Homeರಾಜ್ಯಮೊದಲ ದಿನವೇ ವಿಧಾನಸಭೆಯಲ್ಲಿ ಆಡಳಿತ- ವಿಪಕ್ಷಗಳ ನಡುವೆ ಸಣ್ಣ ಮಟ್ಟಿನ ಚರ್ಚೆ

ಮೊದಲ ದಿನವೇ ವಿಧಾನಸಭೆಯಲ್ಲಿ ಆಡಳಿತ- ವಿಪಕ್ಷಗಳ ನಡುವೆ ಸಣ್ಣ ಮಟ್ಟಿನ ಚರ್ಚೆ

ಬೆಂಗಳೂರು, ಆ.13- ವಿಧಾನಮಂಡಲದ ಅಧಿವೇಶನದ ಮೊದಲ ದಿನವೇ ಸಂತಾಪ ಸೂಚನೆ ಹಾಗೂ ನೂತನ ಸಚಿವರ ಪರಿಚಯ ವಿಚಾರವಾಗಿ ಆಡಳಿತ ಮತ್ತು ಪ್ರತಿಪಕ್ಷದ ನಡುವೆ ಸಣ್ಣ ಮಟ್ಟಿನ ಚರ್ಚೆ ನಡೆಯಿತು.

ಸಂತಾಪ ಸೂಚನೆಯ ಗಂಭೀರ ಸಂದರ್ಭವನ್ನು ನೂತನ ಸಚಿವರಾಗಿ ಅಧಿಕಾರ ಸ್ವೀಕರಿಸಿರುವವರ ಸಂಭ್ರಮದೊಂದಿಗೆ ಮಿಶ್ರಣ ಮಾಡಬಾರದು ಎಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಅಭಿಪ್ರಾಯಪಟ್ಟಿದ್ದು, ಇದಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸಹಮತ ವ್ಯಕ್ತಪಡಿಸಿದರು.

ವಿಧಾನಮಂಡಲದ ಅಧಿವೇಶನ ರಾಷ್ಟ್ರಗೀತೆ ವಂದೇ ಮಾತರಂ ಗಾಯನದೊಂದಿಗೆ ಆರಂಭವಾಯಿತು. ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಇತ್ತೀಚೆಗೆ ಸಂಪುಟಕ್ಕೆ ಸೇರ್ಪಡೆಯಾದ ನೂತನ ಸಚಿವರನ್ನು ಸದನಕ್ಕೆ ಪರಿಚಯಿಸಲು ಮುಂದಾದರು.
ಈ ವೇಳೆ ಎದ್ದು ನಿಂತ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌, ಸದನದಲ್ಲಿ ಸಂತಾಪ ಸೂಚನೆ ನಡೆಯಬೇಕಿದೆ. ಸಚಿವರಾಗಿ ಅಧಿಕಾರ ಸ್ವೀಕರಿಸಿರುವವರಿಗೆ ಇದು ಸಂಭ್ರಮದ ವಿಚಾರ. ಹೀಗಾಗಿ ಸಂತಾಪ ಸೂಚನೆಯ ಗಂಭೀರ ಸಂದರ್ಭದ ಜೊತೆಗೆ ನೂತನ ಸಚಿವರ ಪರಿಚಯದ ಸಂಭ್ರಮವನ್ನು ಮಿಶ್ರಣ ಮಾಡುವ ಹೊಸ ಸಂಪ್ರದಾಯ ಬೇಡ ಎಂದು ಹೇಳಿದರು.

ಅಧಿವೇಶನದ ಅಧಿಕೃತ ಕಾರ್ಯಕಲಾಪಗಳು ಸೋಮವಾರದಿಂದ ಆರಂಭವಾಗಲಿದ್ದು, ಅಂದೇ ನೂತನ ಸಚಿವರನ್ನು ಸದನಕ್ಕೆ ಪರಿಚಯಿಸಬಹುದು ಎಂದು ಆರ್‌. ಅಶೋಕ್‌ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಭಾಧ್ಯಕ್ಷರ ಪೀಠದಲ್ಲಿದ್ದ ಹಂಗಾಮಿ ಸಭಾಧ್ಯಕ್ಷ ಟಿ.ಬಿ. ಜಯಚಂದ್ರ ಅವರು ಮಧ್ಯಪ್ರವೇಶಿಸಿ, ಸಂತಾಪ ಸೂಚನಾ ನಿರ್ಣಯ ಇನ್ನೂ ಮಂಡನೆಯಾಗಿಲ್ಲ. ಆದ್ದರಿಂದ ಮುಖ್ಯಮಂತ್ರಿ ಅವರು ನೂತನ ಸಚಿವರನ್ನು ಸದನಕ್ಕೆ ಪರಿಚಯಿಸಬಹುದು ಎಂದು ಅಭಿಪ್ರಾಯಪಟ್ಟರು.

ಕಲಾಪ ಆರಂಭವಾದ ಸಂದರ್ಭದಲ್ಲಿ ಹೊಸದಾಗಿ ಸಚಿವರಾಗಿ ನೇಮಕಗೊಂಡವರನ್ನು ಸದನಕ್ಕೆ ಪರಿಚಯಿಸುವುದು ಸಂಪ್ರದಾಯವಾಗಿದೆ. ಇದಕ್ಕೆ ನಿಯಮಗಳಲ್ಲಿಯೂ ಅವಕಾಶವಿದೆ ಎಂದು ಜಯಚಂದ್ರ ತಿಳಿಸಿದರು.ಆದರೂ ಆರ್‌. ಅಶೋಕ್‌ ಅವರು ತಮ ನಿಲುವಿಗೆ ಬದ್ಧರಾಗಿದ್ದರು. ಸಂತಾಪ ಸೂಚನೆಯ ಸಂದರ್ಭವನ್ನು ಗೌರವಿಸುವುದು ಮುಖ್ಯವಾಗಿದ್ದು, ಸಚಿವರ ಪರಿಚಯವನ್ನು ನಂತರ ನಡೆಸುವುದು ಸೂಕ್ತ ಎಂದು ಪುನರುಚ್ಚರಿಸಿದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಅವರ ಭಾವನೆಗಳಿಗೆ ತಮ ಬೆಂಬಲವಿದೆ ಎಂದು ಹೇಳಿದರು.
ಮೊದಲು ಸಂತಾಪ ಸೂಚನೆ ನಡೆಯಲಿ. ಬಳಿಕ ನೂತನ ಸಚಿವರನ್ನು ಸದನಕ್ಕೆ ಪರಿಚಯಿಸುತ್ತೇನೆ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು. ಮುಖ್ಯಮಂತ್ರಿಯವರ ಸಹಮತದ ಬಳಿಕ ಹಂಗಾಮಿ ಸಭಾಧ್ಯಕ್ಷ ಟಿ.ವಿ. ಜಯಚಂದ್ರ ಅವರು ಸಂತಾಪ ಸೂಚನಾ ನಿರ್ಣಯವನ್ನು ಕೈಗೆತ್ತಿಕೊಂಡರು. ಹೀಗಾಗಿ ನೂತನ ಸಚಿವರ ಪರಿಚಯವನ್ನು ಮುಂದೂಡಲಾಯಿತು.

RELATED ARTICLES
spot_img

Latest News