. 17 ರಿಂದ 40 ವರೆಗೆ ಇದೆ ಎಂದು ಸಭೆಯ ಗಮನಕ್ಕೆ ತಂದರು. ಆದ್ದರಿಂದ ಹಿರಿಯ ನಾಗರೀಕರಿಗೆ ನ್ಯೂಮೋನಿಯಾ ವಿರುದ್ಧ ಲಸಿಕೆ ಕಾರ್ಯಕ್ರಮವನ್ನು ಜಾರಿಗೊಳಿಸುವ ಬಗ್ಗೆ ಕೇಂದ್ರ ಸರ್ಕಾರ ಪರಿಗಣಿಸಬೇಕು ಎಂದು ಅವರು ಮನವಿ ಮಾಡಿದರು.

ಆಯುಷ್ಮಾನ್ ಭಾರತ ಯೋಜನೆ ವಿಶ್ವದ ಅತಿ ದೊಡ್ಡ ಆರೋಗ್ಯ ರಕ್ಷಣಾ ಯೋಜನೆಗಳ ಒಂದಾಗಿದೆ. ಈ ಯೋಜನೆಯಡಿ ಸುಮಾರು 55 ಕೋಟಿ ಜನರಿಗೆ ಪ್ರಯೋಜನ ದೊರೆಯುತ್ತಿದೆ. ಪ್ರಸ್ತುತ ಈ ಯೋಜನೆಯಡಿಯಲ್ಲಿ ಸುಮಾರು 1300 ವೈದ್ಯಕೀಯ ಕ್ರಮಗಳು ಒಳಗೊಂಡಿದ್ದು, ಇನ್ನೂ ಉಳಿದಿರುವ ಸುಮಾರು 600 ಚಿಕಿತ್ಸೆಗಳನ್ನು ಯೋಜನೆಗೆ ಸೇರಿಸಬೇಕೆಂದು ಅವರು ಸರ್ಕಾರಕ್ಕೆ ಮನವಿ ಮಾಡಿದರು.

ಇದಲ್ಲದೆ ಒಂದು ಕುಟುಂಬಕ್ಕೆ ನೀಡಲಾಗುತ್ತಿರುವ 5 ಲಕ್ಷ ರೂ.ಗಳ ಆರೋಗ್ಯ ವಿಮೆ ಮಿತಿಯನ್ನು 8 ಲಕ್ಷ ರೂ.ಗಳಿಗೆ ಹೆಚ್ಚಿಸುವ ಮೂಲಕ ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಒಳಪಡುವ ಕುಟುಂಬಗಳಿಗೆ ಹೆಚ್ಚಿನ ಆರ್ಥಿಕ ನೆರವು ಒದಗಿಸಬೇಕು ಎಂದು ಅವರು ಸರ್ಕಾರವನ್ನು ವಿನಂತಿಸಿದರು.

ವಿಶ್ವ ಕಿಡ್ನಿ ದಿನದ ಅಂಗವಾಗಿ ಪ್ರಧಾನಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಜಾರಿಗೆ ತಂದಿರುವ ಪ್ರಧಾನಮಂತ್ರಿ ಹಾಗೂ ಕೇಂದ್ರ ಆರೋಗ್ಯ ಸಚಿವರನ್ನು ಅವರು ಅಭಿನಂದಿಸಿದರು. ಈ ಯೋಜನೆಯ ಮೂಲಕ ಸಾವಿರಾರು ಕಿಡ್ನಿ ರೋಗಿಗಳಿಗೆ ಜೀವ ಉಳಿಸುವ ಡಯಾಲಿಸಿಸ್ ಚಿಕಿತ್ಸೆ ದೊರೆಯುತ್ತಿದೆ ಎಂದು ಅವರು ಶ್ಲಾಘಿಸಿದರು.

