Homeರಾಜ್ಯಇಂದಿರಾ ಕ್ಯಾಂಟೀನ್‌ಗಳ ಮೂರು ಕೇಂದ್ರಿಯ ಅಡುಗೆ ಘಟಕಗಳಿಗೆ ಬೀಗ

ಇಂದಿರಾ ಕ್ಯಾಂಟೀನ್‌ಗಳ ಮೂರು ಕೇಂದ್ರಿಯ ಅಡುಗೆ ಘಟಕಗಳಿಗೆ ಬೀಗ

hree central cooking units of Indira Canteens locked

ಬೆಂಗಳೂರು, ಅ.13- ಸ್ವಚ್ಚತೆ ಹಾಗೂ ನೈರ್ಮಲ್ಯ ಕಾಪಾಡದ ಮೂರು ಇಂದಿರಾ ಕ್ಯಾಂಟೀನ್‌ಗಳ ಕೇಂದ್ರೀಯ ಅಡುಗೆ ಘಟಕಗಳಿಗೆ ಆಹಾರ ಸುರಕ್ಷತಾ ಅಧಿಕಾರಿಗಳು ಬೀಗ ಜಡಿದಿದ್ದಾರೆ.
ಘಟನೆ ಬೆನ್ನಲ್ಲೇ ಬೆಂಗಳೂರು ಉತ್ತರ ಹಾಗೂ ದಕ್ಷಿಣ ನಗರ ಪಾಲಿಕೆ ಆಯುಕ್ತರುಗಳು ಕ್ಯಾಂಟೀನ್‌ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರರಿಗೆ ನೋಟಿಸ್‌‍ ಜಾರಿ ಮಾಡಿ, ಲಿಖಿತ ಸಮಜಾಯಿಷಿ ನೀಡುವಂತೆ ಸೂಚಿಸಿದ್ದಾರೆ.

ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಗೊಟ್ಟಿಗೆರೆ ಹಾಗೂ ಸಿಂಗಸಂದ್ರ ಮತ್ತು ಬೆಂಗಳೂರು ಉತ್ತರ ನಗರ ಪಾಲಿಕೆಯ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಲಿಂಗರಾಜಪುರದಲ್ಲಿರುವ ಇಂದಿರಾ ಕ್ಯಾಂಟೀನ್‌ಗಳ ಕೇಂದ್ರೀಯ ಅಡುಗೆ ಘಟಕಗಳಿಗೆ ಆಗಸ್ಟ್‌ 11ರಂದು ರಾಜ್ಯ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಿದ್ದರು.

ತಪಾಸಣೆ ವೇಳೆ ಅಡುಗೆ ಮನೆಗಳಲ್ಲಿ ಸ್ವಚ್ಛತೆ ಹಾಗೂ ಆಹಾರ ತಯಾರಿಕೆಯಲ್ಲಿ ಅಗತ್ಯ ನೈರ್ಮಲ್ಯ ಕ್ರಮಗಳನ್ನು ಪಾಲಿಸದಿರುವುದು ಕಂಡುಬಂದ ಹಿನ್ನೆಲೆಯಲ್ಲಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ನಿಯಮಾನುಸಾರ ಕೇಂದ್ರೀಯ ಅಡುಗೆ ಘಟಕಗಳ ಗೋದಾಮುಗಳಿಗೆ ಸೀಲ್‌ ಹಾಕಲಾಗಿದೆ.

