ಬೆಂಗಳೂರು, ಜು.20- ಬಿಡದಿ ಟೌನ್‌ಶಿಪ್‌ಗಾಗಿ ಭೂ ಸ್ವಾಧೀನವನ್ನು ವಿರೋಧಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.ಕೆ.ಬಿ.ರಾಜೇಶ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಕೆ.ಎಫ್.ಹೇಮಲತಾ ಅವರನ್ನೊಳಗೊಂಡ ವಿಭಾಗೀಯ ಪೀಠ ವಿಚಾರಣೆ ನಡೆಸಿತ್ತು. ಅರ್ಜಿದಾರರಾದ ರಾಜೇಶ್ ಅವರು ಉಪನಗರ ಯೋಜನೆಗಾಗಿ ಬಿಡದಿ ಭಾಗದಲ್ಲಿ ಭೂ ಸ್ವಾಧೀನ ಪಡಿಸಿಕೊಳ್ಳಲು ನಗರಾಭಿವೃದ್ಧಿ ಇಲಾಖೆ 2026ರ ಜೂನ್ 10ರಂದು ಹೊರಡಿಸಲಾಗಿರುವ ಅಧಿಸೂಚನೆ ಸಂಪೂರ್ಣ ಕಾನೂನಿನ ಬಾಹಿರವಾಗಿದೆ ಎಂದು ವಾದಿಸಿದರು.
9,400 ಎಕರೆಯನ್ನು ಭೂ ಪರಿವರ್ತನೆ ಮಾಡಿ ಸರ್ಕಾರ ರಿಯಲ್ ಎಸ್ಟೇಟ್ ವ್ಯವಹಾರ ಮಾಡಲು ಮುಂದಾಗಿದೆ. ಫಲವತ್ತಾದ ಈ ಭೂಮಿಯಲ್ಲಿ ರೈತರು ವ್ಯವಸಾಯ ಮಾಡಲು ಇಚ್ಚಿಸಿದ್ದಾರೆ ಎಂದು ಹೇಳಿದರು.
ಯಾವುದೇ ಯೋಜನೆಗೆ ಭೂ ಸ್ವಾಧೀನವಾಗಬೇಕಾದರೆ, ಶೇ.80 ರಷ್ಟು ರೈತರ ಒಪ್ಪಿಗೆ ಆಗತ್ಯ ಇದೆ. ಬಿಡದಿ ಭಾಗದಲ್ಲಿ ಭೂಮಿ ನೀಡಲು ಇಷ್ಟವಿಲ್ಲದೇ, ಸುಮಾರು 500 ದಿನಗಳಿಂದಲೂ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಯೊಂದು ಸರ್ಕಾರವು ತನ್ನದೇ ಆದ ನಿಲುವನ್ನು ವ್ಯಕ್ತಪಡಿಸುತ್ತದೆ. 2028ಕ್ಕೆ ಬೇರೊಬ್ಬ ಮುಖ್ಯಮಂತ್ರಿ ಬರಬಹುದು, ಆಗ ಯೋಜನೆಯ ಸ್ವರೂಪವೂ ಬದಲಾಗಬಹುದು. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಹಂತದಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳು ಭೂ ಸ್ವಾಧೀನದಲ್ಲಿ ಯಾವ ನಿಯಮ ಉಲ್ಲಂಘನೆಯಾಗಿದೆ ಎಂದು ಸ್ಪಷ್ಟವಾಗಿ ವಿವರಿಸಿ, ನ್ಯಾಯಾಲಯ ಯೋಜನೆಯ ಮೆರಿಟ್ ಮೇಲೆ ಪ್ರಕರಣ ನಿರ್ಧರಿಸುವುದಿಲ್ಲ. ನಿಯಮ ಉಲ್ಲಂಘನೆಯಾಗಿದ್ದರೆ ಅದನ್ನು ಹೇಳಬಹುದು ಎಂದು ಪದೇ ಪದೇ ಅರ್ಜಿದಾರರನ್ನು ಪ್ರಶ್ನಿಸಿದೆ.
ಒಂದು ಹಂತದಲ್ಲಿ ನಾವು ರಾಜಕೀಯ ಚರ್ಚೆ ಮಾಡುತ್ತಿಲ್ಲ, ನಿಯಮ ಉಲ್ಲಂಘನೆಯಾಗಿದೆಯೇ? ಎಂಬ ಕುರಿತು ಮಾತ್ರ ಮಾಹಿತಿ ಕೇಳುತ್ತಿದ್ದೇವೆ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು. ಅರ್ಜಿದಾರರಿಂದ ಸಮರ್ಪಕ ಉತ್ತರ ಬಾರದಿದ್ದರಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