ನಗರೀಕರಣ ಮತ್ತು ಕೈಗಾರೀಕರಣದಿಂದ ಮಹಾನಗರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೊಳಚೆ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಈ ತ್ಯಾಜ್ಯವನ್ನು ಸರಿಯಾಗಿ ಸಂಸ್ಕರಿಸದೆ ಕೆರೆಗಳಿಗೆ ಮತ್ತು ನದಿಗಳಿಗೆ ಬಿಡುತ್ತಿರುವ ಪರಿಣಾಮ ಸಾರ್ವಜನಿಕರ ಆರೊಗ್ಯ, ಜಾನುವಾರುಗಳ ಆರೋಗ್ಯ, ಕೃಷಿ ಬೆಳೆ ಸೇರಿದಂತೆ ಒಟ್ಟಾರೆ ಪರಿಸರದ ಮೇಲೆ ಆಗುತ್ತಿರುವ ಪರಿಣಾಮಗಳ ಬಗ್ಗೆ ವಿಸ್ತ್ರತವಾಗಿ ವಿವರಿಸಿದರು. ಪರಿಣಾಮವಾಗಿ ಬೆಂಗಳೂರು ಸೇರಿದಂತೆ ಇತರೆ ಕೊಳಚೆ ತ್ಯಾಜ್ಯವನ್ನು ಸರಿಯಾಗಿ ಸಂಸ್ಕರಿಸದೆ ನೇರವಾಗಿ ಕೆರೆಗಳಿಗೆ ಬಿಡುತ್ತಿರುವ ಪರಿಣಾಮ ಕೆರೆಗಳ ಸುತ್ತಮುತ್ತಲಿನ ಕೊಳವೆಬಾವಿಗಳಲ್ಲಿ ನೀರು ಮಲಿನವಾಗುತ್ತಿರುವ ಬಗ್ಗೆ ಉಲ್ಲೇಖಿಸಿದರು.

ಮತ್ತು ಇದೇ ವೇಳೆ ಭಾರತೀಯ ವಿಜ್ಞಾನ ಸಂಸ್ಥೆಯು ಪರಿಸರ ನಿರ್ವಹಣೆ ಮತ್ತು ಸಂಶೋಧನಾ ನೀತಿತ ಬಗ್ಗೆ ಅಧ್ಯಯನ ನಡೆಸಿದ್ದು, ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಪ್ರದೇಶಗಳಲ್ಲಿ ಸಂಸ್ಕರಿಸದ ನೀರು ನೇರವಾಗಿ ಕೆರೆಗಳಿಗೆ ಬಿಡುತ್ತಿರುವ ಪರಿಣಾಮ ಈ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿರುವ ತರಕಾರಿ, ಹಣ್ಣು ಸೇರಿದಂತೆ ಇತರೆ ಪದಾರ್ಥಗಳಲ್ಲಿ ಲೀಡ್, ಆರ್ಸೆನಿಕ್, ಪಾಸ್ಪರಸ್ ಲೋಹಗಳು ಸೇರಿದಂತೆ ಮನುಷ್ಯರ ಮತ್ತು ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಹಾನಿಕಾರಕ ಅಂಶಗಳು ಇರುವುದನ್ನು ದೃಢಪಡಿಸಿವೆ ಎಂದು ತಿಳಿಸಿದರು.

ಈ ಹಿನ್ನಲೆಯಲ್ಲಿ ಆಸ್ಪತ್ರೆಗಳ ತ್ಯಾಜ್ಯವನ್ನು ಸಂಸ್ಕರಿಸಿದ ರೀತಿಯಲ್ಲಿ ಕೈಗಾರಿಕಾ ತ್ಯಾಜ್ಯವನ್ನು ಸಂಸ್ಕರಿಸಬೇಕು ಮತ್ತು ಕೇಂದ್ರ ನಗರಾಭಿವೃದ್ಧಿ ಇಲಾಖೆಯ ಕೈಪಿಡಿಯಲ್ಲಿರುವಂತೆ ಕೈಗಾರಿಕಾ ತ್ಯಾಜ್ಯವನ್ನು ಮೂರನೇ ಹಂತದ ಶುದ್ದೀಕರಣಕ್ಕೆ ಒಳಪಡಿಸಬೇಕು ಮತ್ತು ಎಲ್ಲ ಎರಡನೇ ಹಂತದ ಎಸ್ಟಿಪಿ ಘಟಕಗಳನ್ನು ಮೂರನೇ ಹಂತದ ಎಸ್ಟಿಪಿ ಘಟಕಗಳನ್ನಾಗಿ ಪರಿವರ್ತಿಸಬೇಕೆಂದು ಕೇಂದ್ರ ಜಲಶಕ್ತಿ ಇಲಾಖೆ, ಪರಿಸರ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಗೆ ಮನವಿ ಸಲ್ಲಿಸಿದರು.

