ಬೆಂಗಳೂರು, ಜೂ.2-ವಿದೇಶ ಪ್ರವಾಸದಲ್ಲಿರುವ ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಮರಳಿದ ನಂತರ ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳ್ಳಲಿದೆ.
ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕುಮಾರಸ್ವಾಮಿ ಅವರು ಬಿಜೆಪಿಯ ನಾಯಕರೊಂದಿಗೆ ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಅಭ್ಯರ್ಥಿಗಳ ಆಯ್ಕೆ ಸಂಬಂಧ ಸಮಾಲೋಚನೆ ನಡೆಸಲಿದ್ದಾರೆ.
ಎನ್ಡಿಎ ಮೈತ್ರಿಕೂಟದ ಭಾಗವಾಗಿರುವುದರಿಂದ ಕೇಂದ್ರದ ಬಿಜೆಪಿ ನಾಯಕರೊಂದಿಗೆ ಚರ್ಚಿಸಿದ ಬಳಿಕ ಅಂತಿಮ ನಿರ್ಧಾರ ಮಾಡಲಾಗುತ್ತದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ವಿಧಾನಸಭೆಯಲ್ಲಿ ಕೇವಲ 18 ಶಾಸಕರ ಸಂಖ್ಯಾಬಲ ಇರುವುದರಿಂದ ರಾಜ್ಯಸಭೆ ಹಾಗೂ ವಿಧಾನ ಪರಿಷತ್ತಿನ ಸ್ಥಾನಗಳನ್ನು ಗೆಲ್ಲುವುದು ಜೆಡಿಎಸ್ಗೆ ಸುಲಭವಲ್ಲ. ವಾಸ್ತವತೆ ಅರಿತಿರುವ ಜೆಡಿಎಸ್ ನಾಯಕರು ರಾಜ್ಯಸಭೆ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ನಿರ್ಧಾರ ಮಾಡಿಲ್ಲ. ಬಿಜೆಪಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬೆಂಬಲ ವ್ಯಕ್ತಪಡಿಸಲಿದೆ.
ಬಿಜೆಪಿಯಲ್ಲಿ ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಮಾಜಿ ಸಂಸದೆ ಸುಮಲತಾ ಅಂಬರೀಷ್ ಸೇರಿದಂತೆ ಹಲವರ ಹೆಸರುಗಳು ರಾಜ್ಯಸಭೆ ಅಭ್ಯರ್ಥಿಗೆ ಮುಂಚೂಣಿಯಲ್ಲಿವೆ.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೂ ರಾಜ್ಯಸಭೆಗೆ ಮರು ಆಯ್ಕೆಗೆ ಅವಕಾಶ ಕಲ್ಪಿಸಬೇಕು ಎಂಬ ಒತ್ತಾಸೆ ಅವರ ಅಭಿಮಾನಿಗಳು, ಜೆಡಿಎಸ್ ಮುಖಂಡರಲ್ಲೂ ಇದೆ. ಆದರೆ, ಈ ಬೇಡಿಕೆಯನ್ನು ಬಿಜೆಪಿ ನಾಯಕರ ಮುಂದೆ ಪ್ರಸ್ತಾಪಿಸಿಲ್ಲ ಎಂದು ಕುಮಾರಸ್ವಾಮಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಹೊಂದಿರುವ ಶಾಸಕರ ಸಂಖ್ಯಾಬಲದ ಮೇಲೆ ಮೂವರು ರಾಜ್ಯಸಭೆ ಸ್ಥಾನ ಹಾಗೂ ನಾಲ್ಕು ವಿಧಾನ ಪರಿಷತ್ ಸದಸ್ಯ ಸ್ಥಾನಗಳನ್ನು ಸುಲಭವಾಗಿ ಗೆಲ್ಲುವ ಅವಕಾಶವಿದೆ. ಅದೇ ರೀತಿ ಬಿಜೆಪಿಯು ರಾಜ್ಯ ಸಭೆಯ ಒಂದು ಸ್ಥಾನ ಹಾಗೂ ಮೇಲನೆಯ ಎರಡು ಸ್ಥಾನಗಳನ್ನು ಗೆಲ್ಲಬಹುದು.
ಜೆಡಿಎಸ್ ವಿಧಾನ ಪರಿಷತ್ನ ಒಂದು ಸ್ಥಾನ ಗೆಲ್ಲಲ್ಲು ಸಂಖ್ಯಾಬಲದ ಕೊರತೆ ಇದೆ. ಆದರೆ, ರಹಸ್ಯ ಮತದಾನವಾಗಿರುವುದರಿಂದ ಅಡ್ಡ ಮತದಾನ ಮಾಡಿದವರನ್ನು ಪತ್ತೆ ಹಚ್ಚುವುದು ರಾಜಕೀಯ ಪಕ್ಷಗಳಿಗೆ ಸುಲಭವಲ್ಲ. ವಿಧಾನ ಪರಿಷತ್ನ ಒಂದು ಸ್ಥಾನಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಪೈಪೋಟಿ ಏರ್ಪಡುವ ಸಾಧ್ಯತೆ ಮೇಲ್ನೋಟಕ್ಕೆ ಕಂಡುಬಂದಿದೆ.
ವಿಧಾನ ಪರಿಷತ್ತಿನ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ ಸ್ಪರ್ಧಾಕಾಂಕ್ಷಿಯಾಗಿದ್ದಾರೆ. ರಷ್ಯಾ ಪ್ರವಾಸದಲ್ಲಿರುವ ಕುಮಾರಸ್ವಾಮಿ ಅವರು ವಾಪಾಸ್ಸಾದ ಬಳಿಕ ಮೇಲನೆ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ನಿರ್ಧಾರ ಮಾಡಲಿದ್ದಾರೆ. ಈ ಸ್ಥಾನವನ್ನು ಬಿಜೆಪಿಗೆ ಬಿಟ್ಟು ಕೊಡುವ ಬಗ್ಗೆಯೂ ನಿರ್ಧಾರ ಮಾಡಬಹುದು ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
