ಬೆಂಗಳೂರು, ಮಾ.9- ಕೆಎಸ್‌ಐಸಿ ಸೀರೆಗಳ ಉತ್ಪಾದನೆಯನ್ನು ಹೆಚ್ಚಿಸಲು ಕ್ರಮಕೈಗೊಳ್ಳುವುದಾಗಿ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ಭರವಸೆ ನೀಡಿದ್ದಾರೆ. ವಿಧಾನಸಭೆಯ ಪ್ರಶ್ನೋತ್ತರ ಅವಽಯಲ್ಲಿಂದು ಮೈಸೂರಿನ ಕೃಷ್ಣ ರಾಜ ಕ್ಷೇತ್ರದ ಬಿಜೆಪಿ ಶಾಸಕ ಶ್ರೀವತ್ಸ ಟಿ.ಎಸ್. ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಪ್ರಶ್ನೋತ್ತರದ ಅವಽಯಲ್ಲಿ ಸೀರೆಗಳ ಉತ್ಪಾದನೆಯನ್ನು ಹೆಚ್ಚಿಸಬೇಕೆಂದು ಶಾಸಕರು, ಸಚಿವರು ಪಕ್ಷಭೇದ ಮರೆತು ಆಗ್ರಹಿಸಿದರು.
ಪ್ರಶ್ನೆ ಕೇಳಿದ ಶ್ರೀವತ್ಸ ಕೆಎಸ್‌ಐಸಿ ಸೀರೆಗಳಿಗೆ ಭಾರಿ ಬೇಡಿಕೆ ಇದೆ. ಮುಂಜಾನೆ 3 ಗಂಟೆಗೆ 500 ರಿಂದ 600 ಜನ ಟೋಕನ್‌ಗಾಗಿ ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ರೇಷ್ಮೆ ಸೀರೆಗಳು ಮಾರಾಟ ಮಳಿಗೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಲಭ್ಯವಾಗುವಂತೆ ಮಾಡಬೇಕು, ಉತ್ಪಾದನೆಯನ್ನು ಹೆಚ್ಚಿಸಬೇಕು.
ಉತ್ತಮ ಲಾಭವಾಗಿ ನಡೆಯುತ್ತಿದೆ. ಹಾಗಾಗಿ ಉತ್ಪಾದನೆಗೆ ಮತ್ತಷ್ಟು ಪ್ರೋತ್ಸಾಹ ಕೊಡಬೇಕು. ಆನ್‌ಲೈನ್‌ನಲ್ಲಿ ಗ್ರಾಹಕರಿಗೆ ಅವರು ಇಷ್ಟ ಪಡುವ ಆಯ್ಕೆಯ ಸೀರೆಗಳು ಲಭ್ಯವಾಗುವುದಿಲ್ಲ ದಾಸ್ತಾನಿನಲ್ಲಿ ಲಭ್ಯವಿರುವ ಸೀರೆಗಳನ್ನು ಮಾತ್ರ ಖರೀದಿಸಬಹುದಾಗಿದೆ. ಆನ್‌ಲೈನ್ ಸೇವೆಯನ್ನು ಮುಂದುವರೆಸಬೇಕೆಂದು ಹೇಳಿದರು.
ಸಚಿವ ಕೆ.ವೆಂಕಟೇಶ್ ಉತ್ತರ ನೀಡಿ, ದಿನವೊಂದಕ್ಕೆ 350ರಿಂದ 400 ಸೀರೆಗಳನ್ನು ಉತ್ಪಾದಿಸುತ್ತಿದ್ದೇವೆ. ಎಲ್ಲವೂ ಅದೇ ದಿನ ಮಾರಾಟವಾಗುತ್ತಿವೆ. ಕೆಎಸ್‌ಐಸಿ ಸೀರೆಯ ಗುಣ ಮಟ್ಟ ಅತ್ಯುತ್ತಮವಾಗಿದೆ. ಹೆಣ್ಣು ಮಕ್ಕಳು ಎಲ್ಲವನ್ನೂ ಪರಿಶೀಲಿಸಿ ಸೀರೆ ಖರೀದಿಸುತ್ತಾರೆ. ಸಣ್ಣ ಲೋಪ ಇದ್ದರೂ ತಿರಸ್ಕರಿಸುತ್ತಾರೆ. ಇದಕ್ಕಾಗಿ ಸೂಕ್ಷ್ಮವಾಗಿ ಮತ್ತು ಎಚ್ಚರಿಕೆಯಿಂದ ಉತ್ಪಾದನೆ ಮಾಡಬೇಕಿದೆ. ಉತ್ತಮ ಗುಣಮಟ್ಟದ ರೇಷ್ಮೆಗೂಡುಗಳನ್ನೇ ಖರೀದಿಸಿ ತರಬೇಕು.
