ಬೆಂಗಳೂರು,ಮಾ.13- ಕಾನೂನು ಬಾಹಿರವಾಗಿ ಅಕ್ರಮ ಬಡಾವಣೆ ನಿರ್ಮಾಣ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ವಿಧಾನಪರಿಷತ್‌ನಲ್ಲಿಂದು ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಎಚ್.ಗೋಪಿನಾಥ್ ಅವರ ಪ್ರಶ್ನೆಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಉತ್ತರಿಸುವಾಗ ಮಧ್ಯಪ್ರವೇಶಿಸಿ ಮಾತನಾಡಿದ ಅವರು, ಅಕ್ರಮ ಬಡಾವಣೆಯ ನಿವೇಶನ ನೋಂದಣಿ ಮಾಡುವುದನ್ನು ನಿಲ್ಲಿಸಲಾಗಿದೆ. ಬಡಾವಣೆ ನಿರ್ಮಾಣ ಮಾಡಿದವರು ಕಾನೂನು ಪ್ರಕಾರ ನಿಯಮ ಪಾಲನೆ ಮಾಡುತ್ತಿರಲಿಲ್ಲ. ಆದರೆ ಅಂತಹ ಬಡಾವಣೆಗಳಲ್ಲಿ ನಿವೇಶನ ಖರೀದಿ ಮಾಡಿದವರು ಸಂತ್ರಸ್ತರಾಗುತ್ತಿದ್ದಾರೆ. ಆ ಕಾರಣಕ್ಕಾಗಿ ಅಕ್ರಮ ಬಡಾವಣೆ ನಿವೇಶನ ನೋಂದಣಿಯನ್ನು ನಿಲ್ಲಿಸಿದ್ದೇವೆ ಎಂದರು.
ಬಡಾವಣೆಯಲ್ಲಿ ಅರ್ಧ ಉಳಿದಿರುವ ನಿವೇಶನಗಳಿಗೆ ನೋಂದಣಿ ಮಾಡಬೇಕಾದರೆ ನಿಯಮಗಳನ್ನು ಪಾಲಿಸಬೇಕು. ಬಡಾವಣೆ ವಿನ್ಯಾಸ ಯೋಜನೆಗೆ ಅನುಮೋದನೆ ಪಡೆದುಕೊಂಡರೆ ಅವಕಾಶ ಕೊಡಬಹುದಾಗಿದೆ ಎಂದು ಸ್ಪಷ್ಟಪಡಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಅನಧಿಕೃತ ಬಡಾವಣೆಗಳಿಂದ ತೆರಿಗೆ ಬರುತ್ತಿಲ್ಲ. ನಿಯಮ ಮೀರಿ ಬಡಾವಣೆ ನಿರ್ಮಿಸಿದರೆ ಸಕ್ರಮ ಮಾಡುವುದಾದರೂ ಹೇಗೆ? ಬಿ ಖಾತಾ ನೀಡುವ ವಿಚಾರದಲ್ಲೂ ನಿಯಮ ತರಬೇಕಾಗುತ್ತದೆ ಎಂದು ಹೇಳಿದರು.
ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ಅಧಿನಿಯಮದ ಪ್ರಕಾರ, 1993, 190 ಎ ಪ್ರಕರಣದ ತರುವಾಯ 190 ಬಿ ಮತ್ತು 199 ಸಿ ಹೊಸ ಪ್ರಕರಣಗಳನ್ನು ಸೇರ್ಪಡೆ ಮಾಡಿದೆ ಎಂದರು.
