ಬೆಂಗಳೂರು,ಫೆ.21- ಒಗ್ಗಟ್ಟಿನಿಂದ ಪರಸ್ಪರ ವೈಷಮ್ಯ ಮರೆತು ನಾಡಿನ ಜನರ ಹೃದಯ ಗೆಲ್ಲಲು ಪ್ರಯತ್ನಿಸಬೇಕೇ ಹೊರತು ಮೈತ್ರಿ ಬಗ್ಗೆ ಬಹಿರಂಗವಾಗಿ ಪದೇ ಪದೇ ಮಾತನಾಡುವುದು ಸೂಕ್ತವಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎರಡು ಪಕ್ಷಗಳ ನಡುವಿನ ಬೆಳವಣಿಗೆಯನ್ನು ವರಿಷ್ಠರು ಗಮನಿಸಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್‌ನ ವರಿಷ್ಠರು ಮುಂಬರುವ ಚುನಾವಣೆಯ ಪೂರ್ವ ಹೊಂದಾಣಿಕೆಯ ಬಗ್ಗೆ ತೀರ್ಮಾನ ಮಾಡುತ್ತಾರೆ.
ಎರಡೂ ಪಕ್ಷಗಳು ಒಗ್ಗಟ್ಟಿನಿಂದ ಮುಂಬರುವ ವಿಧಾನಸಭೆ ಚುನಾವಣೆಯನ್ನು ಎದುರಿಸಿದ್ದೇ ಆದಲ್ಲಿ 140ರಿಂದ 150 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು ಎಂದರು. ಪದೇ ಪದೇ ಮೈತ್ರಿ ಬಗ್ಗೆ ಮಾತನಾಡುವುದು ಯಾರಿಗೂ ಸೂಕ್ತವಲ್ಲ. ಏನೇ ಮಾಡಿದರೂ ಒಗ್ಗಟ್ಟಿನ ತೀರ್ಮಾನವಾಗಬೇಕು. ಜೆಡಿಎಸ್ ಪಕ್ಷ ಒಕ್ಕಲಿಗರ ಪಕ್ಷ ಎಂಬುದು ಸರಿಯಲ್ಲ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿದ್ದರು. ಆನಂತರ ಎಂ.ಪಿ.ಪ್ರಕಾಶ್ ಅವರಿಗೂ ಡಿಸಿಎಂ ಸ್ಥಾನ ನೀಡಲಾಗಿತ್ತು. ಹೀಗಾಗಿ ಒಂದು ಸಮುದಾಯಕ್ಕೆ ಸೀಮಿತವಾದ ಪಕ್ಷವಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿನ ನಾಯಕತ್ವದ ಗೊಂದಲದ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ತೆರೆ ಎಳೆಯಬೇಕು. ಇಲ್ಲದಿದ್ದರೆ ಮುಂದಿನ ಎರಡು ವರ್ಷವೂ ಇದೇ ವಿಚಾರದಲ್ಲಿ ಕಾಲಹರಣ ಮಾಡುತ್ತಾರೆ ಎಂದು ಹೇಳಿದರು.
ಬೆಂಬಲ ಅಗತ್ಯ: ಕೋಲಾರದಲ್ಲಿ ಕೈಗಾರಿಕೆ ಪ್ರಾರಂಭಿಸಿರುವುದಕ್ಕೆ ಸ್ಥಳೀಯ ಶಾಸಕರು ಬೆಂಬಲ ನೀಡಬೇಕು. ಅದನ್ನು ಬಿಟ್ಟು ಪ್ರಚೋದನೆ ನೀಡುವ ರೀತಿಯಲ್ಲಿ ಹೇಳಿಕೆ ನೀಡಬಾರದು. ಕೈಗಾರಿಕೆ ಸ್ಥಾಪನೆಯಾದರೆ ರಾಜ್ಯದ ಅಭಿವೃದ್ದಿಗೆ ಅನುಕೂಲವಾಗಲಿದೆ. ಇದನ್ನು ಶಾಸಕರು ಅರ್ಥ ಮಾಡಿಕೊಳ್ಳಬೇಕು ಎಂದರು.
ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಹೇರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು. ಅದರ ಸುವರ್ಣ ಮಹೋತ್ಸವದ ಆಚರಣೆಯನ್ನು ಕಾಂಗ್ರೆಸ್‌ನವರು ಮಾಡುತ್ತಿರಬಹುದೆಂಬ ಭಾವನೆ ಮೂಡಿದ್ದು, ತುರ್ತು ಪರಿಸ್ಥಿತಿಯ 2.0 ಘೋಷಣೆ ಮಾಡಲಿ ಎಂದು ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮಾಧ್ಯಮಗಳು ಅಭಿಪ್ರಾಯ ವ್ಯಕ್ತಪಡಿಸಲು ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಹೀಗಿದ್ದರೂ ಮಾಧ್ಯಮಗಳಿಗೆ ನಿರ್ಬಂಧ ಹೇರುತ್ತಿರುವುದು ಸರಿಯಲ್ಲ.ಇದನ್ನು ಬಿಡಬೇಕು. ಮಾಧ್ಯಮಗಳಿಗೆ ನಮ ಪಕ್ಷ ಬೆಂಬಲ ನೀಡಲಿದೆ ಎಂದರು. ವಿಧಾನಸೌಧದಲ್ಲಿನ ಅನೇಕ ಲೋಪದೋಷಗಳನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್‌ನವರು ಮಾಧ್ಯಮಗಳಿಗೆ ನಿರ್ಬಂಧ ಹೇರುತ್ತಿದ್ದಾರೆ. ಇದನ್ನು ಕರಾಳ ದಿನ ಎಂದೇ ಪರಿಗಣಿಸಬೇಕಾಗುತ್ತದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