ರೇಷ್ಮೆಗೂಡುಗಳಿಗಾಗಿ ಬಾರಿ ಬೇಡಿಕೆ ಇದೆ. ತಮಿಳುನಾಡು, ಆಂಧ್ರಪ್ರದೇಶಗಳಿಂದಲೂ ರೇಷ್ಮೆಗೂಡು ಮತ್ತು ನೂಲು ಖರೀದಿಗೆ ಉದ್ಯಮಿಗಳು ಆಗಮಿಸುತ್ತಿದ್ದಾರೆ. ಆ ಪೈಪೋಟಿ ನಡುವೆ ನಾವು ಉದ್ಯಮ ನಡೆಸುತ್ತಿದ್ದೇವೆ ಎಂದು ಹೇಳಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಧ್ಯ ಪ್ರವೇಶ ಮಾಡಿ, ರೇಷ್ಮೆ ಸೀರೆಗೆ ಬೇಡಿಕೆ ಇರುವುದು ನಿಜ. ಅಗತ್ಯದಷ್ಟು ಪೂರೈಕೆಗೆ ಉತ್ಪಾದನೆಯನ್ನು ಹೆಚ್ಚಿಸಬೇಕು. ಅಲ್ಲಿ ಕೆಲಸ ಮಾಡುತ್ತಿರುವವರಿಗೆ 3 ಸಾವಿರ ಮತ್ತು 12 ಸಾವಿರದಷ್ಟು ಕಡಿಮೆ ವೇತನ ನೀಡಲಾಗುತ್ತಿದೆ. ವೇತನ ಹೆಚ್ಚಳ ಮಾಡಬೇಕು ಮತ್ತು ರೇಷ್ಮೆ ನಿಗಮ ಈ ವರ್ಷ 96 ಕೋಟಿ ರೂ.ಗಳ ಲಾಭ ಮಾಡಿದೆ. ಅದರಲ್ಲಿ 1 ಕೋಟಿ ರೂ.ಗಳನ್ನು ಕಾರ್ಮಿಕರ ವೇತನಕ್ಕೆ ಖರ್ಚು ಮಾಡಿ ಎಂದು ಆಗ್ರಹಿಸಿದರು.
ಸರ್ಕಾರ ಮೈಸೂರಿನ ರೇಷ್ಮೆ ಉತ್ಪಾದನಾ ಘಟಕವನ್ನು ಮುಚ್ಚುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು. ಸ್ಪಷ್ಟನೆ ನೀಡಿದ ಸಚಿವರು ಕರ್ನಾಟಕ ರೇಷ್ಮೆ ಉದ್ಯಮಗಳ ನಿಯಮಿತದಲ್ಲಿ 2022 ರಿಂದ 3 ವರ್ಷಗಳ ಅವಽಯಲ್ಲಿ 3,10,666 ಸೀರೆಗಳು ತಯಾರಾಗಿವೆ. ಈ ಪೈಕಿ 309659 ಸೀರೆಗಳು ಮಾರಾಟವಾಗಿವೆ. 2022-23ರಲ್ಲಿ ನಿಗಮವು 46.75ಕೋಟಿ, 2023-24ನೇ ಸಾಲಿನಲ್ಲಿ 73.40 ಕೋಟಿ, 2024-25ರಲ್ಲಿ 101.15 ಕೋಟಿ ಲಾಭ ಗಳಿಸಿದೆ.
ಆನ್‌ಲೈನ್‌ನಲ್ಲಿ ಸೀರೆಗಳ ಖರೀದಿ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಿ ಮೊದಲು ಸ್ಥಳೀಯ ಗ್ರಾಹಕರಿಗೆ ಪೂರೈಕೆ ಮಾಡುವ ಚಿಂತನೆ ನಡೆಸಿದ್ದೇವೆ. ಸಿಬ್ಬಂದಿಗಳಿಗೆ 15 ಸಾವಿರ ರೂ. ಸಂಬಳ ನೀಡಲಾಗುತ್ತಿದೆ. ತರಬೇತಿ ಅವಽಯಲ್ಲಿ 3 ಸಾವಿರ ರೂ. ನೀಡುತ್ತಿರುವುದಾಗಿ ವಿವರಿಸಿದರು.
