ಬೆಂಗಳೂರು,ಜು.8-ನಗರದಲ್ಲಿ ಬೆಚ್ಚಿಬೀಳಿಸಿದ್ದ ತ್ರಿವಳಿ ಕೊಲೆ ಪ್ರಕರಣದ ಇಬ್ಬರು ಆರೋಪಿಗಳು ವಿಚಾರಣೆ ವೇಳೆ ಭಿನ್ನ ವಿಭಿನ್ನ ಹೇಳಿಕೆ ನೀಡುತ್ತಿರುವುದರಿಂದ ಕೆಆರ್‌ಪುರ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಈ ಇಬ್ಬರನ್ನು ನಾರ್ಕೋ ಅನಾಲಿಸಿಸ್ ಪರೀಕ್ಷೆಗೆ ಒಳಪಡಿಸಲು ಮುಂದಾಗಿದ್ದಾರೆ.
ಕೆಆರ್‌ಪುರದಲ್ಲಿ ಹೆತ್ತ ತಂದೆ,ತಾಯಿ ಹಾಗೂ ಒಡಹುಟ್ಟಿದ ಸಹೋದರಿಯನ್ನೇ ಭೀಕರವಾಗಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಮನೆ ಮಗಳು ಶ್ವೇತಾ ಹಾಗೂ ಸ್ನೇಹಿತ ಕೆನತ್‌ನ ವಿಚಾರಣೆ ವೇಳೆ ಘಟನೆಗೆ ನಿಖರ ಕಾರಣ ಬಾಯ್ಬಿಟ್ಟಿಲ್ಲ.
ಈ ಇಬ್ಬರು ಆರೋಪಿಗಳು ಪೊಲೀಸರ ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ. ಆರೋಪಿತೆ ಶ್ವೇತಾ ಘಗಳಿಗೊಂದು ಘಂಟೆಗೊಂದು ವಿವಿಧ ಕಾರಣಗಳನ್ನು ನೀಡುತ್ತಿದ್ದಾಳೆ.
ಆರೋಪಿ ಕೆನತ್ ಸಹ ಕೊಲೆಯ ಹಿಂದಿನ ಅಸಲಿ ಕಾರಣ ಮರೆಮಾಚುತ್ತಿದ್ದಾನೆ. ಇವರಿಬ್ಬರು ವಿಭಿನ್ನ ಕಾರಣಗಳನ್ನು ನೀಡುತ್ತಾ ಪೊಲೀಸರನ್ನೇ ಗೊಂದಲಕ್ಕೀಡು ಮಾಡುತ್ತಿದ್ದಾರೆ.
ಹಾಗಾಗಿ ಪೊಲೀಸರು ಇವರಿಬ್ಬರಿಂದ ನಿಜ ಬಾಯಿ ಬಿಡಿಸಲು ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ನಾರ್ಕೋ ಅನಾಲಿಸಿಸ್ ಪರೀಕ್ಷೆಗೆ ಒಳಪಡಿಸಲು ಮುಂದಾಗಿದ್ದಾರೆ.ಅಪಾರ್ಟ್‌ಮೆಂಟ್‌ವೊಂದರಲ್ಲಿ ತಂದೆ, ತಾಯಿ ಹಾಗೂ ಸಹೋದರಿಯನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿ ಮನೆ ಮಗಳು ಶ್ವೇತಾ ತನ್ನ ಸ್ನೇಹಿತ ಕೆನತ್ ಜೊತೆ ಬೈಕ್‌ನಲ್ಲಿ ತಮಿಳುನಾಡಿಗೆ ಪರಾರಿಯಾಗಿದ್ದಳು.
ನಂತರ ಬೈಕ್‌ಬಿಟ್ಟು ಪಾಂಡಿಚೇರಿಗೆ ಹೋಗಿ ಇಬ್ಬರು ಬೇರೆ ಬೇರೆಯಾಗಿದ್ದರು.ನಂತರ ಪಾಂಡಿಚೇರಿಯ ರೈಲ್ವೆ ನಿಲ್ದಾಣದ ಬಳಿ ಶ್ವೇತಾ ಪೊಲೀಸರ ಕೈಗೆ ಸಿಕ್ಕಿಬಿದ್ದ ನಂತರ ಸ್ನೇಹಿತ ಕೆನತ್ ಸಹ ಪಾಂಡಿಚೇರಿಯ ಬೀಚ್ ಬಳಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಈ ಇಬ್ಬರನ್ನು ಕೆಆರ್‌ಪುರ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆಗೆ ಒಳಪಡಿಸಿದಾಗ ಹಣಕಾಸಿನ ವಿಚಾರವಾಗಿ ಜಗಳ ನಡೆದು ಕೊಲೆ ಮಾಡಲಾಯಿತು ಎಂದು ಶ್ವೇತಾ ಹೇಳಿದ್ದಾಳೆ.
