Tuesday, April 14, 2026
Homeರಾಜ್ಯಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯೊಬ್ಬನಿಂದ ಸಹಪಾಠಿಗಳ ಮೇಲೆ ಏಕಾಏಕಿ ದಾಳಿ, ಓರ್ವ ವಿದ್ಯಾರ್ಥಿ ಸಾವು

ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯೊಬ್ಬನಿಂದ ಸಹಪಾಠಿಗಳ ಮೇಲೆ ಏಕಾಏಕಿ ದಾಳಿ, ಓರ್ವ ವಿದ್ಯಾರ್ಥಿ ಸಾವು

Student attacks classmates in hostel, one student dies

ಬೆಂಗಳೂರು, ಮಾ.8- ಖಾಸಗಿ ಶಾಲೆಯ ಹಾಸ್ಟೆಲ್‌ನಲ್ಲಿ ತಂಗಿದ್ದ ವಿದ್ಯಾರ್ಥಿಯೊಬ್ಬ ಏಕಾಏಕಿ ಮಾರಕ ಆಯುಧದಿಂದ ದಾಳಿ ಮಾಡಿದ್ದರಿಂದಾಗಿ ವಾರ್ಡನ್‌ ಸೇರಿ 7 ಜನ ಗಾಯಗೊಂಡು, ಸಹಪಾಠಿ ವಿದ್ಯಾರ್ಥಿಯೊಬ್ಬನ ಹತ್ಯೆಯಾಗಿದೆ.

9ನೇ ತರಗತಿಯ 9 ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನ ಒಂದೇ ಕೊಠಡಿಯಲ್ಲಿ ಇರಿಸಲಾಗಿತ್ತು. ನಿನ್ನೆ ರಾತ್ರಿ ಊಟದ ನಂತರ ಮಲಗುವ ಸಮಯದಲ್ಲಿ ಓರ್ವ ವಿದ್ಯಾರ್ಥಿ ಚಾಕು ಬಳಸಿ ಸಹಪಾಠಿಗಳ ಮೇಲೆ ದಾಳಿ ಮಾಡಿದ್ದಾನೆ. ಇದರಿಂದ ಒಬ್ಬ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದಾನೆ.

ವಿದ್ಯಾರ್ಥಿಗಳ ಕಿರುಚಾಟ ಕೇಳಿ ಮೇಲಿನ ಮಹಡಿಯಲ್ಲಿದ್ದ ಹಾಸ್ಟೆಲ್‌ನ ವಾರ್ಡನ್‌ ಬ್ಲೆಸ್ಸಿ (30) ಕೆಳಗೆ ಬಂದು ಗಲಾಟೆ ಬಿಡಿಸಲು ಪ್ರಯತ್ನಿಸಿದ್ದಾರೆ. ದಾಳಿಕೋರ ವಿದ್ಯಾರ್ಥಿ ವಾರ್ಡನ್‌ ಮೇಲೂ ಆಕ್ರಮಣ ಮಾಡಿದ್ದಾನೆ ಎಂದು ಹೇಳಲಾಗಿದೆ. ಇದರಿಂದಾಗಿ 6 ಮಂದಿ ವಿದ್ಯಾರ್ಥಿಗಳು ಮತ್ತು ವಾರ್ಡನ್‌ ಗಾಯಗೊಂಡಿದ್ದಾರೆ. ಎಲ್ಲರನ್ನು ಬಳ್ಳಾರಿಯ ಬಿಮ್ಸೌ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ದಾಳಿ ಮಾಡಿದ ವಿದ್ಯಾರ್ಥಿ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿ ಗೋನಾಳ್‌ ಗ್ರಾಮದವನು ಎಂದು ಹೇಳಲಾಗಿದ್ದು, ಆತ ಭದ್ರತಾ ಸಿಬ್ಬಂದಿಯನ್ನು ಬೆದರಿಸಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.ಗಾಯಗೊಂಡಿದ್ದ ಆಂಧ್ರಪ್ರದೇಶ ಮೂಲದ 15 ವರ್ಷದ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಹಾಸ್ಟೆಲ್‌ನ ಆಡಳಿತ ಮಂಡಳಿಯವರು ವಿದ್ಯಾರ್ಥಿಯ ಪೋಷಕರಿಗೆ ರಾತ್ರಿ 11 ಗಂಟೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಬಳ್ಳಾರಿ ವಲಯದ ಐಜಿಪಿ ಹರ್ಷ ಗುರುಕುಲ ಇಂಟರ್‌ನ್ಯಾಷನಲ್‌ ರೆಸಿಡೆನ್ಷಿಯಲ್‌ ಶಾಲೆಯಲ್ಲಿ ಒಂದೇ ಕೊಠಡಿಯಲ್ಲಿದ್ದ ವಿದ್ಯಾರ್ಥಿಗಳ ಪೈಕಿ ಒಬ್ಬ ಅಪ್ರಾಪ್ತ ಏಕಾಏಕಿ ಸಹಪಾಠಿಗಳ ಮೇಲೆ ಹಲ್ಲೆ ಮಾಡಿದ್ದಾನೆ. ಘಟನೆಯಲ್ಲಿ 7 ಜನರಿಗೆ ಗಾಯವಾಗಿದೆ. ಹಾಸ್ಟೆಲ್‌ನ ನಿಗಾವಣೆಯಲ್ಲಿದ್ದ ಸಮಾಜ ಅಧ್ಯಯನ ಶಿಕ್ಷಕಿ ಬೆಸ್ಲಿ ಅವರಿಗೂ ಗಾಯವಾಗಿದೆ. ಹಲ್ಲೆ ಮಾಡಿದ ವಿದ್ಯಾರ್ಥಿ ಹರಿತವಾದ ಆಯುಧ ಬಳಸಿದ್ದಾನೆ. ಘಟನೆಯಲ್ಲಿ ಒಬ್ಬ ವಿದ್ಯಾರ್ಥಿ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.