ಉತ್ಪಾದನೆಯನ್ನು ಹೆಚ್ಚಿಸಲು ಸಂಯೋಜಿತ ರೇಷ್ಮೆ ನೇಯ್ಗೆ ಘಟಕ ಚನ್ನಪಟ್ಟಣದಲ್ಲಿ 20 ಇ-ಜಾಕಾರ್ಡ್ ಯಂತ್ರಗಳನ್ನು ಮತ್ತು ಸಂಯೋಜಿತ ನೇಯ್ಗೆ ಘಟಕದಲ್ಲಿಯೂ 10 ಇ-ಜಾಕಾರ್ಡ್ ಯಂತ್ರಗಳನ್ನು ಅಳವಡಿಸಲಾಗಿದೆ. ಇವುಗಳಿಂದ ಹೆಚ್ಚುವರಿಯಾಗಿ 75 ಸಾವಿರ ಮೀ. ಸೀರೆ ಉತ್ಪಾದಿಸಲು ಅವಕಾಶವಾಗುತ್ತಿದೆ ಎಂದು ಹೇಳಿದರು.
ಸಿಬ್ಬಂದಿಗಳ ವೇತನ ಹೆಚ್ಚಳದ ಬಗ್ಗೆ ವಿರೋಧ ಪಕ್ಷದವರು ಪ್ರಸ್ತಾಪಿಸಿದ್ದಕ್ಕೆ ವಸತಿ ಸಚಿವ ಜಮೀರ್ ಮಧ್ಯ ಪ್ರವೇಶ ಮಾಡಿ, ನಿಮ್ಮ ಸರ್ಕಾರ ಆಡಳಿತದಲ್ಲಿದ್ದಾಗ ಏಕೆ? ಸಿಬ್ಬಂದಿಗಳಿಗೆ ವೇತನ ಹೆಚ್ಚಳ ಮಾಡಿಲ್ಲ ಎಂದು ಪ್ರಶ್ನಿಸಿದರು.ಆಗ ಬಜೆಟ್‌ನ ಗಾತ್ರ ಎರಡೂವರೆ ಲಕ್ಷ ಕೋಟಿ ರೂ.ಮಾತ್ರ ಇತ್ತು. ಈಗ ನಾಲ್ಕೂವರೆ ಲಕ್ಷ ಕೋಟಿ ರೂ. ಆಗಿದೆ. ಜೊತೆಗೆ ಶಾಸಕರು, ಸಚಿವರ ವೇತನವನ್ನು ಹೆಚ್ಚಳ ಮಾಡಿಕೊಳ್ಳಲಾಗಿದೆ. ಬಡವರಿಗೆ ನ್ಯಾಯವಾದ ಬೆಲೆ ನೀಡಬಾರದೇ ಎಂದು ಪ್ರಶ್ನಿಸಿದರು.
ಚರ್ಚೆಯಲ್ಲಿ ಭಾಗವಹಿಸಿದ ಸಚಿವ ಬೈರತಿಸುರೇಶ್ ಸಿಬ್ಬಂದಿಗಳಿಗೆ ಹೆಚ್ಚಿನ ವೇತನ ನೀಡಲಿ. ಪ್ರಮುಖವಾಗಿ ಬೇಡಿಕೆ ಅನುಗುಣವಾಗಿ ಸೀರೆಗಳು ಲಭ್ಯವಾಗುವಂತೆ ಕ್ರಮಕೈಗೊಳ್ಳಬೇಕಿದೆ ಎಂದರು.
ಉತ್ಪಾದನೆಯನ್ನು ಹೆಚ್ಚಿಸಲು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ ಸಚಿವ ವೆಂಕಟೇಶ್ ಮೈಸೂರಿನ ರೇಷ್ಮೆಸೀರೆ ಉತ್ಪಾದನಾ ಘಟಕವನ್ನು ಮುಚ್ಚುವುದಿಲ್ಲ. ಕೆಲವರು ಮುಖ್ಯಮಂತ್ರಿಯವರಿಗೆ ತಪ್ಪು ಮಾಹಿತಿ ನೀಡಿ ರೇಷ್ಮ ಉತ್ಪಾದನಾ ಘಟಕದ ಜಾಗವನ್ನು ಕ್ರೀಡಾಂಗಣ ನಿರ್ಮಾಣಕ್ಕಾಗಿ ಕೇಳಲಾಗಿತ್ತು. ಕೆಲವು ಅಽಕಾರಿಗಳು ಮುಖ್ಯಮಂತ್ರಿ ಅವರಿಗೆ ತಪ್ಪು ಮಾಹಿತಿ ನೀಡಿದ್ದರು. ಈಗ ಅದನ್ನು ಸರಿಪಡಿಸಲಾಗಿದೆ. ರೇಷ್ಮೆ ಘಟಕವನ್ನು ಮುಚ್ಚುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.
