ಬೆಂಗಳೂರು,ಅ.12- ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳದ (ಕೆಎಂಎಫ್) ಹೆಮೆಯ ಬ್ರ್ಯಾಂಡ್ `ನಂದಿನಿ’ಯ ಹಾಲಿನ ಪುಡಿಯಲ್ಲಿ ಕಲಬೆರಕೆಯಾಗಿದೆ ಎಂಬ ಆರೋಪಗಳಿಗೆ ಕೊನೆಗೂ ತೆರೆ ಬಿದ್ದಿದೆ. ಆಹಾರ ಸುರಕ್ಷತೆ ಮತ್ತು ಗುಣ ಮಟ್ಟ ಕಾಯ್ದೆಯಡಿ ನಡೆಸಲಾದ ತಾಲೂಕು ಮತ್ತು ರಾಜ್ಯ ಮಟ್ಟದ ಪ್ರಯೋಗಾಲಯದ (ಲ್ಯಾಬ್) ಪರೀಕ್ಷಾ ವರದಿಗಳು ಹೊರಬಿದ್ದಿದ್ದು, ನಂದಿನಿ ಹಾಲಿನ ಪುಡಿ ಸಂಪೂರ್ಣವಾಗಿ ಸುರಕ್ಷಿತ ಹಾಗೂ ಉತ್ಕೃಷ್ಟ ಗುಣಮಟ್ಟದಿಂದ ಕೂಡಿದೆ ಎಂಬುದು ಅಧಿಕೃತವಾಗಿ ದೃಢಪಟ್ಟಿದೆ.
ಕೆಲ ದಿನಗಳ ಹಿಂದೆ ನಂದಿನಿ ಹಾಲಿನ ಪುಡಿಯಲ್ಲಿ ಕಲಬೆರಕೆ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಸಾರ್ವಜನಿಕರ ಆರೋಗ್ಯ ಮತ್ತು ಕೆಎಂಎಫ್ನ ವಿಶ್ವಾಸಾರ್ಹತೆಯ ದೃಷ್ಟಿಯಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಆರೋಗ್ಯ ಸಚಿವರು, ತಕ್ಷಣವೇ ಹಾಲಿನ ಪುಡಿಯ ಗುಣಮಟ್ಟ ಪರೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದರು.
ಆರೋಗ್ಯ ಸಚಿವರ ನಿರ್ದೇಶನದಂತೆ, ಕಳೆದ ಸೆಪ್ಟೆಂಬರ್ 26 ರಂದು ರಾಜ್ಯದ ವಿವಿಧ ಕೆಎಂಎಫ್ ಡೈರಿಗಳಿಂದ ನಂದಿನಿ ಮಿಲ್್ಕ ಪೌಡರ್ನ ಮಾದರಿಗಳನ್ನು ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಸಂಗ್ರಹಿಸಿದ್ದರು. ಬಳಿಕ ಈ ಮಾದರಿಗಳನ್ನು ಎಫ್ಎಸ್ಎಸ್ಎಐ ಅನುಮೋದಿತ ಮಾನ್ಯತೆ ಪಡೆದ ಪರೀಕ್ಷಾಗಾರಗಳಿಗೆ ರವಾನಿಸಲಾಗಿತ್ತು.
ಲ್ಯಾಬ್ ವರದಿಯ ಅಧಿಕೃತ ಪ್ರಯೋಗಾಲಯ ವರದಿಯ ಪ್ರಕಾರ,ನಂದಿನಿ ಹಾಲಿನ ಪುಡಿಯಲ್ಲಿ ಯಾವುದೇ ರೀತಿಯ ಹಾನಿಕಾರಕ ರಾಸಾಯನಿಕಗಳು, ಅನಗತ್ಯ ಪದಾರ್ಥಗಳು ಅಥವಾ ಕಲಬೆರಕೆ ಅಂಶಗಳು ಪತ್ತೆಯಾಗಿಲ್ಲ. ನಿಗದಿಪಡಿಸಿದ ಎಲ್ಲಾ ಆಹಾರ ಸುರಕ್ಷತಾ ನಿಯಮಗಳು ಹಾಗೂ ಗುಣಮಟ್ಟದ ಮಾನದಂಡಗಳನ್ನು ನಂದಿನಿ ಉತ್ಪನ್ನವು ಪೂರೈಸಿದೆ. ಸಾರ್ವಜನಿಕರು ಮತ್ತು ಮಕ್ಕಳು ಯಾವುದೇ ಆತಂಕವಿಲ್ಲದೆ ಬಳಸಲು ಇದು ಸಂಪೂರ್ಣ ಯೋಗ್ಯವಾಗಿದೆ ಎಂಬುದು ಅಧಿಕೃತವಾಗಿ ದೃಢಪಟ್ಟಿದೆ.
