ನವದೆಹಲಿ,ಆ.13- ದೇಶದ ಪ್ರಮುಖ ಕ್ಯಾಬ್ ಅಗ್ರಿಗೇಟರ್‌ಗಳಾದ ಓಲಾ , ಊಬರ್ ಮತ್ತು ರ್ಯಾಪಿಡೋ ಕಂಪನಿಗಳಿಗೆ ಕೇಂದ್ರ ಸರ್ಕಾರವು ಮಹತ್ವದ ನಿರ್ದೇಶನ ನೀಡಿದೆ. ಆ್ಯಪ್‌ಗಳಲ್ಲಿ ಪ್ರಯಾಣಿಕರನ್ನು ತಪ್ಪುದಾರಿಗೆಳೆಯುವ ಹಾಗೂ ಬಲವಂತದಂತೆ ಗೋಚರಿಸುವ ಫ್ರೀ-ರೈಡ್ ಟ್ರಿಪ್ ವೈಶಿಷ್ಟ್ಯವನ್ನು ತಕ್ಷಣವೇ ತೆಗೆದುಹಾಕುವಂತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ
ಸಚಿವಾಲಯ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಮೋಟಾರು ವಾಹನ ಅಗ್ರಿಗೇಟರ್ ಮಾರ್ಗಸೂಚಿಗಳು, 2025ರ ಕಟ್ಟುನಿಟ್ಟಿನ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಕಳೆದ ಕೆಲವು ತಿಂಗಳುಗಳಿಂದ ಕ್ಯಾಬ್ ಬುಕಿಂಗ್ ಮಾಡುವಾಗ ತ್ವರಿತ ಸವಾರಿ ದೃಢೀಕರಣಕ್ಕಾಗಿ ಟಿಪ್ ನೀಡಿ, ಹೆಚ್ಚುವರಿ ಹಣವನ್ನಿಡಿ, ಚಾಲಕ ಬೇಗ ಬರುತ್ತಾನೆ ಎಂಬಿತ್ಯಾದಿ ಪ್ರಾಂಪ್ಟ್ ಗಳು ಗ್ರಾಹಕರನ್ನು ಕಂಗೆಡಿಸಿದ್ದವು.
ಆಟೋ, ಕ್ಯಾಬ್ ಸಿಗದ ಸಂದರ್ಭದಲ್ಲಿ ಅನಿವಾರ್ಯವಾಗಿ ಹೆಚ್ಚಿನ ಹಣ ನೀಡಲು ಪ್ರಯಾಣಿಕರು ಒತ್ತಡಕ್ಕೊಳಗಾಗುತ್ತಿದ್ದರು. ಇದು ಗ್ರಾಹಕ ಸಂರಕ್ಷಣಾ ಕಾಯ್ದೆ 2019ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರ ಮಧ್ಯಪ್ರವೇಶಿಸಿ ಈ ಹೊಸ ನಿಯಮ ಜಾರಿಗೆ ತಂದಿದೆ.
ಸಮಯದ ಮಿತಿ: ಇನ್ನು ಮುಂದೆ ಟಿಪ್ಪಿಂಗ್ ವೈಶಿಷ್ಟ್ಯವು ಪ್ರಯಾಣ ಮುಗಿದ ನಂತರ ಮಾತ್ರ ಗೋಚರಿಸುತ್ತದೆ. ಬುಕಿಂಗ್ ಸಮಯದಲ್ಲಿ ಅಥವಾ ಪ್ರಯಾಣದ ಮಧ್ಯೆ ಇದು ಲಭ್ಯವಿರುವುದಿಲ್ಲ.
ಸೇವೆಗೆ ಲಿಂಕ್ ಮಾಡುವಂತಿಲ್ಲ: ಟಿಪ್ ನೀಡುವುದರಿಂದ ಕ್ಯಾಬ್ ಬೇಗ ಸಿಗುತ್ತದೆ ಅಥವಾ ಸೇವಾ ಗುಣಮಟ್ಟ ಸುಧಾರಿಸುತ್ತದೆ ಎಂಬ ಯಾವುದೇ ಸಂದೇಶಗಳನ್ನು ಆ್ಯಪ್‌ನಲ್ಲಿ ಪ್ರದರ್ಶಿಸುವಂತಿಲ್ಲ.
ಚಾಲಕರಿಗೆ ನೇರ ಲಾಕ್: ಪ್ರಯಾಣಿಕರು ಯಾತ್ರೆ ಮುಗಿದ ಬಳಿಕ ಸ್ವಯಂಪ್ರೇರಿತರಾಗಿ ಟಿಪ್ ನೀಡಿದರೆ, ಆ ಸಂಪೂರ್ಣ ಮೊತ್ತವು ಯಾವುದೇ ಕಡಿತವಿಲ್ಲದೆ ನೇರವಾಗಿ ಚಾಲಕನಿಗೆ ತಲುಪಬೇಕು. ಅಗ್ರಿಗೇಟರ್ ಕಂಪನಿಗಳು ಅದರಲ್ಲಿ ಕಮಿಷನ್ ಪಡೆಯುವಂತಿಲ್ಲ. ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ಆ್ಯಪ್ ಆಧಾರಿತ ಕ್ಯಾಬ್‌ಗಳನ್ನು ಅವಲಂಬಿಸಿರುವುದರಿಂದ, ಸರ್ಕಾರದ ಈ ನಿರ್ಧಾರವು ಗ್ರಾಹಕರ ಮೇಲಿನ ಅನಗತ್ಯ ಆರ್ಥಿಕ ಹೊರೆಯನ್ನು ತಪ್ಪಿಸಲಿದೆ ಹಾಗೂ ಪಾರದರ್ಶಕ ಸೇವೆಗೆ ದಾರಿ ಮಾಡಿಕೊಡಲಿದೆ.
