Homeಬೆಂಗಳೂರುಕೆಳಗೆ ಬಿದ್ದು, ಕಿರುಚಾಡಿದರೂ ಬಿಡದೇ ಮಹಿಳೆಯ ಸರ ಕಿತ್ತು ಪರಾರಿಯಾದ ಸರಗಳ್ಳರು

ಕೆಳಗೆ ಬಿದ್ದು, ಕಿರುಚಾಡಿದರೂ ಬಿಡದೇ ಮಹಿಳೆಯ ಸರ ಕಿತ್ತು ಪರಾರಿಯಾದ ಸರಗಳ್ಳರು

ಬೆಂಗಳೂರು,ಆ.13- ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಸರಗಳ್ಳರು ಮನೆ ಮುಂದೆಯೇ ಮಹಿಳೆಯನ್ನು ಕೆಳಗೆ ಕೆಡವಿ ಆಕೆ ಕೂಗಾಡಿ, ಕಿರುಚಾಡಿ ಪ್ರತಿರೋಧವೊಡ್ಡಿದರೂ ಸಹ ಬಿಡದೇ 15 ಗ್ರಾಂ ಸರ ಎಗರಿಸಿರುವ ಘಟನೆ ಪೀಣ್ಯ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮುನೇಶ್ವರ ಲೇಔಟ್‌ ನಿವಾಸಿ ವಿಜಯಮ (39) ಎಂಬುವವರು ನಿನ್ನೆ ಮುಂಜಾನೆ 5.15 ರ ಸುಮಾರಿನಲ್ಲಿ ಮನೆ ಮುಂದೆ ಕೆಲಸ ಮಾಡುತ್ತಿದ್ದಾಗ ಕಪ್ಪು ಬಣ್ಣದ ಸ್ಕೂಟರ್‌ನಲ್ಲಿ ಇಬ್ಬರು ಸರಗಳ್ಳರು ಬಂದಿದ್ದಾರೆ.

ಆ ವೇಳೆ ಒಬ್ಬಾತ ಸ್ಕೂಟರ್‌ನಿಂದ ಇಳಿದು ಮಹಿಳೆಯ ಹಿಂಬದಿಯಿಂದ ಬಂದು ಅವರ ಕುತ್ತಿಗೆಗೆ ಕೈ ಹಾಕಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಮಹಿಳೆ ಸರವನ್ನು ಬಿಗಿಯಾಗಿ ಹಿಡಿದು ಸರಗಳ್ಳನಿಂದ ತಪ್ಪಿಸಿಕೊಳ್ಳಲು ಕೂಗಾಡಿ, ಕಿರುಚಾಡಿ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.

ಆದರೂ ಬಿಡದೆ ಸರ ಕಿತ್ತುಕೊಳ್ಳಲು ಯತ್ನಿಸುತ್ತಿದ್ದಾಗ ಸ್ಕೂಟರ್‌ನಲ್ಲಿ ಕುಳಿತಿದ್ದ ಮತ್ತೊಬ್ಬ ಸಹಚರ ಇಳಿದು ಬಂದು ಜೊತೆ ಗೂಡಿ ಸರ ಎಗರಿಸಿ ಪರಾರಿಯಾಗಿದ್ದಾರೆ. ಈ ಘಟನೆ ಮೈ ಜುಂ ಎನ್ನುವಂತಿದೆ. ಈ ಬಗ್ಗೆ ಪೀಣ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ದೃಶ್ಯಾವಳಿಯನ್ನಾಧರಿಸಿ ಸರಗಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.

RELATED ARTICLES
spot_img

Latest News