ತದ ನಂತರದಲ್ಲಿ ನನ್ನ ತಾಯಿ ನನಗೆ ಬೈಯುತ್ತಿದ್ದರು, ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿರಲಿಲ್ಲ. ಅಂದು ನನ್ನ ಮನೆಗೆ ತಾಯಿ ಬಂದಾಗ ಜಗಳವಾಯಿತು. ಆ ಕೋಪದಲ್ಲಿ ನಾನು ಚಾಕುವಿನಿಂದ ಇರಿದು ಕೊಲೆ ಮಾಡಿದೆ, ಅದೇ ಸಮಯಕ್ಕೆ ತಂದೆ ಸಹೋದರಿಯೊಂದಿಗೆ ಮನೆಗೆ ಬಂದಾಗ ತಾಯಿಯ ಬಗ್ಗೆ ವಿಚಾರಿಸಿದರು. ನಾನು ಸಿಕ್ಕಿ ಬೀಳುವ ಭಯದಲ್ಲಿ ಅವರಿಗೂ ಚಾಕುವಿನಿಂದ ಇರಿದೆ. ಇದನ್ನು ನೋಡಿ ಕಿರುಚಿಕೊಂಡ ಸಹೋದರಿಗೂ ಚಾಕು ಹಾಕಿದೆ ಎಂದು ಹೇಳಿದ್ದಾಳೆ.
ಆದರೆ ಈ ಮೂವರ ಕೊಲೆಗೆ ನಿಖರ ಕಾರಣ ಏನೆಂಬುವುದು ಇಬ್ಬರೂ ಬಾಯ್ಬಿಟ್ಟಿಲ್ಲ.
ಅಂದು ಮೊದಲು ಯಾರು ಯಾರ ಮೇಲೆ ದಾಳಿ ನಡೆಸಲಾಯಿತು, ನಂತರ ಯಾರನ್ನು ಕೊಲೆ ಮಾಡಲಾಯಿತು, ಯಾರು ಹಲ್ಲೆ ನಡೆಸಿದರು, ನಿಮಿಬ್ಬರ ಪಾತ್ರ ಏನಿತ್ತು, ಕೊಲೆ ಬಳಿಕ ಏನು ಮಾಡಿದರು, ಎಂಬ ಕೆಲವೊಂದು ಪ್ರಶ್ನೆಗೆ ಆರೋಪಿಗಳಿಂದ ಉತ್ತರ ಪಡೆದು ಅದರ ವಿಡಿಯೊ ದಾಖಲಿಸಿಕೊಂಡಿದ್ದಾರೆ.
ತನಿಖೆ ವೇಳೆ ಬೆಚ್ಚಿಬೀಳಿಸುವ ಮತ್ತಷ್ಟು ಮಾಹಿತಿಗಳು ಬೆಳಕಿಗೆ ಬಂದಿವೆ. ಕೊಲೆ ನಡೆದ ಬಳಿಕ ಆರೋಪಿಗಳು ಬಿಸಿ ನೀರಿನಲ್ಲಿ ಖಾರದ ಪುಡಿ ಬೆರೆಸಿ ಮನೆಯ ವಿವಿಧ ಭಾಗಗಳಲ್ಲಿ ಚೆಲ್ಲಿದ್ದರು. ಇದರಿಂದ ತನಿಖೆಯ ದಿಕ್ಕು ತಪ್ಪಿಸಲು ಅಥವಾ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾರೆಯೇ ಎಂಬ ಅನುಮಾನ ಪೊಲೀಸರಿಗೆ ವ್ಯಕ್ತವಾಗಿದೆ.
ಮೂವರನ್ನು ಕೊಲೆ ಮಾಡಿದ ಬಳಿಕ ಆರೋಪಿಗಳು ಆಹಾರವನ್ನು ಆನ್‌ಲೈನ್ ಮೂಲಕ ಆರ್ಡರ್ ಮಾಡಿಕೊಂಡು ಅದೇ ಮನೆಯಲ್ಲಿ ಕುಳಿತು ಊಟ ಮಾಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ.
ಪ್ರಕರಣದ ಪ್ರತಿಯೊಂದು ಅಂಶವನ್ನು ಪೊಲೀಸರು ಸೂಕ್ಷವಾಗಿ ಪರಿಶೀಲಿಸುತ್ತಿದ್ದು, ತನಿಖೆಯ ವೇಳೆ ಸಂಗ್ರಹಿಸಿದ ವಿಡಿಯೊ, ಸ್ಥಳ ಮಹಜರು ಮತ್ತು ಇತರೆ ಸಾಕ್ಷ್ಯಗಳು ತನಿಖೆಗೆ ಪ್ರಮುಖ ಆಧಾರವಾಗಲಿವೆ. ಆರೋಪಿಗಳ ವಿರುದ್ಧ ಇನ್ನಷ್ಟು ಬಲವಾದ ಸಾಕ್ಷ್ಯಗಳನ್ನು ಕಲೆಹಾಕುವ ಕೆಲಸವನ್ನು ಕೆ.ಆರ್ ಪುರ ಪೊಲೀಸರು ಮುಂದುವರೆಸಿದ್ದಾರೆ.
