Homeರಾಜ್ಯನಾಡಹಬ್ಬ ದಸರಾಗೆ ಸಿದ್ಧತೆ : ಅರಮನೆ ನಗರಿಯಲ್ಲಿ ಭರದಿಂದ ಸಾಗಿವೆ ವಿವಿಧ ಕಾಮಗಾರಿಗಳು

ನಾಡಹಬ್ಬ ದಸರಾಗೆ ಸಿದ್ಧತೆ : ಅರಮನೆ ನಗರಿಯಲ್ಲಿ ಭರದಿಂದ ಸಾಗಿವೆ ವಿವಿಧ ಕಾಮಗಾರಿಗಳು

ಮೈಸೂರು, ಸೆ.23- ನಾಡಹಬ್ಬ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ನಗರದ ರಾಜಮಾರ್ಗ ಸೇರಿದಂತೆ ವಿವಿಧೆಡೆ ದಸರಾ ಕಾಮಗಾರಿಗಳು ಭರದಿಂದ ಸಾಗಿವೆ. ಸೆ.30ರೊಳಗೆ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಲು ಗಡುವು ನೀಡಲಾಗಿದೆ. ಕಳೆದ ಒಂದು ವಾರದಿಂದ 24 ಗಂಟೆಯೂ ಕಾಮಗಾರಿ ನಡೆಯುತ್ತಿದ್ದು, ದಸರಾ ಆರಂಭಕ್ಕೂ ಮುನ್ನ ರಸ್ತೆ ಕಾಮಗಾರಿ ಸೇರಿದಂತೆ ಎಲ್ಲಾ ಸಿವಿಲ್‌ ಕಾಮಗಾರಿಗಳನ್ನು ಪೂರ್ಣಗೊಳಿಸಲು ಮೈಸೂರು ನಗರಪಾಲಿಕೆ ಕ್ರಮ ಕೈಗೊಂಡಿದೆ. ಮಳೆಯಿಂದ ಹಾಳಾಗಿದ್ದ ಫುಟ್‌ಪಾತ್‌ಗಳನ್ನು ದುರಸ್ತಿಪಡಿಸಲಾಗುತ್ತಿದ್ದು, ಯುಜಿಡಿ ಕಾಮಗಾರಿಗಾಗಿ ಅಗೆದಿದ್ದ ಗುಂಡಿಗಳನ್ನು ಮುಚ್ಚಿ ಡಾಂಬರೀಕರಣ ಮಾಡಲಾಗುತ್ತಿದೆ.

ಈ ಹಿಂದೆ ದಸರಾ ಸಮೀಪಿಸಿದಾಗ ಕಾಮಗಾರಿ ಆರಂಭಿಸುತ್ತಿದ್ದರಿಂದ ದಸರಾ ವೇಳೆಯೂ ಕಾಮಗಾರಿ ಮುಂದುವರಿಯುತ್ತಿತ್ತು. ಇದರಿಂದ ಅವಸರದ ಹಾಗೂ ಕಳಪೆ ಕಾಮಗಾರಿ ನಡೆಯುತ್ತಿತ್ತು. ಇದನ್ನು ಮನಗಂಡ ನಗರಪಾಲಿಕೆ ಆಯುಕ್ತೆ ಎಂ.ಕೆ. ಸವಿತಾ ಅವರು ಎರಡು ತಿಂಗಳ ಮುಂಚಿತವಾಗಿಯೇ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿ ಕಾರ್ಯಾದೇಶ ನೀಡಿದ್ದರಿಂದ ಈ ಬಾರಿ ಎಲ್ಲೆಡೆ ಕಾಮಗಾರಿ ನಡೆಸಲು ಸಾಧ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

5.96 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ

ದಸರಾ ಅಂಗವಾಗಿ 5.96 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕೆ.ಆರ್‌. ವೃತ್ತ, ಚಾಮರಾಜೇಂದ್ರ ಒಡೆಯರ್‌ ವೃತ್ತ, ಚಾಮರಾಜ ವೃತ್ತ ಹಾಗೂ ಆಯುರ್ವೇದ ವೃತ್ತಗಳ ರಸ್ತೆಗಳಲ್ಲಿ ಡಾಂಬರೀಕರಣ, ಗ್ರಿಲ್‌ ದುರಸ್ತಿ ಹಾಗೂ ಬಣ್ಣ ಬಳಿಯುವ ಕೆಲಸ ನಡೆಯುತ್ತಿದೆ.ಫುಟ್‌ಪಾತ್‌ನ ಎರಡೂ ಬದಿಗಳಲ್ಲಿ ಹಾಳಾಗಿರುವ ಟೈಲ್ಸ್‌ಗಳನ್ನು ತೆಗೆದು ಹೊಸ ಟೈಲ್ಸ್‌ ಅಳವಡಿಸಿ ಬಣ್ಣ ಬಳಿಯಲಾಗುತ್ತಿದೆ. ಆಯುರ್ವೇದ ಕಾಲೇಜು ವೃತ್ತದ ಬಳಿ ಟೈಲ್ಸ್‌ ಬದಲಾವಣೆ ಕಾರ್ಯ ಭರದಿಂದ ಸಾಗಿದೆ.

