ಬೆಂಗಳೂರು,ಮಾ.23- ಮಾನವ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ನಿಮ ವಿರುದ್ಧ ದೂರು ದಾಖಲಾಗಿದೆ ಎಂದು ನಿವೃತ್ತ ಸಂಶೋಧಕರೊಬ್ಬರಿಗೆ ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ಹೆದರಿಸಿ ಡಿಜಿಟಲ್ ಅರೆಸ್ಟ್ ಮೂಲಕ 5 ಕೊಟಿ ಹಣ ಲಪಟಾಯಿ ಸಿರುವುದು ಬೆಳಕಿಗೆ ಬಂದಿದೆ.
ನಗರದ ವಿಕ್ಟೋರಿಯಾ ರಸ್ತೆಯಲ್ಲಿ ರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿರುವ 94 ವರ್ಷದ ನಿವೃತ್ತ ಸಂಶೋಧಕರೊಬ್ಬರಿಗೆ ಕಳೆದ ಡಿ.2 ರಂದು ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ನಾವು ಟೆಲಿಕಾಂ ಕಚೇರಿಯಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿ ನಿಮ ವಿರುದ್ಧ ಬಳ್ಳಾರಿ ಪೊಲೀಸ್ ಠಾಣೆಯಲ್ಲಿ ಮಾನವ ಕಳ್ಳಸಾಗಾಣಿಕೆ ಸಂಬಂಧ ಪ್ರಕರಣ ದಾಖಲಾಗಿದೆ ಎಂದು ಹೆದರಿಸಿದ್ದಾರೆ.
ತದನಂತರ ಇನ್‌ಸ್ಪೆಕ್ಟರ್ ಕರೆ ಮಾಡುತ್ತಾರೆಂದು ಫೋನ್ ಸ್ಥಗಿತಗೊಳಿಸಿದ ಕೆಲವೇ ನಿಮಿಷಗಳಲ್ಲಿ ಸಂದೀಪ್ ರಾವ್ ಎಂಬ ವ್ಯಕ್ತಿ ಮತ್ತೆ ಕರೆ ಮಾಡಿ ನಾವು ಸಿಬಿಐ ಅಧಿಕಾರಿಗಳು ಎಂದು ಹೇಳಿ ಈ ದೂರನ್ನು ಸಿಬಿಐಗೆ ವರ್ಗಾಯಿಸುವುದಾಗಿ ತಿಳಿಸಿ ನಿಮ ಆಧಾರ್‌ಕಾರ್ಡ್ ಅನ್ನು ವಾಟ್ಸಾಪ್‌ನಲ್ಲಿ ಕಳುಹಿಸುವಂತೆ ಹೇಳಿದ್ದಾರೆ.
ನಂತರ ವಾಟ್ಸಾಪ್ ಮೂಲಕ ನಕಲಿ ಎಫ್‌ಐಆರ್ ಅನ್ನು ಕಳುಹಿಸಿ ಹಲವು ಮೊಬೈಲ್ ಫೋನ್‌ಗಳಿಂದ ವಾಟ್ಸಾಪ್ ಮೂಲಕ ವಿಡಿಯೋ ಕರೆ ಮಾಡಿ ಸಿಬಿಐ ಪೊಲೀಸರ ರೀತಿ ಸಮವಸ್ತ್ರ ಧರಿಸಿ ನಿಮನ್ನು ಡಿಜಿಟಲ್ ಅರೆಸ್ಟ್ ಮಾಡಿರುವುದಾಗಿ ಹೆದರಿಸಿದ್ದಾರೆ.ನೀವು ಯಾರ ಜೊತೆಯೂ ಮಾತನಾಡಬಾರದು ಮತ್ತು ವಾಟ್ಸಾಪ್‌ನಲ್ಲಿ ಪ್ರತಿ ಮೂರು ಗಂಟೆಗೊಮೆ ನಾವು ಕಳುಹಿಸುವ ಮೆಸೇಜ್‌ಗೆ ರಿಪ್ಲೈ ಮಾಡಬೇಕು, ನಾವು ಹೇಳಿದಂತೆ ಕೇಳಬೇಕು ಎಂದು ಭಯಪಡಿಸಿದ್ದಾರೆ.