ಮೃತಪಟ್ಟ ವಿದ್ಯಾರ್ಥಿಯ ತಂದೆ ವಕೀಲ ಲಕ್ಷ್ಮೀಕಾಂತ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದು, ಚಾಕುವಿನಿಂದ ಹಲ್ಲೆ ಮಾಡಿರುವುದಾಗಿ ಗಾಯಾಳುಗಳು ತಿಳಿಸಿದ್ದಾರೆ. ಶಾಲೆಯ ಆಡಳಿತ ಮಂಡಳಿ ವಿದ್ಯಾರ್ಥಿಗಳ ಕಾಳಜಿ ವಹಿಸಬೇಕಿತ್ತು. ಆದರೆ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ನಮ ಮಗನನ್ನು ಕಳೆದುಕೊಂಡಿದ್ದೇವೆ ಎಂದು ದುಃಖಿಸಿದ್ದಾರೆ.

5ನೇ ತರಗತಿಯಿಂದಲೂ ಮಗನನ್ನು ಇಲ್ಲಿ ಓದಿಸುತ್ತಿದ್ದವು. ನಾಲ್ಕು ವರ್ಷದಿಂದ ಆತ ಹಾಸ್ಟೆಲ್‌ನಲ್ಲಿದ್ದ. ನಿನ್ನೆ ರಾತ್ರಿ 11 ಗಂಟೆಗೆ ಕರೆ ಮಾಡಿ ಮಗನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದರು. ಇಲ್ಲಿಗೆ ಬಂದಾಗ ನಾವು ಮಗನನ್ನು ಕಳೆದುಕೊಂಡಿರುವುದು ಗೊತ್ತಾಯಿತು ಎಂದಿದ್ದಾರೆ.

ಗ್ರಾಮಸ್ಥರು, ಮೃತಪಟ್ಟ ವಿದ್ಯಾರ್ಥಿ ಅತ್ಯಂತ ಸೌಮ್ಯ ಸ್ವಭಾವದವನು. ಯಾರೊಂದಿಗೂ ಗಲಾಟೆಗೆ ಹೋದವನು ಅಲ್ಲ ಎಂದು ಸರಿಸಿಕೊಂಡಿದ್ದಾರೆ. ದಾಳಿ ಮಾಡಿದ ವಿದ್ಯಾರ್ಥಿ ಮಾದಕ ವಸ್ತು ಸೇವನೆ ಮಾಡಿರಬಹುದು ಎಂಬ ಅನುಮಾನವನ್ನು ಪೋಷಕರು ವ್ಯಕ್ತಪಡಿಸಿದ್ದಾರೆ. ಇಲ್ಲದೇ ಹೋದರೆ ಅಷ್ಟು ಜನರ ಮೇಲೆ ದಾಳಿ ಮಾಡುವ ಸಂದರ್ಭವಾದರೂ ಏನಿತ್ತು ಎಂದು ಪ್ರಶ್ನಿಸಿದ್ದಾರೆ.

ದಾಳಿ ಮಾಡಿದ ವಿದ್ಯಾರ್ಥಿ ಮಾನಸಿಕವಾಗಿ ಅಸ್ವಸ್ತನಾಗಿದ್ದ ಎಂದು ಆಡಳಿತ ಮಂಡಳಿಯವರು ಈಗ ಹೇಳುತ್ತಿದ್ದಾರೆ. ಅಂತಹ ವಿದ್ಯಾರ್ಥಿಯ ಮೇಲೆ ತೀವ್ರ ನಿಗಾವಹಿಸಬೇಕಿರುವುದು ಅವರ ಕರ್ತವ್ಯ. ಈ ವಿಷಯದಲ್ಲಿ ಆಡಳಿತ ಮಂಡಳಿ ಬೇಜಾವಾಬ್ದಾರಿತನ ತೋರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತೆ ಕೆಲವರು ಮಾತನಾಡಿ, ವಿದ್ಯಾರ್ಥಿ ಹೀರೊ ಆಗಲು, ರೌಡಿಜಂ ಮಾಡಿ ಮಿಂಚುವ ಮನೋಭಾವದಿಂದ ವಿದ್ಯಾರ್ಥಿ ಈ ಕೃತ್ಯವೆಸಗಿದ್ದಾನೆ ಎಂದು ಸಹಪಾಠಿಗಳು ಹೇಳುತ್ತಿದ್ದಾರೆ ಎಂದು ವಿವರಿಸಿದ್ದಾರೆ.

RELATED ARTICLES

Latest News