ಬೆಂಗಳೂರು,ಜು.4- ರಾಜ್ಯದಲ್ಲಿ ನೈಋತ್ಯ ಮುಂಗಾರು ಮತ್ತೆ ಚುರುಕು ಪಡೆದುಕೊಂಡಿದ್ದು, ಕರಾವಳಿ, ಮಲೆನಾಡು ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಜಲಾಶಯಗಳಿಗೆ ಒಳಹರಿವು ಹೆಚ್ಚಾಗುತ್ತಿದ್ದು, ಜೀವಕಳೆ ಬಂದಂತಾಗಿದೆ.
ಕೊಡಗು ಜಿಲ್ಲೆಯಲ್ಲಿ ಕೊನೆಗೂ ಮಳೆ ವೇಗ ಪಡೆದುಕೊಂಡಿದ್ದು ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯೊಂದಿಗೆ ಚಳಿಯ ಪ್ರಮಾಣವೂ ಹೆಚ್ಚಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಹಾರಂಗಿ ಜಲಾಶಯಕ್ಕೆ 1.470 ಕ್ಯೂಸೆಕ್ ಒಳಹರಿವು ಬರುತ್ತಿದ್ದು, ರೈತರಲ್ಲಿ ಮಂದಹಾಸ ಮೂಡಿದೆ. ಜಲಾಶಯದ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 8.5 ಟಿಎಂಸಿಯಾಗಿದ್ದು, ಪ್ರಸ್ತುತ 2.7 ಟಿಎಂಸಿ ನೀರು ಸಂಗ್ರಹವಾಗಿದೆ.
ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದ್ದು, ಹಾರಂಗಿ ಜಲಾಶಯದ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆಯಿದೆ.ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ, ಕೊಡಗು ಸೇರಿದಂತೆ ಹಲವು ಭಾಗದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ.
ಮಳೆಯ ಪರಿಣಾಮ ಕಾವೇರಿ ನದಿನೀರಿನ ಮಟ್ಟವು ನಿಧಾನವಾಗಿ ಏರುತ್ತಿದೆ. ಕೊಡಗಿನಲ್ಲಿ ನಿನ್ನೆ ಸಂಜೆ 7 ಗಂಟೆಗೆ ಪ್ರಾರಂಭವಾದ ಮಳೆಯಿಂದ ಜನಜೀವನ ಅಸ್ತವ್ಯಸ್ಥಗೊಂಡಿದೆ. ಮಡಿಕೇರಿ ನಗರ ಸೇರಿದಂತೆ ಸೋಮವಾರಪೇಟೆ, ವಿರಾಜಪೇಟೆ, ಮೂರ್ನಾಡು ಭಾಗಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ರಸ್ತೆಯೆಲ್ಲಾ ಕೆರೆಯಂತಾಗಿದೆ. ವಾಹನ ಸವಾರರಿಗೆ ತೊಂದರೆಯಾಗಿದೆ.
ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಮಳೆಯಾಗುತ್ತಿದ್ದು, ರಾಜಾಪುರ ಬ್ಯಾರೇಜ್‌ನಿಂದ ನೀರು ಹೊರಬಿಡಲಾಗುತ್ತಿದ್ದು, ಕೃಷ್ಣಾ, ದೂಧ್‌ಗಂಗಾ, ವೇದ್‌ಗಂಗಾ ನದಿಗಳಿಗೆ ನೀರು ಹರಿದುಬರುತ್ತಿದೆ. ಮಲಪ್ರಭಾ ನದಿಯಲ್ಲೂ ನೀರಿನ ಮಟ್ಟ ಏರಿಕೆಯಾಗಿದೆ.
ಕರಾವಳಿ ಭಾಗದಲ್ಲಿ ಮಳೆಯಾಗುತ್ತಿದ್ದು, ತುಂಗಭದ್ರಾ, ಅಘನಾಶಿನಿ, ಕಾಳಿ, ಶರಾವತಿ ನದಿಗಳಲ್ಲಿ ನೀರಿನ ಮಟ್ಟ ಕೊಂಚ ಏರಿಕೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಬಾಳೆಹೊನ್ನೂರು, ಶೃಂಗೇರಿ, ಎನ್.ಆರ್.ಪುರ, ಕಳಸ ಭಾಗದಲ್ಲಿ ಮಳೆಯ ಆರ್ಭಟ ಜೋರಾಗಿದೆ. ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.ಶಿವಮೊಗ್ಗ, ಧಾರವಾಡ, ಹಾವೇರಿ, ಬೀದರ್, ಯಾದಗಿರಿ, ವಿಜಯಪುರ, ದ.ಕನ್ನಡ, ಉ.ಕನ್ನಡ ಸೇರಿದಂತೆ ಮತ್ತಿತರೆಡೆ ಮಳೆಯಾಗುತ್ತಿದೆ.
ಬಯಲುಸೀಮೆ ಪ್ರದೇಶವಾದ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಚಿತ್ರದುರ್ಗ, ದಾವಣಗೆರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ತುಂತುರು ಮಳೆಯಾಗುತ್ತಿದೆ. ಮುಂದಿನ 2-3 ದಿನಗಳ ಕಾಲ ಜೋರು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
