ಬೆಂಗಳೂರು, ಜೂ. 16- ಖಾತೆ ಹಂಚಿಕೆ ವಿಚಾರವಾಗಿ ಅಸಮಾಧಾನದಿಂದಿದ್ದ ಇಬ್ಬರು ಸಚಿವರು ಇಂದು ಇಲಾಖೆಯ ಕಾರ್ಯಭಾರ ಆರಂಭಿಸಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ, ಜಲಸಂಪನೂಲ ಸಚಿವ ರಾಮಲಿಂಗಾರೆಡ್ಡಿಯವರು ಇಂದು ತಮ್ಮ ಮುನಿಸು ಮರೆತು ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು ನಗರಾಭಿವೃದ್ಧಿಯಂತಹ ಪ್ರಮುಖ ಜವಾಬ್ದಾರಿ ಹಂಚಿಕೆಯಾಗಿದ್ದರೂ ಕೃಷ್ಣಭೈರೇಗೌಡ ಕಳೆದ 13 ದಿನಗಳಿಂದ ಇಲಾಖೆಯ ಕಾರ್ಯಭಾರ ಆರಂಭಿಸಿರಲಿಲ್ಲ. ರಾಮಲಿಂಗಾ ರೆಡ್ಡಿಯವರು ಬೆಂಗಳೂರು ನಗರಾಭಿವೃದ್ಧಿ ಖಾತೆ ಬೇಕೆಂದು ಪಟ್ಟು ಹಿಡಿದು ಸಚಿವ ಸ್ಥಾನಕ್ಕೆ ಈ ಮೊದಲು ರಾಜೀನಾಮೆ ನೀಡಿದ್ದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇರವಾಗಿ ರಾಮಲಿಂಗಾ ರೆಡ್ಡಿಯವರ ಮನವೊಲಿಸುವ ಪ್ರಯತ್ನ ಮಾಡಿದ್ದರು. ಒಂದು ಹಂತದಲ್ಲಿ ತಮ ಅಸಮಾಧಾನವನ್ನು ಬಿಟ್ಟುಕೊಡದ ರಾಮಲಿಂಗಾರೆಡ್ಡಿ ಸಂಧಾನ ಸಭೆಯ ಬಳಿಕ ಮುಖ್ಯಮಂತ್ರಿಯವರೊಂದಿಗೆ ದೆಹಲಿಗೆ ತೆರಳಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದರು.
ಬೆಂಗಳೂರಿಗೆ ಮರಳಿದ ಬಳಿಕ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದ ರಾಮಲಿಂಗಾ ರೆಡ್ಡಿಯವರು ಇಂದು ಇಲಾಖೆಯ ಅಧಿಕಾರಿಗಳ ಜೊತೆ ಔಪಚಾರಿಕ ಸಭೆ ನಡೆಸಬೇಕಿತ್ತು. ಆದರೆ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಇಂದು ಸಂಜೆ ರೆಸಾರ್ಟ್‌ಗೆ ತೆರಳಬೇಕಿರುವುದರಿಂದ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಾರ್ಯದೊತ್ತಡದಲ್ಲಿರುವುದರಿಂದ ರಾಮಲಿಂಗಾರೆಡ್ಡಿಯವರ ಸಮುಖದಲ್ಲಿ ನಡೆಯಬೇಕಿದ್ದ ನೀರಾವರಿ ನಿಗಮಗಳ ಸಭೆ ಮುಂದೂಡಿಕೆಯಾಗಿದೆ.
ಬೆಂಗಳೂರು ನಗರಾಭಿವೃದ್ಧಿಯಂತಹ ಪ್ರಮುಖ ಜವಾಬ್ದಾರಿ ಹಂಚಿಕೆಯಾಗಿದ್ದರೂ ಕೃಷ್ಣಭೈರೇಗೌಡ ಕಾರ್ಯ ಆರಂಭ ಮಾಡಿರಲಿಲ್ಲ, ರಾಮಲಿಂಗಾ ರೆಡ್ಡಿಯವರ ಒತ್ತಡಕ್ಕೆ ಮಣಿದು ತಮಿಂದ ನಗರಾಭಿವೃದ್ಧಿ ಖಾತೆ ಕಸಿದುಕೊಳ್ಳಬಹುದು ಎಂಬ ಗೊಂದಲ ಅವರಲ್ಲಿತ್ತು. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಒತ್ತಾಯಿಸಿದ್ದರು.
ಒಂದು ಹಂತದಲ್ಲಿ ರಾಮಲಿಂಗಾ ರೆಡ್ಡಿಯವರು, ಬೆಂಗಳೂರು ನಗರಾಭಿವೃದ್ಧಿ ಖಾತೆ ದೊರೆಯದ ಕಾರಣಕ್ಕೆ ನಿರಾಸೆಗೊಂಡು ಇನ್ನು ಮುಂದೆ ಆ ಜವಾಬ್ದಾರಿ ಕೊಟ್ಟರೂ ತಾವು ನಿರ್ವಹಣೆ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಹೀಗಾಗಿ ಕೃಷ್ಣಭೈರೇಗೌಡ ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಪಕ್ಕಾ ಆದಂತಾಗಿದೆ. ಆದರೆ ಬಿಡಿಎ, ಬಿಎಂಆರ್‌ಡಿ ಖಾತೆಗಳನ್ನು ಮುಖ್ಯಮಂತ್ರಿಯವರು ತಮ ಬಳಿಯೇ ಉಳಿಸಿಕೊಂಡಿದ್ದಾರೆ. ಬೆಂಗಳೂರು ನಗರಾಭಿವೃದ್ಧಿಯ ಸಮಗ್ರ ಜವಾಬ್ದಾರಿಯನ್ನು ತಮಗೆ ವಹಿಸಬೇಕೆಂದು ಕೃಷ್ಣಭೈರೇಗೌಡ ಅಗ್ರಹಿಸಿದ್ದರು.
ಆದರೆ ಅದರ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಇಂದು ಗ್ರೇಟರ್ ಬೆಂಗಳೂರು ವ್ಯಾಪ್ತಿಯ 5 ಪಾಲಿಕೆಗಳ ಆಯುಕ್ತರು, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ಬೆಂಗಳೂರಿನ ರಸ್ತೆ ಸುಧಾರಣೆ, ಕುಡಿಯುವ ನೀರಿನ ಪೂರೈಕೆ, ಆಡಳಿತ ವ್ಯವಸ್ಥೆ, ಮೂಲ ಸೌಲಭ್ಯ ಅಭಿವೃದ್ಧಿ, ನಾಗರಿಕ ಸ್ನೇಹಿ ವಾತಾವರಣ, ಉದ್ಯಾನವನಗಳ ಅಭಿವೃದ್ಧಿ ಕುರಿತಂತೆ ಹಲವು ವಿಚಾರಗಳು ಚರ್ಚೆ ನಡೆಸಲಾಗಿದೆ.
