ಬೆಂಗಳೂರು,ಜು.8-ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆ ಆರ್ಭಟ ಜೋರಾಗಿದ್ದು, ಅತಿವೃಷ್ಟಿ ಉಂಟಾಗಿದೆ. ಆದರೆ,ದಕ್ಷಿಣ ಒಳನಾಡಿನಲ್ಲಿ ಮಳೆ ಕೊರತೆಯಿಂದ ಅನಾವೃಷ್ಟಿಯಾಗಿದೆ.ಜೂನ್ ತಿಂಗಳಲ್ಲಿ ಉಂಟಾದ ಮಳೆ ಕೊರತೆಯು ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಜುಲೈನಲ್ಲೂ ಮುಂದುವರೆದಿದೆ. ಆದರೆ, ಈ ತಿಂಗಳ ಮೊದಲ ವಾರದಲ್ಲಿ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆ ಪ್ರಮಾಣ ಹೆಚ್ಚಾಗಿದೆ. ಇದರಿಂದ ನದಿಗಳು ಮೈದುಂಬಿ ಹರಿಯ ತೊಡಗಿವೆ. ಜಲಾಶಯಗಳ ಒಳಹರಿವು ಹೆಚ್ಚಾಗತೊಡಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಜುಲೈ ಒಂದರಿಂದ ನಿನ್ನೆಯವರೆಗೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಶೇ.62 ರಷ್ಟು ಮಳೆ ಕೊರತೆಯಾಗಿದ್ದು, ಬರದ ಛಾಯೆ ಆವರಿಸತೊಡಗಿದೆ. ಕಳೆದೊಂದು ವಾರದಲ್ಲಿ 14 ಮಿ.ಮೀ. ವಾಡಿಕೆ ಮಳೆ ಪ್ರಮಾಣವಿದ್ದು, ಕೇವಲ 5 ಮಿ.ಮೀ.ನಷ್ಟು ಮಾತ್ರ ಮಳೆಯಾಗಿದೆ. ಜೂನ್ ತಿಂಗಳಲ್ಲೂ ಶೇ.5ರಷ್ಟು ಮಳೆ ಅಭಾವ ಕಂಡುಬಂದಿತ್ತು.
ಕಳೆದ ಒಂದು ವಾರದಲ್ಲಿ ರಾಜ್ಯದಲ್ಲಿ ಒಟ್ಟಾರೆ 58 ಮಿ.ಮೀ.ನಷ್ಟು ವಾಡಿಕೆ ಮಳೆಯಿದ್ದು, 62 ಮಿ.ಮೀ.ನಷ್ಟು ಮಳೆ ಬಿದ್ದಿದೆ. ವಾಡಿಕೆಗಿಂತ ಶೇ.7 ರಷ್ಟು ಹೆಚ್ಚು ಮಳೆಯಾಗಿದೆ. ಕರಾವಳಿಯಲ್ಲಿ ಶೇ.27, ಮಲೆನಾಡು ಭಾಗದಲ್ಲಿ ಶೇ.10, ಉತ್ತರ ಒಳನಾಡಿನಲ್ಲಿ ಶೇ.17 ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.
ಜೂನ್‌ನಿಂದ ನಿನ್ನೆಯವರೆಗೆ ರಾಜ್ಯದಲ್ಲಿ 257 ಮಿ.ಮೀ.ನಷ್ಟು ವಾಡಿಕೆ ಮಳೆ ಪ್ರಮಾಣವಿದ್ದು, 178 ಮಿ.ಮೀ.ನಷ್ಟು ಮಾತ್ರ ಮಳೆಯಾಗಿದ್ದು, ಶೇ.31ರಷ್ಟು ಮಳೆ ಕೊರತೆ ಕಂಡುಬಂದಿದೆ. ಕರಾವಳಿಯಲ್ಲಿ ಶೇ.32, ಮಲೆನಾಡಿನಲ್ಲಿ ಶೇ.40, ಉತ್ತರ ಒಳನಾಡಿನಲ್ಲಿ ಶೇ.21 ಹಾಗೂ ದಕ್ಷಿಣ ಒಳನಾಡಿನಲ್ಲಿ ಶೇ.15ರಷ್ಟು ಮಳೆ ಕೊರತೆ ಇದೆ.
ಮುಂಗಾರು ಹಂಗಾಮಿನಲ್ಲಿ ಇದುವರೆಗೂ ರಾಜ್ಯದ 14 ಜಿಲ್ಲೆಗಳ 107 ತಾಲ್ಲೂಕುಗಳಲ್ಲಿ ವಾಡಿಕೆ ಮತ್ತು ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರೆ, 17 ಜಿಲ್ಲೆಗಳ 133 ತಾಲ್ಲೂಕುಗಳಲ್ಲಿ ಮಳೆ ಕೊರತೆಯಾಗಿದೆ. ಜುಲೈ ತಿಂಗಳ ಮೊದಲ ವಾರದಲ್ಲೂ17 ಜಿಲ್ಲೆಗಳ 124 ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಬರದ ವಾತಾವರಣ ಕಂಡುಬರುತ್ತಿದೆ.
14 ಜಿಲ್ಲೆಗಳ 116 ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಇವು ಬಹುತೇಕ ಕರಾವಳಿ ಹಾಗೂ ಮಲೆನಾಡು ಭಾಗದ ಜಿಲ್ಲೆಗಳಾಗಿವೆ. ಜೂನ್ ತಿಂಗಳಲ್ಲೂ 13 ಜಿಲ್ಲೆಗಳ 89 ತಾಲ್ಲೂಕುಗಳಲ್ಲಿ ಮಾತ್ರ ವಾಡಿಕೆಗಿಂತ ಹೆಚ್ಚು ಮಳೆಯಾಗಿತ್ತು. 18 ಜಿಲ್ಲೆಗಳ 151 ತಾಲ್ಲೂಕುಗಳಲ್ಲಿ ಮಳೆ ಕೊರತೆ ಕಂಡು ಬಂದಿತ್ತು.
ಜೂನ್‌ನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಮಳೆ ಕೊರತೆ ಎದುರಿಸುತ್ತಿರುವ ಪ್ರದೇಶಗಲ್ಲೂ ಜುಲೈನಲ್ಲಿ ಮಳೆ ಅಭಾವ ಮುಂದುವರೆದು ಬರಪರಿಸ್ಥಿತಿ ಎದುರಿಸುವಂತಾಗಿದೆ.ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಭಾರಿ ಮಳೆ ಮುಂದುವರೆಯಲಿದ್ದು, ಒಳನಾಡಿನಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ.