ಇಂದಿರಾ ಕ್ಯಾಂಟೀನ್‌ ಯೋಜನೆ ಸರ್ಕಾರದ ಮಹತ್ವದ ಯೋಜನೆಯಾಗಿದ್ದು, ಕ್ಯಾಂಟೀನ್‌ಗಳ ಸ್ವಚ್ಛತೆ ಮತ್ತು ಆಹಾರ ತಯಾರಿಕೆಯಲ್ಲಿ ನೈರ್ಮಲ್ಯ ಕಾಪಾಡುವಲ್ಲಿ ನಿರ್ಲಕ್ಷ್ಯ ತೋರಿರುವ ಆರೋಪದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಆರೋಗ್ಯ ವೈದ್ಯಾಧಿಕಾರಿಗಳು, ಹೆಲ್ತ್‌ ಸೂಪರ್‌ವೈಸರ್‌ಗಳು, ಹಿರಿಯ ಆರೋಗ್ಯ ಪರಿವೀಕ್ಷಕರು ಹಾಗೂ ಆಹಾರ ಸರಬರಾಜು ಗುತ್ತಿಗೆ ಪಡೆದಿರುವ ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್‌‍ ಜಾರಿ ಮಾಡಲಾಗಿದೆ. ಈ ಕುರಿತು ಲಿಖಿತ ಸಮಜಾಯಿಷಿ ನೀಡುವಂತೆ ಸೂಚಿಸಲಾಗಿದೆ.

ಇನ್ನು ಮುಂದೆ ಇಂದಿರಾ ಕ್ಯಾಂಟೀನ್‌‍, ಇಂದಿರಾ ಅಡುಗೆಮನೆ ಹಾಗೂ ಸಂಚಾರಿ ಇಂದಿರಾ ಕ್ಯಾಂಟೀನ್‌ಗಳಲ್ಲಿ ಸ್ವಚ್ಛತೆ ಮತ್ತು ಆಹಾರ ತಯಾರಿಕೆಯಲ್ಲಿ ನೈರ್ಮಲ್ಯ ಕಾಪಾಡುವ ಕುರಿತು ಕಟ್ಟುನಿಟ್ಟಿನ ಮೇಲ್ವಿಚಾರಣೆಗೆ ಸೂಚನೆ ನೀಡಲಾಗಿದೆ.ವಾರ್ಡ್‌ ಮಟ್ಟದಲ್ಲಿ ಹೆಲ್ತ್‌ ಸೂಪರ್‌ವೈಸರ್‌ಗಳು ಹಾಗೂ ಹಿರಿಯ ಆರೋಗ್ಯ ಪರಿವೀಕ್ಷಕರು ಪ್ರತಿದಿನ ಕ್ಯಾಂಟೀನ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಸಂಬಂಧಪಟ್ಟ ಆರೋಗ್ಯ ವೈದ್ಯಾಧಿಕಾರಿಗಳು ವಾರಕ್ಕೆ ಮೂರು ಬಾರಿ ಹಾಗೂ ಆರೋಗ್ಯಾಧಿಕಾರಿಗಳು ವಾರಕ್ಕೆ ಎರಡು ಬಾರಿ ಭೇಟಿ ನೀಡಿ, ಜಿಪಿಎಸ್‌‍ ಛಾಯಾಚಿತ್ರದೊಂದಿಗೆ ವರದಿ ಸಲ್ಲಿಸಬೇಕು.

ಪರಿಶೀಲನೆ ವೇಳೆ ಯಾವುದೇ ನ್ಯೂನತೆ ಕಂಡುಬಂದರೆ ಕೂಡಲೇ ಸರಿಪಡಿಸುವಂತೆ ಸೂಚಿಸಲಾಗಿದೆ.ಇದಲ್ಲದೆ, ಬೆಂಗಳೂರು ನಗರ ಪಾಲಿಕೆ ಆಯುಕ್ತರುಗಳು, ಅಪರ ಆಯುಕ್ತರು (ಅಭಿವೃದ್ಧಿ) ಹಾಗೂ ವಿಶೇಷ ಆಯುಕ್ತರು (ಆರೋಗ್ಯ) ಪ್ರತಿ ವಾರ ಇಂದಿರಾ ಕ್ಯಾಂಟೀನ್‌ಗಳ ಕುರಿತು ಸಭೆ ನಡೆಸಿ, ಕ್ಯಾಂಟೀನ್‌ಗಳ ಸ್ವಚ್ಛತೆ, ಆಹಾರದ ಗುಣಮಟ್ಟ ಹಾಗೂ ನೈರ್ಮಲ್ಯಕ್ಕೆ ಸಂಬಂಧಿಸಿದ ನ್ಯೂನತೆಗಳನ್ನು ತಕ್ಷಣವೇ ಸರಿಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

RELATED ARTICLES
spot_img

Latest News