Homeರಾಜ್ಯರಾಜ್ಯಸಭೆ, ಪರಿಷತ್‌ ಚುನಾವಣೆ : ಇಂದು ನಾಮಪತ್ರಗಳ ಪರಿಶೀಲನೆ

ರಾಜ್ಯಸಭೆ, ಪರಿಷತ್‌ ಚುನಾವಣೆ : ಇಂದು ನಾಮಪತ್ರಗಳ ಪರಿಶೀಲನೆ

Rajya Sabha, Council Elections: Scrutiny of nominations today

ಬೆಂಗಳೂರು, ಜೂ.9- ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ 4 ಸ್ಥಾನಗಳು ಹಾಗೂ ವಿಧಾನಪರಿಷತ್‌ನ 7 ಸ್ಥಾನಗಳಿಗೆ ಸಲ್ಲಿಕೆಯಾಗಿದ್ದ ನಾಮಪತ್ರಗಳ ಪರಿಶೀಲನೆ ಇಂದು ನಡೆಯಿತು. ಕಾಂಗ್ರೆಸ್‌‍ ಅಭ್ಯರ್ಥಿಗಳಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮನ್ಸೂರ್‌ ಆಲಿಖಾನ್‌, ಪವರ್‌ ಖೇರಾ ಮತ್ತು ಬಿಜೆಪಿ ಅಭ್ಯರ್ಥಿ ಎಂ.ನಾಗರಾಜ್‌ ಅವರ ನಾಮಪತ್ರಗಳು ಕ್ರಮಬದ್ಧವಾಗಿವೆ.ಸೂಚಕರ ಸಹಿ ಇಲ್ಲದೆ ಪಕ್ಷೇತರ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ್ದ ಭೋಜಣ್ಣ ಸೋಮಯ್ಯ ಅವರ ನಾಮಪತ್ರ ತಿರಸ್ಕೃತವಾಗಿದೆ.

ಚುನಾವಣಾ ಕಣದಲ್ಲಿ ನಾಲ್ವರು ಅಭ್ಯರ್ಥಿಗಳು ಮಾತ್ರ ಉಳಿದಿದ್ದು, ಬಹುತೇಕ ಅವಿರೋಧ ಆಯ್ಕೆಯಾದಂತಾಗಿದೆ. ನಾಮಪತ್ರ ವಾಪಸ್‌‍ ಪಡೆಯಲು ಜೂ.11 ರವರೆಗೆ ಅವಕಾಶವಿದ್ದು, ಅಂದು ಸಂಜೆ ಚುನಾವಣಾ ಕಣದಲ್ಲಿ ಅಂತಿಮವಾಗಿ ಉಳಿಯುವ ಅಭ್ಯರ್ಥಿಗಳ ಪಟ್ಟಿಯನ್ನು ಚುನಾವಣಾಧಿಕಾರಿ ಪ್ರಕಟಿಸುತ್ತಾರೆ. ಆ ಬಳಿಕ ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್‌‍ನ ಮೂವರು ಹಾಗೂ ಬಿಜೆಪಿಯ ಒಬ್ಬ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿರುವುದನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ.

ವಿಧಾನಪರಿಷತ್‌ನ 7 ಸದಸ್ಯ ಸ್ಥಾನಗಳಿಗೆ ಆಡಳಿತಾರೂಢ ಕಾಂಗ್ರೆಸ್‌‍, ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್‌‍ ಸೇರಿದಂತೆ 8 ಅಭ್ಯರ್ಥಿಗಳು ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ. ಇವರ ನಾಮಪತ್ರಗಳ ಪರಿಶೀಲನೆಯು ಇಂದು ನಡೆಯಿತು.

ಕಾಂಗ್ರೆಸ್‌‍ ಅಭ್ಯರ್ಥಿಗಳಾದ ತಿಪ್ಪಣ್ಣಪ್ಪ ಕಮಕನೂರು, ಪಿ.ವಿ.ಮೋಹನ್‌, ಬಿ.ಕೆ.ಹರಿಪ್ರಸಾದ್‌, ಶಿವಣ್ಣ ಬಿ.ಎಸ್‌‍., ವಿನಯ್‌ ಕಾರ್ತಿಕ್‌ ಪ್ರಕಾಶ್‌, ಬಿಜೆಪಿ ಅಭ್ಯರ್ಥಿಗಳಾದ ಲಿಂಗರಾಜು ಪಾಟೀಲ್‌, ರಘು ಆರ್‌. ಹಾಗೂ ಜೆಡಿಎಸ್‌‍ ಅಭ್ಯರ್ಥಿ ಗೋವಿಂದರಾಜು ಅವರ ನಾಮಪತ್ರಗಳು ಕ್ರಮಬದ್ಧವಾಗಿವೆ.

ನಾಮಪತ್ರ ವಾಪಸ್‌‍ ಪಡೆಯಲು ಇನ್ನೂ ಎರಡು ದಿನ ಅವಕಾಶವಿದ್ದು, ಆನಂತರವೂ 8 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದರೆ ಮತದಾನ ನಡೆಯುವುದು ಅನಿವಾರ್ಯವಾಗಲಿದೆ.
ಕಾಂಗ್ರೆಸ್‌‍ನ 5ನೇ ಅಭ್ಯರ್ಥಿ ಹಾಗೂ ಎನ್‌ಡಿಎ ಮೈತ್ರಿಕೂಟದ 3ನೇ ಅಭ್ಯರ್ಥಿ ನಡುವೆ ತೀವ್ರ ಪೈಪೋಟಿ ಏರ್ಪಡಲಿದ್ದು, ಮೂರೂ ಪಕ್ಷಗಳು ತಮತಮ ಅಭ್ಯರ್ಥಿಗಳ ಗೆಲುವಿಗೆ ಚುನಾವಣಾ ತಂತ್ರಗಾರಿಕೆಯನ್ನು ಆರಂಭಿಸಿದೆ.

ಜೂ.18 ರಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ಮತದಾನದ ಬಳಿಕ ಮತ ಎಣಿಕೆ ನಡೆದು ಫಲಿತಾಂಶ ಘೋಷಿಸಲಾಗುತ್ತದೆ.ಈ ಮೇಲನೆ ಚುನಾವಣೆ ಮೂರೂ ಪಕ್ಷಗಳಿಗೆ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಹೀಗಾಗಿ ತಮ ಅಭ್ಯರ್ಥಿಗಳ ಗೆಲುವಿಗೆ ಮೂರೂ ಪಕ್ಷಗಳು ನಾನಾ ರೀತಿಯ ಚುನಾವಣಾ ತಂತ್ರ ರೂಪಿಸುತ್ತಿವೆ.

RELATED ARTICLES

Latest News