ಬೆಂಗಳೂರು, ಮಾ.8- ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಶಿ ಫಾರ್ ಸೊಸೈಟಿ ಸಂಸ್ಥೆ, ಮದರ್‌ಹುಡ್ ಆಸ್ಪತ್ರೆ, ಏರ್ಪೋರ್ಟ್ (ಪ್ರೆಸ್ಟೀಜ್ ಟೆಕ್ ಕೋಲ್‌್ಡ) ಸಹಯೋಗದಲ್ಲಿ ಆಯೋಜಿಸಿದ್ದ ನಾರಿ ಶಕ್ತಿ ರೈಡ್ 2026 ಕಾರ್ಯಕ್ರಮ ನಡೆಯಿತು. ಇದು ನಗರದ ರಸ್ತೆಗಳಲ್ಲಿ ವಿಶೇಷ ಬೈಕ್ ರೈಡ್ ಮೂಲಕ ಮಹಿಳಾ ಸಬಲೀಕರಣಕ್ಕೆ ಹೊಸ ಸ್ಫೂರ್ತಿ ನೀಡಿತು.
ಬೆಳಿಗ್ಗೆ ಹೆಬ್ಬಾಳ ಫ್ಲೈಓವರ್ ಕೆಳಭಾಗದಲ್ಲಿರುವ ಮದರ್‌ಹುಡ್ ಆಸ್ಪತ್ರೆ, ಸಹಕಾರನಗರದಿಂದ ಆರಂಭವಾದ ಈ ನಾರಿ ಶಕ್ತಿ ರೈಡ್ ಅನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರು ನಡೆಸಿದರು. ಬಳಿಕ ಈ ರ್ಯಾಲಿ ನಗರ ರಸ್ತೆಗಳ ಮೂಲಕ ಸಾಗುತ್ತಾ ಮಾಕ್ಸಿ ಬೆಂಗಳೂರು ಏರ್ಪೋರ್ಟ್, ಪ್ರೆಸ್ಟೀಜ್ ಟೆಕ್ ಕೋಲ್‌್ಡ, ನವರತ್ನ ಅಗ್ರಹಾರದಲ್ಲಿ ಸಮಾರೋಪಗೊಂಡಿತು.
ಈ ರೈಡ್‌ನಲ್ಲಿ ಸುಮಾರು 50 ಮಹಿಳಾ ಬೈಕರ್ಸ್ ತಾಲಿರು ಫೌಂಡೇಶನ್‌ನ 20 ಮಹಿಳಾ ಆಟೋ ಚಾಲಕರು, 20 ಮಹಿಳಾ ಕಾರ್ ಚಾಲಕರು, ವೈದ್ಯರು, ವೃತ್ತಿಪರರು ಹಾಗೂ ಸೈಬರ್ ಸುರಕ್ಷತಾ ತಜ್ಞರು ಉತ್ಸಾಹದಿಂದ ಭಾಗವಹಿಸಿದರು. ವಿಶೇಷವಾಗಿ ಭಾರತೀಯ ವಾಯುಪಡೆಯ ನಿವೃತ್ತ ವಿಂಗ್ ಕಮಾಂಡರ್ ಜೂಲಿ ರೋಸಿ ಅವರ ಉಪಸ್ಥಿತಿ ಕಾರ್ಯಕ್ರಮಕ್ಕೆ ಮತ್ತಷ್ಟು ಗೌರವ ತಂದಿತು.
ನಗರದ ರಸ್ತೆಗಳಲ್ಲಿ ಮಹಿಳೆಯರು ಒಂದಾಗಿ ಸಾಗಿದ ಈ ಬೈಕ್ ರ್ಯಾಲಿ ಮಹಿಳೆಯರ ಧೈರ್ಯ, ಏಕತೆ ಮತ್ತು ಆತವಿಶ್ವಾಸದ ಪ್ರತೀಕವಾಗಿ ಮೂಡಿಬಂದಿತು. ರೈಡ್‌ನ ನಂತರ ಮಹಿಳೆಯರ ಶಕ್ತಿಯ ಕೇಂದ್ರ ಕುರಿತ ವಿಷಯದ ಮೇಲೆ ವಿಶೇಷ ಉಪನ್ಯಾಸ ನಡೆಯಿತು.
ಕಾರ್ಯಕ್ರಮದ ವೇಳೆ ಮಾತನಾಡಿದ ಸಂಘಟಕರು, ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿರುವುದು ಸಮಾಜದ ಪ್ರಗತಿಯ ಸಂಕೇತವಾಗಿದ್ದು, ಇಂತಹ ಕಾರ್ಯಕ್ರಮಗಳು ಮಹಿಳೆಯರಲ್ಲಿ ಆತವಿಶ್ವಾಸವನ್ನು ಹೆಚ್ಚಿಸಿ, ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತವೆ ಎಂದು ಹೇಳಿದರು.
