ಬೆಂಗಳೂರು,ಸೆ.29- ಮನೆಗಳ ಮುಂದೆ ಸಾರ್ವಜನಿಕ ರಸ್ತೆಯಲ್ಲಿ ವಾಹನ ನಿಲ್ಲಿಸುವುದಕ್ಕೂ ಶುಲ್ಕ ವಿಧಿಸುವ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಯೋಜನೆಯ ಕಾನೂನು ಸಾಧ್ಯತೆಗಳ ಕುರಿತು ಸರ್ಕಾರ ಸಲಹೆ ಪಡೆಯಲು ಮುಂದಾಗಿದೆ. ಪ್ರಸ್ತಾವಿತ ಪಾರ್ಕಿಂಗ್ ನಿಯಮಗಳ ಕುರಿತು ಸಾರ್ವಜನಿಕರಿಂದ ನೂರಾರು ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದು, ಅವುಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.
ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ನಿಯಂತ್ರಿಸುವುದು ಹಾಗೂ ಸಾರ್ವಜನಿಕ ರಸ್ತೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ನಿಯಂತ್ರಿಸುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) 2026ರ ಪಾರ್ಕಿಂಗ್ ನಿಯಮಗಳ ಕರಡು ರೂಪಿಸಿದೆ. ಕರಡಿನಲ್ಲಿ ಮನೆಗಳ ಸಮೀಪದ ಸಾರ್ವಜನಿಕ ರಸ್ತೆಗಳಲ್ಲಿ ವಾಹನ ನಿಲ್ಲಿಸಲು ವಾರ್ಷಿಕ ಪಾರ್ಕಿಂಗ್ ಪರವಾನಗಿ ಶುಲ್ಕದ ಪ್ರಸ್ತಾವನೆ ಇದೆ.
ಸಣ್ಣ ಕಾರಿಗೆ 15,000 ರೂ., ಸೆಡಾನ್‌ಗೆ 20,000 ರೂ. ಹಾಗೂ ಎಸ್‌ಯುವಿಗೆ 25,000 ರೂ. ವಾರ್ಷಿಕ ಶುಲ್ಕ ವಿಧಿಸುವ ಪ್ರಸ್ತಾವನೆ ಮಾಡಲಾಗಿದೆ.ಈ ಪ್ರಸ್ತಾವನೆಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಮನೆ ಮುಂದೆ ವಾಹನ ನಿಲ್ಲಿಸುವುದಕ್ಕೂ ಶುಲ್ಕ ವಿಧಿಸುವುದು ನಿವಾಸಿಗಳ ಮೇಲಿನ ಹೆಚ್ಚುವರಿ ಆರ್ಥಿಕ ಹೊರೆಯಾಗಲಿದೆ ಎಂಬ ಆಕ್ಷೇಪಣೆಗಳು ಕೇಳಿಬಂದಿವೆ.
ಪಾರ್ಕಿಂಗ್ ಶುಲ್ಕ ಹಾಗೂ ಪರವಾನಗಿ ವ್ಯವಸ್ಥೆಗೆ ಸಂಬಂಧಿಸಿದಂತೆ ಬಂದಿರುವ ಆಕ್ಷೇಪಣೆಗಳನ್ನು ಸರ್ಕಾರ ಪರಿಶೀಲಿಸುತ್ತಿದೆ. ಈ ಹಿನ್ನೆಲೆಯಲ್ಲಿ ಯೋಜನೆಯ ಕಾನೂನು ಮತ್ತು ಆಡಳಿತಾತಕ ಅಂಶಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇದರ ನಡುವೆ ಸಚಿವರು ಹಾಗೂ ಶಾಸಕರ ವಲಯದಲ್ಲೂ ಪ್ರಸ್ತಾವನೆ ಕುರಿತು ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ. ಸಾರ್ವಜನಿಕರ ಆಕ್ಷೇಪಣೆ, ಕಾನೂನು ಸಲಹೆ ಹಾಗೂ ಸರ್ಕಾರದ ಪರಿಶೀಲನೆಯ ಬಳಿಕವೇ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
*ಪಾರ್ಕಿಂಗ್ ನಿಯಮಗಳಿಗೆ ವ್ಯಾಪಕ ಆಕ್ಷೇಪಣೆ
*ಮನೆ ಮುಂದೆ ವಾಹನ ನಿಲುಗಡೆಗೂ ವಾರ್ಷಿಕ ಶುಲ್ಕದ ಪ್ರಸ್ತಾವನೆ
*ಸಣ್ಣ ಕಾರಿಗೆ 15 ಸಾವಿರ ರೂ., ಸೆಡಾನ್‌ಗೆ 20 ಸಾವಿರ ರೂ., ಎಸ್‌ಯುವಿಗೆ 25 ಸಾವಿರ ರೂ.
*ಆಕ್ಷೇಪಣೆ ಪರಿಶೀಲಿಸಿ ಕಾನೂನು ಸಲಹೆಗೆ ಸರ್ಕಾರ
*ಅಂತಿಮ ನಿರ್ಧಾರದತ್ತ ಸರ್ಕಾರದ ಗಮನ
