Homeರಾಜ್ಯಹಾಸನಾಂಬ ದೇಗುಲದ ಸುತ್ತಮುತ್ತಲಿನ ಮನೆ-ಮಳಿಗೆಗಳ ಸ್ವಾಧೀನಕ್ಕೆ ಚಿಂತನೆ

ಹಾಸನಾಂಬ ದೇಗುಲದ ಸುತ್ತಮುತ್ತಲಿನ ಮನೆ-ಮಳಿಗೆಗಳ ಸ್ವಾಧೀನಕ್ಕೆ ಚಿಂತನೆ

ಹಾಸನ,ನ.6- ದೇವಸ್ಥಾನದ ಅಭಿವೃದ್ಧಿಗೆ ಸ್ಥಳಾವಕಾಶ ವಿಸ್ತರಣೆ ಅಗತ್ಯವಿದೆ. ಪ್ರದರ್ಶನ ಮೈದಾನದಲ್ಲಿ ಧರ್ಮದರ್ಶನದ ಭಕ್ತರಿಗೆ ವಸತಿ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಹಾಸನಾಂಬ ದೇಗುಲದ ಸುತ್ತಮುತ್ತಲಿನ ಮನೆ-ಮಳಿಗೆಗಳ ಸ್ವಾಧೀನಕ್ಕೆ ಚಿಂತನೆಯಿದೆ ಎಂದು ಶಾಸಕ ಎಚ್‌.ಪಿ. ಸ್ವರೂಪ್‌ ಪ್ರಕಾಶ್‌ ತಿಳಿಸಿದರು.

ನಗರದಲ್ಲಿ ಕುಟುಂಬ ಸಮೇತರಾಗಿ ಹಾಸನಾಂಬ ದೇವಿಯ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಕುಟುಂಬ ಸಮೇತರಾಗಿ ಹಾಸನಾಂಬೆ ದೇವಿಯ ದರ್ಶನ ಪಡೆದು ಆಶೀರ್ವಾದ ಪಡೆದಿದ್ದೇನೆ. ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿದ್ದು, ಉತ್ತಮ ಮಳೆ-ಬೆಳೆಯಾಗಲಿ, ನಾಡಿನ ಜನತೆ ಸುಖ-ಸಮೃದ್ಧಿಯಿಂದ ಬದುಕುವಂತಾಗಲೆಂದು ದೇವಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದು ಹೇಳಿದರು.

ಹಾಸನಾಂಬ ದೇವಸ್ಥಾನದ ಸುತ್ತಮುತ್ತಲಿನ ಮನೆಗಳು, ಅಂಗಡಿ ಮತ್ತು ವಾಣಿಜ್ಯ ಮಳಿಗೆಗಳನ್ನು ಸ್ವಾಧೀನಪಡಿಸಿಕೊಂಡು ದೇವಸ್ಥಾನದ ಅಭಿವೃದ್ಧಿಗೆ ಬಳಸಿಕೊಳ್ಳುವ ಚಿಂತನೆ ಇದೆ. ಈ ಹಿಂದೆ ಉಪವಿಭಾಗಾಧಿಕಾರಿಗಳಾಗಿದ್ದ ಸಂದರ್ಭದಲ್ಲಿ ಸ್ಥಳೀಯ ನಾಗರಿಕರೊಂದಿಗೆ ಚರ್ಚೆ ನಡೆಸಿದಾಗ, ದೇವಸ್ಥಾನದ ಸುತ್ತಮುತ್ತಲಿನ ನಿವಾಸಿಗಳು ಹಾಗೂ ಮಳಿಗೆಗಳ ಮಾಲೀಕರು ಜಾಗ ಬಿಟ್ಟುಕೊಡಲು ಸಮತಿ ಸೂಚಿಸಿದ್ದರು.

ನಗರದ ನಗರಸಭೆ ವ್ಯಾಪ್ತಿಯಲ್ಲಿರುವ ಎಕ್ಸಿಬಿಷನ್‌ ಹಾಲ್‌ ಮತ್ತು ಅದರ ವಿಶಾಲ ಮೈದಾನವನ್ನು ಬಳಸಿಕೊಂಡರೆ ಸುಮಾರು 30-40 ಸಾವಿರ ಭಕ್ತರಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಬಹುದು. ಈ ಕುರಿತು ಜಿಲ್ಲಾಡಳಿತ, ಉಪವಿಭಾಗಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.

ಮಾಜಿ ಸಚಿವ ಎಚ್‌.ಡಿ. ರೇವಣ್ಣ ಅವರು ಇನ್ನೂ ಹಾಸನಾಂಬ ದೇವಿಯ ದರ್ಶನ ಪಡೆದಿಲ್ಲ ಎಂಬುದು ಗಮನಕ್ಕೆ ಬಂದಿದೆ. ಹಾಸನ ಜಿಲ್ಲೆಗೆ ರೇವಣ್ಣ ಅವರ ಕೊಡುಗೆ ಅಪಾರವಾಗಿದೆ. ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವರು ಅವರನ್ನು ಕಡೆಗಣಿಸುತ್ತಿದ್ದಾರೆ ಎಂಬ ಭಾವನೆ ನನಗೂ ಇದೆ. ಹಿರಿಯ ನಾಯಕರಿಗೆ ಗೌರವ ನೀಡುವ ಕೆಲಸವಾಗಬೇಕು ಎಂದು ಅಭಿಪ್ರಾಯಪಟ್ಟರು.

ರಾಜ್ಯ ಸರ್ಕಾರ ಬಸ್‌‍ ಪ್ರಯಾಣ ದರ ಏರಿಕೆ ಮಾಡಿರುವುದನ್ನು ಖಂಡಿಸುತ್ತೇವೆ. ಮಹಿಳೆಯರಿಗೆ ಉಚಿತ ಬಸ್‌‍ ಪ್ರಯಾಣದ ಸೌಲಭ್ಯ ನೀಡುತ್ತಿರುವ ಸರ್ಕಾರ ಮತ್ತೊಂದೆಡೆ ಪ್ರಯಾಣ ದರ ಹೆಚ್ಚಿಸಿರುವುದು ಸಾರ್ವಜನಿಕರಿಗೆ ಹೊರೆಯಾಗಲಿದೆ ಎಂದರು.

RELATED ARTICLES

Latest News