ನಾರಿ ಶಕ್ತಿಗೆ ಜೈಕಾರ
ನವದೆಹಲಿ, ಮಾ. 8- ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಎಲ್ಲಾ ಮಹಿಳೆಯರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ ಮತ್ತು ಭಾರತದ ನಾರಿ ಶಕ್ತಿಯ ಸಾಧನೆಗಳು ಹೆಮ್ಮೆಯ ಮೂಲವಾಗಿವೆ ಎಂದು ಹೇಳಿದರು.
ಮಹಿಳಾ ಸಬಲೀಕರಣವು ತಮ್ಮ ಸರ್ಕಾರದ ವಿವಿಧ ಯೋಜನೆಗಳು ಮತ್ತು ಉಪಕ್ರಮಗಳ ತಿರುಳಾಗಿದೆ ಮತ್ತು ಪ್ರತಿಯೊಬ್ಬ ಮಹಿಳೆ ತನ್ನ ಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ಮತ್ತು ಭಾರತದ ಅಭಿವೃದ್ಧಿಯ ಪ್ರಯಾಣಕ್ಕೆ ಕೊಡುಗೆ ನೀಡಲು ಅನುವು ಮಾಡಿಕೊಡುವ ಅವಕಾಶಗಳನ್ನು ಸೃಷ್ಟಿಸಲು ಅದು ಬದ್ಧವಾಗಿದೆ ಎಂದು ಅವರು ಹೇಳಿದರು.
ಅಂತರರಾಷ್ಟ್ರೀಯ ಮಹಿಳಾ ದಿನದಂದು, ನಮ್ಮ ಎಲ್ಲಾ ನಾರಿ ಶಕ್ತಿಗಳಿಗೆ ನಾನು ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಪ್ರತಿಯೊಂದು ಕ್ಷೇತ್ರದಲ್ಲೂ, ಮಹಿಳೆಯರು ದೃಢನಿಶ್ಚಯ, ಸೃಜನಶೀಲತೆ ಮತ್ತು ಸಾಟಿಯಿಲ್ಲದ ಉತ್ಸಾಹದಿಂದ ಭಾರತದ ಪ್ರಗತಿಯನ್ನು ರೂಪಿಸುತ್ತಿದ್ದಾರೆ. ಅವರ ಸಾಧನೆಗಳು ನಮ್ಮ ರಾಷ್ಟ್ರಕ್ಕೆ ಸ್ಫೂರ್ತಿ ನೀಡುತ್ತವೆ ಮತ್ತು ವಿಕ್ಷಿತ ಭಾರತವನ್ನು ನಿರ್ಮಿಸುವ ನಮ್ಮ ಸಾಮೂಹಿಕ ಸಂಕಲ್ಪವನ್ನು ಬಲಪಡಿಸುತ್ತವೆ ಎಂದು ಅವರು ಸಂದೇಶದಲ್ಲಿ ತಿಳಿಸಿದ್ದಾರೆ.
ಭಾರತವು ಮತ್ತಷ್ಟು ಮುಂದುವರೆದಂತೆ, ಮಹಿಳೆಯರ ಆಕಾಂಕ್ಷೆಗಳು ಮತ್ತು ಕೊಡುಗೆಗಳು ಬಲವಾದ ಮತ್ತು ಸಮೃದ್ಧ ರಾಷ್ಟ್ರದತ್ತ ದೇಶದ ಸಾಮೂಹಿಕ ಪ್ರಯಾಣಕ್ಕೆ ಮಾರ್ಗದರ್ಶನ ನೀಡುತ್ತಲೇ ಇರುತ್ತವೆ ಎಂದು ಮೋದಿ ಹೇಳಿದರು. ಭಾರತದ ನಾರಿ ಶಕ್ತಿಯ ಸಾಧನೆಗಳು ಹೆಮ್ಮೆಯ ಮೂಲವಾಗಿದೆ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಪರಿವರ್ತನಾಶೀಲ ಪಾತ್ರದ ಪ್ರಬಲ ಜ್ಞಾಪನೆಯಾಗಿದೆ ಎಂದು ಅವರು ಹೇಳಿದರು.
ಮಹಿಳೆಯರಿಂದ ದೇಶ ಸಶಕ್ತ
ನವಭಾರತದ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಅನನ್ಯ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಿಳಿಸಿದ್ದಾರೆ.ದೇಶದ ಸಮಸ್ತ ನಾರಿಶಕ್ತಿಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಾರ್ದಿಕ ಶುಭಾಶಯಗಳನ್ನು ಕೋರಿರುವ ಅವರು ಮಹಿಳೆಯರು ಸಶಕ್ತರಾದರೆ ಮಾತ್ರ ದೇಶ ಸಶಕ್ತವಾಗಲು ಸಾಧ್ಯಎಂದಿದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನದಂದು ಭಾರತದ ನಾರಿ ಶಕ್ತಿಗೆ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
