Thursday, April 16, 2026
Homeರಾಜ್ಯಎರಡು ಹಂತದಲ್ಲಿ ಎಸ್‌‍ಎಸ್‌‍ಎಲ್‌ಸಿ ಗಣಿತ ಪರೀಕ್ಷೆ..?

ಎರಡು ಹಂತದಲ್ಲಿ ಎಸ್‌‍ಎಸ್‌‍ಎಲ್‌ಸಿ ಗಣಿತ ಪರೀಕ್ಷೆ..?

SSLC Maths exam in two stages..?

ಬೆಂಗಳೂರು,ಜ.19- ವಿದ್ಯಾರ್ಥಿಗಳ ಪಾಲಿಗೆ ಯಾವಾ ಗಲೂ ಕಬ್ಬಿಣದ ಕಡಲೆಯಂತೆ ಪರಿಣಮಿಸುವ ಗಣಿತ ವಿಷಯ ವನ್ನು ಎಸ್‌‍ಎಸ್‌‍ಎಲ್‌ಸಿ ಮುಖ್ಯ ಪರೀಕ್ಷೆ ವೇಳೆ ಎರಡು ಹಂತದಲ್ಲಿ ನಡೆಸಬೇಕೆಂಬ ಬೇಡಿಕೆ ಕೇಳಿಬಂದಿದೆ.

ಒಂದು ವೇಳೆ ಸಾರ್ವಜನಿಕರ ಒತ್ತಾಸೆಯಂತೆ ಎಸ್‌‍ಎಸ್‌‍ಎಲ್‌ಸಿಯಲ್ಲಿ ಗಣಿತ ವಿಷಯದ ಪರೀಕ್ಷೆಯನ್ನು ಎರಡು ಬಾರಿ ನಡೆಸಲು ಶಿಕ್ಷಣ ಇಲಾಖೆ ಸಮತಿಸಿದರೆ, ಪರೀಕ್ಷೆ ಸುಧಾರಣೆಯಲ್ಲಿ ಇದು ಮತ್ತೊಂದು ಮಹತ್ವದ ಮೈಲಿಗಲ್ಲು ಅಗಲಿದೆ. ಎಸ್‌‍ಎಸ್‌‍ಎಲ್‌ಸಿ ಗಣಿತ ಪರೀಕ್ಷೆಯನ್ನು ಎರಡು ಬಾರಿ ನಡೆಸಲು ಖಾಸಗಿ ಶಾಲೆಗಳ ಒಕ್ಕೂಟ ಶಿಕ್ಷಣ ಸಚಿವರಿಗೆ ಮನವಿ ಮಾಡಿದೆ.

ಏಕೆಂದರೆ ಗಣಿತ ಕಷ್ಟಕರ ವಿಷಯವಾಗಿದ್ದು, ವಿದ್ಯಾರ್ಥಿಗಳ ಒತ್ತಡ ಕಡಿಮೆ ಮಾಡಲು ಮತ್ತು ವೈಫಲ್ಯ ತಡೆಯಲು ಸಿಬಿಎಸ್‌‍ಇ ಮಾದರಿಯಲ್ಲಿ ಎರಡು ಲೆವೆಲ್‌ ಪರೀಕ್ಷೆ (ಒಂದು ಮುಖ್ಯ ಪರೀಕ್ಷೆ ಮತ್ತು ಒಂದು ಸುಧಾರಿತ ಪರೀಕ್ಷೆ) ಜಾರಿಗೊಳಿಸಬೇಕೆಂದು ಒತ್ತಾಯಿಸಿದೆ.

ಈ ಮನವಿಯ ಬಗ್ಗೆ ಶಿಕ್ಷಣ ಇಲಾಖೆ ಪರಿಶೀಲಿಸುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಈ ಬದಲಾವಣೆ ತರಬಹುದು. ಆದರೆ ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ರಾಜ್ಯದಲ್ಲಿ ಗಣಿತ ವಿಷಯ ಕಷ್ಟಕರ ವಿಷಯವಾಗಿದ್ದು, ಅನೇಕರು ಗಣಿತದ ವಿಷಯದಲ್ಲೇ ಅನುತ್ತೀರ್ಣ ಆಗುತ್ತಾರೆ. ಇದು ವಿದ್ಯಾರ್ಥಿಗಳ ವೈಫಲ್ಯಕ್ಕೆ ಪ್ರಮುಖ ಕಾರಣವಾಗಿದೆ. ಎರಡು ಪರೀಕ್ಷೆ ನಡೆಸುವುದರಿಂದ ವಿದ್ಯಾರ್ಥಿಗಳಲ್ಲಿ ಒತ್ತಡ ಹಾಗೂ ಆತಂಕ ಕಡಿಮೆ ಎನ್ನವುದು ಖಾಸಗಿ ಸಂಸ್ಥೆಯ ವಾದವಾಗಿದೆ.

ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಕ್ಯಾಮ್ಸೌ ಖಾಸಗಿ ಶಾಲೆ ಒಕ್ಕೂಟವು ವಿಶೇಷ ಮನವಿ ಮಾಡಿದೆ. ಮಕ್ಕಳ ಪಾಲಿಗೆ ಗಣಿತ ಕಬ್ಬಿಣದ ಕಡಲೆಯಂತಿದೆ ಹೀಗಾಗಿ ಎರಡು ಲೆವೆಲ್‌‍ನಲ್ಲಿ ಪರೀಕ್ಷೆ ನಡೆಸುವಂತೆ ಪತ್ರದ ಮೂಲಕ ಮನವಿ ಮಾಡಲಾಗಿದೆ.
ಪರೀಕ್ಷಾ ಭಯವನ್ನು ಮಕ್ಕಳಿಂದ ಹೋಗಲಾಡಿಸಲು ಎರಡು ಗಣಿತ ಪರೀಕ್ಷೆ ಉತ್ತಮ ಎಂಬ ಅಭಿಪ್ರಾಯವನ್ನು ಖಾಸಗಿ ಶಾಲೆ ನೀಡಿದೆ.

ಒತ್ತಡ ನಿವಾರಣೆ :
ಎರಡು ಪರೀಕ್ಷೆ ನಡೆಸುವುದರಿಂದ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ಮತ್ತು ಆತಂಕ ಕಡಿಮೆಯಾಗುತ್ತದೆ. ಸಿಬಿಎಸ್‌‍ಇಯಲ್ಲಿರುವಂತೆ ರಾಜ್ಯ ಪಠ್ಯಕ್ರಮದಲ್ಲೂ ಎರಡು ಪರೀಕ್ಷೆಗಳನ್ನು (ಒಂದು ಮುಖ್ಯ ಮತ್ತು ಒಂದು ಸುಧಾರಿತ) ನಡೆಸಲು ಒತ್ತಾಯಿಸಲಾಗಿದೆ.

2027-28 ರಿಂದ ಜಾರಿ :
ಈ ಬದಲಾವಣೆಯನ್ನು 2027-28ನೇ ಶೈಕ್ಷಣಿಕ ವರ್ಷದಿಂದಲೇ ಜಾರಿಗೊಳಿಸಲು ಮನವಿ ಮಾಡಲಾಗಿದೆ. ಖಾಸಗಿ ಶಾಲೆಗಳ ಮನವಿಗೆ ಶಿಕ್ಷಣ ಇಲಾಖೆ ಸ್ಪಂದಿಸಿದ್ದು, ಈ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದೆ.

ಅಧಿಕೃತ ಘೋಷಣೆ ಬಾಕಿ :
ಈ ಕುರಿತು ಯಾವುದೇ ಅಧಿಕೃತ ಅಧಿಸೂಚನೆ ಹೊರಬಿದ್ದಿಲ್ಲ, ಇಲಾಖೆ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ. ಸದ್ಯಕ್ಕೆ, ಕರ್ನಾಟಕದ ಶಿಕ್ಷಣ ಇಲಾಖೆಯು ಪರೀಕ್ಷೆಗಳನ್ನು ಎರಡು ಬಾರಿ ನಡೆಸುವ ಕುರಿತು ಅಧಿಕೃತವಾಗಿ ಏನನ್ನೂ ಘೋಷಿಸಿಲ್ಲ. ಆದರೆ ಖಾಸಗಿ ಶಾಲೆಗಳ ಒತ್ತಾಯದ ಮೇರೆಗೆ ಈ ವಿಷಯ ಪರಿಶೀಲನೆಯಲ್ಲಿದೆ. ಖಾಸಗಿ ಶಾಲೆಗಳ ಪತ್ರ ಹಾಗೂ ಒತ್ತಡಕ್ಕೆ ಶಿಕ್ಷಣ ಇಲಾಖೆ ಮಣಿಯುತ್ತದೆಯೇ? ಮುಂದಿನ ವರ್ಷದಿಂದ ಗಣಿತದ ಪರೀಕ್ಷೆಯಲ್ಲಿ ಬದಲಾವಣೆ ತರುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

RELATED ARTICLES

Latest News