ನಿಮ ವಿರುದ್ಧ ದಾಖಲಾಗಿರುವ ಪ್ರಕರಣವು ಗಂಭೀರವಾಗಿದ್ದು, ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ಸಿಬಿಐನಲ್ಲಿ ನಿಮ ವಿರುದ್ಧ ದಾಖಲಾಗಿರುವ ಪ್ರಕರಣಗಳಿಂದ ನಿಮನ್ನು ಕೈಬಿಡಲು ಹಣ ಕೊಡಬೇಕು ಎಂದು ಬೆದರಿಕೆ ಹಾಕಿದ್ದಾರೆ.
ಇದರಿಂದ ಹೆದರಿದ ಸಂಶೋಧಕರು ಡಿ.17 ರಿಂದ ಫೆ.23 ರವರೆಗೆ ತಮ ಹಾಗೂ ಪತ್ನಿ ಹೆಸರಿನಲ್ಲಿರುವ ಜಂಟಿ ಖಾತೆಯಿಂದ ಹಂತಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ಸುಮಾರು 4,91,22,000 ರೂ.ಗಳನ್ನು ಆರ್‌ಟಿಜಿಎಸ್ ಮೂಲಕ ವರ್ಗಾಯಿಸಿದ್ದಾರೆ.ತದನಂತರದಲ್ಲಿ ಇನ್ನೂ ಹೆಚ್ಚಿನ ಹಣಕ್ಕೆ ಬೇಡಿಕೆಯಿಟ್ಟು ಬೆದರಿಕೆ ಹಾಕಿದ್ದಾರೆ. ನಂತರದಲ್ಲಿ ರಾಜ್‌ಗೋಪಾಲನ್ ಅವರಿಗೆ ಜ್ಞಾನೋದಯವಾಗಿ ಈ ಬಗ್ಗೆ ಸೈಬರ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಇತ್ತೀಚೆಗಷ್ಟೇ ವೃದ್ಧ ಉದ್ಯಮಿಯೊಬ್ಬರು 15 ಕೋಟಿ ಹಣ ಕಳೆದುಕೊಂಡ ಬೆನ್ನಲ್ಲೇ ಇದೀಗ ಮತ್ತೊಂದು ಅಂತಹುದೇ ಪ್ರಕರಣ ಬೆಳಕಿಗೆ ಬಂದಿದ್ದು, ನಿವೃತ್ತ ಸಂಶೋಧಕರೊಬ್ಬರು 5 ಕೋಟಿ ಹಣ ಕಳೆದುಕೊಡಿದ್ದಾರೆ.
ಎಚ್ಚೆತ್ತುಕೊಳ್ಳಿ :
ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಪದೇಪದೇ ಡಿಜಿಟಲ್ ಅರೆಸ್ಟ್ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆಯಿಂದಿರುವಂತೆ ಮನವಿ ಮಾಡುತ್ತಿದ್ದರೂ ಹಣ ಕಳೆದುಕೊಳ್ಳುತ್ತಿರುವುದು ಮಾತ್ರ ನಿಂತಿಲ್ಲ.
ಪೊಲೀಸ್ ಇಲಾಖೆಯಲ್ಲಿ ಡಿಜಿಟಲ್ ಅರೆಸ್ಟ್ ಎಂಬುದೇ ಇಲ್ಲ ಎಂದು ಈಗಾಗಲೇ ಹಲವು ಬಾರಿ ಹೇಳುತ್ತಲೇ ಇದ್ದಾರೆ. ಆದರೂ ಸಹ ಒಂದಲ್ಲಾ ಒಂದು ರೀತಿಯಲ್ಲಿ ತಮ ಮೊಬೈಲ್‌ಗೆ ಬರುವ ಕರೆಗಳಿಂದ ಒಂದು ಕ್ಷಣ ಯೋಚಿಸದೇ ಸೈಬರ್ ವಂಚಕರು ಸೂಚಿಸುವ ರೀತಿ ನಡೆದುಕೊಂಡು ಹಣ ಕಳೆದುಕೊಳ್ಳುತ್ತಿರುವುದು ವಿಷಾದನೀಯ.