ಕೋಟಿಗಟ್ಟಲೆ ಗ್ರಾಹಕರ ನಂಬಿಕೆಗೆ ಹೆಸರುವಾಸಿಯಾಗಿರುವ ೞನಂದಿನಿೞ ಬ್ರ್ಯಾಂಡ್ ವಿರುದ್ಧ ಕೇಳಿಬಂದಿದ್ದ ಅಪಪ್ರಚಾರಕ್ಕೆ ಈ ವರದಿಯು ಸೂಕ್ತ ಉತ್ತರ ನೀಡಿದೆ. ಸುಳ್ಳು ವದಂತಿಗಳಿಗೆ ಕಿವಿಗೊಡದೆ ಗ್ರಾಹಕರು ನಂದಿನಿ ಉತ್ಪನ್ನಗಳನ್ನು ಎಂದಿನಂತೆ ಬಳಸಬಹುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಗುಣಮಟ್ಟ ಪರೀಕ್ಷೆ
ಆಹಾರ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಆರೋಪಗಳು ಕೇಳಿಬಂದಾಗ, ಅವುಗಳ ಸತ್ಯಾಸತ್ಯತೆಯನ್ನು ವೈಜ್ಞಾನಿಕ ಪರೀಕ್ಷೆಗಳ ಮೂಲಕ ಪರಿಶೀಲಿಸುವುದು ಮಹತ್ವದ್ದಾಗಿದೆ. ನಂದಿನಿ ಮಿಲ್ಕ್ ಪೌಡರ್ ವಿಚಾರದಲ್ಲಿಯೂ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸುವ ಮೂಲಕ ಗುಣಮಟ್ಟದ ಕುರಿತು ಸ್ಪಷ್ಟತೆ ಪಡೆಯಲು ಕ್ರಮ ಕೈಗೊಳ್ಳಲಾಗಿತ್ತು.
ಪ್ರಯೋಗಾಲಯದ ವರದಿಯಲ್ಲಿ ಉತ್ಪನ್ನ ಸುರಕ್ಷಿತವಾಗಿದೆ ಎಂದು ತಿಳಿದುಬಂದಿರುವುದು ಗ್ರಾಹಕರಿಗೆ ಸಮಾಧಾನ ನೀಡುವ ಬೆಳವಣಿಗೆಯಾಗಿದೆ. ಆದರೆ, ಯಾವುದೇ ಆರೋಪದ ಕುರಿತು ಅಂತಿಮ ನಿರ್ಧಾರಕ್ಕೆ ಬರುವಾಗ ಪರೀಕ್ಷೆಯ ವ್ಯಾಪ್ತಿ, ಮಾದರಿಗಳ ವಿವರ ಹಾಗೂ ಅಧಿಕೃತ ವರದಿಯಲ್ಲಿರುವ ನಿರ್ದಿಷ್ಟ ಅಂಶಗಳನ್ನು ಪರಿಗಣಿಸುವುದು ಅಗತ್ಯವಾಗಿದೆ.
ಕರ್ನಾಟಕದ ಹಾಲು ಉತ್ಪಾದಕರು ಮತ್ತು ಗ್ರಾಹಕರೊಂದಿಗೆ ನಿಕಟ ಸಂಬಂಧ ಹೊಂದಿರುವ ನಂದಿನಿ ಬ್ರ್ಯಾಂಡ್ನ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಸಹಜವಾಗಿಯೇ ಹೆಚ್ಚಿನ ನಿರೀಕ್ಷೆಗಳಿವೆ. ಹೀಗಾಗಿ, ಮಿಲ್ಕ್ ಪೌಡರ್ ಕಲಬೆರಕೆ ಆರೋಪದ ಕುರಿತು ಪ್ರಯೋಗಾಲಯದ ವರದಿ ಹೊರಬಂದಿರುವುದು ಮಹತ್ವ ಪಡೆದಿದೆ.
ಒಟ್ಟಿನಲ್ಲಿ ನಂದಿನಿ ಮಿಲ್ಕ್ ಪೌಡರ್ನ ಮಾದರಿಗಳು ಸುರಕ್ಷಿತವಾಗಿವೆ ಎಂಬ ಪರೀಕ್ಷಾ ವರದಿಯ ಮಾಹಿತಿ ಆರೋಪಗಳ ನಡುವೆಯೇ ಗಮನ ಸೆಳೆದಿದೆ. ಆಹಾರ ಸುರಕ್ಷತಾ ಮಾನದಂಡಗಳ ಪಾಲನೆ, ನಿಯಮಿತ ಗುಣಮಟ್ಟ ಪರಿಶೀಲನೆ ಮತ್ತು ಅಧಿಕೃತ ಮಾಹಿತಿಯ ಪಾರದರ್ಶಕ ಪ್ರಕಟಣೆ ಮುಂದುವರಿದರೆ ಗ್ರಾಹಕರ ವಿಶ್ವಾಸವನ್ನು ಮತ್ತಷ್ಟು ಬಲಪಡಿಸಲು ಸಾಧ್ಯವಾಗಲಿದೆ.