ಬೆಂಗಳೂರು-ಮೈಸೂರು ಎಕ್ಸ್‌ ಪ್ರೆಸ್ ಹೆದ್ದಾರಿ ಸುಮಾರು 150 ಕಿಲೋಮೀಟರ್ ಉದ್ದವಿದ್ದು, ಮಧ್ಯದಲ್ಲಿ ಸಮರ್ಪಕ ವಿಶ್ರಾಂತಿ ಕೇಂದ್ರದ ಕೊರತೆ ಇದೆ ಎಂದು ಅವರು ಗಮನ ಸೆಳೆದರು. ಈ ಉದ್ದೇಶಕ್ಕಾಗಿ ರಾಮನಗರ ಜಿಲ್ಲಾಡಳಿತವು ಸುಮಾರು 8.5 ಎಕರೆ ಭೂಮಿಯನ್ನು ಗುರುತಿಸಿದೆ. ಅಲ್ಲಿ ವಿಶ್ರಾಂತಿ ಕೇಂದ್ರದ ಜೊತೆಗೆ ಗೊಂಬೆಗಳ ಉದ್ಯಾನವನ (Toys Park) ಹಾಗೂ ರೇಷ್ಮೆ ಮೂಸಿಯಂ (Silk Museum) ಸ್ಥಾಪಿಸುವುದರಿಂದ ಪ್ರವಾಸೋದ್ಯಮಕ್ಕೂ ಉತ್ತೇಜನ ದೊರೆಯುತ್ತದೆ ಎಂದು ಅವರು ಹೇಳಿದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕೆಲವು ಪ್ರದೇಶಗಳಲ್ಲಿ ಆನೆ-ಮಾನವ ಸಂಘರ್ಷ ಹೆಚ್ಚುತ್ತಿರುವುದರ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದರು. ಕಾಡಾನೆಗಳು ಕೃಷಿಭೂಮಿಗೆ ನುಗ್ಗಿ, ಬೆಳೆ ಹಾನಿ ಮಾಡುತ್ತಿರುವುದರಿಂದ ರೈತರಿಗೆ ಆರ್ಥಿಕ ನಷ್ಟವಾಗುತ್ತಿದೆ ಹಾಗೂ ಕೆಲವೊಮ್ಮೆ ಮಾನವ ಜೀವಹಾನಿಯೂ ಸಂಭವಿಸುತ್ತಿದೆ ಎಂದು ಅವರು ಹೇಳಿದರು.

ಈ ಸಮಸ್ಯೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.ಅಂತಿಮವಾಗಿ, ದೇಶದ ನಾಗರಿಕರ ಆರೋಗ್ಯ ಮತ್ತು ಜೀವನಮಟ್ಟವನ್ನು ಸುಧಾರಿಸಿ ಮುನ್ನೆಚ್ಚರಿಕಾ ಆರೋಗ್ಯ ಸೇವೆಗಳು, ಪರಿಸರ ಸಂರಕ್ಷಣೆ ಹಾಗೂ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗ ಸಮಾನ ಆದ್ಯತೆ ನೀಡುವುದು ಅತ್ಯಂತ ಅಗತ್ಯ ಎಂದು ಡಾ. ಸಿ.ಎನ್. ಮಂಜುನಾಥ್ ಅವರು ಅಭಿಪ್ರಾಯಪಟ್ಟರು.

RELATED ARTICLES

Latest News