ಬಂಬೂಬಜಾರ್‌ನಿಂದ ಬನ್ನಿಮಂಟಪದವರೆಗೆ ಹಾಗೂ ನೆಲ್ಸನ್‌ ಮಂಡೇಲಾ ರಸ್ತೆಯವರೆಗೆ ಫುಟ್‌ಪಾತ್‌ ದುರಸ್ತಿ, ಪೇಂಟಿಂಗ್‌, ಕರ್ಬ್‌ ಪೇಂಟಿಂಗ್‌ ಮತ್ತು ಕಾರಂಜಿ ದುರಸ್ತಿ ಕಾರ್ಯ ನಡೆಯುತ್ತಿದೆ.ಯುಜಿಡಿ ಕಾಮಗಾರಿಗಾಗಿ ಅಗೆದಿದ್ದ ಜಾಗಗಳಲ್ಲಿ ಜಲ್ಲಿ, ಮಣ್ಣು ತುಂಬಿ ಮುಚ್ಚಿ ಡಾಂಬರೀಕರಣ ಮಾಡಲಾಗುತ್ತಿದೆ. ಬೆಂಗಳೂರು ರಸ್ತೆ, ಗನ್‌ಹೌಸ್‌ ವೃತ್ತದಿಂದ ಎಲೆತೋಟದ ರಸ್ತೆ, ಕೃಷ್ಣರಾಜ ಬುಲೆವಾರ್ಡ್‌ ರಸ್ತೆಯಿಂದ ಏಕಲವ್ಯ ವೃತ್ತ, ವಿನೋಬಾ ರಸ್ತೆ ಹಾಗೂ ಧನ್ವಂತರಿ ರಸ್ತೆ ಮಾರ್ಗಗಳಲ್ಲಿ ಪೇಂಟಿಂಗ್‌, ಕರ್ಬ್‌ ಪೇಂಟಿಂಗ್‌ ಮತ್ತು ಟೈಲ್ಸ್‌ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.

ಮೈಸೂರು ದಸರಾ ಅಂಗವಾಗಿ ಅ.2,3ರಂದು ಚಿತ್ರಸಂತೆ :

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಈ ಬಾರಿ ಚಿತ್ರಸಂತೆಯನ್ನು ಅ.2 ಮತ್ತು 3 ರಂದು ಆಯೋಜಿಸಲಾಗಿದೆ. ಮೈಸೂರು ವಿಶ್ವವಿದ್ಯಾನಿಲಯದ ಕ್ಲಾಕ್‌ ಟವರ್‌ ಮುಂಭಾಗದ ರಸ್ತೆಯಲ್ಲಿ ಚಿತ್ರಸಂತೆ ನಡೆಯಲಿದೆ.ಚಿತ್ರಸಂತೆಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಕಲಾವಿದರು ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಸೆ.24 ಕೊನೆಯ ದಿನಾಂಕವಾಗಿದೆ.

ಬಂದಿರುವ ಅರ್ಜಿಗಳನ್ನು ಆಯ್ಕೆ ಸಮಿತಿ ಪರಿಶೀಲಿಸಿ, ಶಿಫಾರಸಿನ ಮೇರೆಗೆ ಅರ್ಹ ಕಲಾವಿದರಿಗೆ ಮಳಿಗೆಗಳನ್ನು ನೀಡಲಾಗುವುದು. ಎರಡು ದಿನಗಳ ಕಾಲ ನಡೆಯುವ ಈ ಸಂತೆಯಲ್ಲಿ ಸಾರ್ವಜನಿಕರು ವಿವಿಧ ಕಲಾಕೃತಿಗಳನ್ನು ವೀಕ್ಷಿಸಲು ಮತ್ತು ಖರೀದಿಸಲು ಅವಕಾಶ ಇರಲಿದೆ. ಆನ್‌ ಲೈನ್‌ ನೋಂದಣಿಗಾಗಿ ಪ್ರಕಟಣೆಯಲ್ಲಿರುವ ಕ್ಯೂ ಆರ್‌ ಕೋಡ್‌ ಬಳಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್‌ ಸಂಖ್ಯೆ 88613 98811 ಅನ್ನು ಸಂಪರ್ಕಿಬಹುದು.

RELATED ARTICLES
spot_img

Latest News