ಕಂದಾಯ ಭೂಮಿಯಲ್ಲಿ ವಿನ್ಯಾಸ ಅನುಮೋದನೆ ಇಲ್ಲದ ಬಡಾವಣೆಗಳಲ್ಲಿ ನೋಂದಣಿಯಾಗದ ನಿವೇಶನಗಳ ಬಗ್ಗೆ ಕ್ರಮ ವಹಿಸಬಹುದಾಗಿದೆ. ಅಧಿಸೂಚಿತ ದಿನಾಂಕಕ್ಕೆ ಪೂರ್ವದಲ್ಲಿ ತೆರಿಗೆ ವ್ಯಾಪ್ತಿಗೆ ಒಳಪಡದ ಖಾಲಿ ನಿವೇಶನಗಳನ್ನು ಈಗಾಗಲೇ ಅಭಿವೃದ್ಧಿಪಡಿಸಲಾದ ಬಡಾವಣೆಗಳಲ್ಲಿ ಮೂಲ ಮಾಲೀಕರ ಹೆಸರಿನಲ್ಲಿರುವ ಕಂದಾಯ ಜಮೀನಿನಲ್ಲಿ ನಿವೇಶನಗಳೆಂಬ ಕಾರಣಕ್ಕಾಗಿ ತೆರಿಗೆ ವ್ಯಾಪ್ತಿಗೆ ಒಳಪಡಿಸಲು ಅವಕಾಶವಿಲ್ಲ ಎಂದು 2025ರ ಅ.15 ರಂದು ಅಧಿಸೂಚಿಸಲಾಗಿದೆ. ಈಗಾಗಲೇ ಭೂ ಪರಿವರ್ತನೆ ವರ್ಗಾವಣೆಗೆ ಒಳಪಟ್ಟಿರುವ ನಿವೇಶನಗಳನ್ನು ಹೊರತುಪಡಿಸಿ ಉಳಿಕೆ ಜಾಗವನ್ನು ಮಾಲೀಕನ ಹೆಸರಿನಲ್ಲಿ ಏಕ ನಿವೇಶನವೆಂದು ಪರಿಗಣಿಸಬಹುದು ಎಂದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಳೆದ ಮೂರು ವರ್ಷಗಳಲ್ಲಿ 21 ಐಟಿ ಕಂಪನಿಗಳು ಪ್ರಾರಂಭವಾಗಿವೆ ಎಂದು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ಕೆ.ಎನ್.ನವೀನ್ ಅವರ ಪ್ರಶ್ನೆಗೆ ಉತ್ತರಿಸಿದರು,
ಬಳ್ಳಾರಿ ಜಿಲ್ಲೆಯಲ್ಲಿ ಇನ್ಕುಬೇಷನ್ ಕೇಂದ್ರ, ಕಲಬುರಗಿಯಲ್ಲಿ ಕೃಷಿ ಕಲ್ಪ ಫೌಂಡೇಷನ್, ಆಧುನಿಕ ಕೃಷಿ ಉಪಕರಣಗಳ ಅಭಿವೃದ್ಧಿ ಕೇಂದ್ರವನ್ನು ಸ್ಥಾಪನೆ ಮಾಡಲಾಗಿದೆ. ರಾಯಚೂರಿನಲ್ಲಿ ಐಐಐಟಿ ಸ್ಥಾಪನೆಗೆ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದ್ದು, ಲೀಪ್ ಯೋಜನೆಯಡಿಯಲ್ಲಿ ಲ್ಯಾಬ್‌ಗಳ ಸ್ಥಾಪನೆ ಮಾಡಲಾಗುತ್ತಿದೆ. ಕಲಬುರಗಿಯ ನಂದೂರಿನಲ್ಲಿ ಎಲೆಕ್ಟ್ರಾನಿಕ್ ಉತ್ಪಾದನೆಗೆ 36 ಎಕರೆ ಜಮೀನು ಮೀಸಲಿರಿಸಲಾಗಿದೆ ಎಂದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಳೆದ ಮೂರು ವರ್ಷಗಳಲ್ಲಿ 72 ನವೋದ್ಯಮಗಳು ನೋಂದಣಿಯಾಗಿವೆ. 20 ನವೋದ್ಯಮಿಗಳಿಗೆ 4.90 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಈ ಭಾಗದಲ್ಲಿ ಸಾಕಷ್ಟು ಪ್ರತಿಭಾವಂತರಿದ್ದು, ಮಾನವ ಸಂಪನೂಲವೂ ಇದೆ. ಅಗತ್ಯವಿರುವ ಕೌಶಲ್ಯ ಪಡೆಯಲು ಉತ್ತೇಜನ ನೀಡಲಾಗುತ್ತಿದೆ ಎಂದು ಹೇಳಿದರು.
