Wednesday, April 29, 2026
Homeರಾಜ್ಯಜಿಬಿಎ ಚುನಾವಣೆಗೆ ಅಂತಿಮ ಮೀಸಲಾತಿ ಪಟ್ಟಿ ಪ್ರಕಟ

ಜಿಬಿಎ ಚುನಾವಣೆಗೆ ಅಂತಿಮ ಮೀಸಲಾತಿ ಪಟ್ಟಿ ಪ್ರಕಟ

Final reservation list for GBA elections published

ಬೆಂಗಳೂರು, ಮಾ.8- ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆಗೆ ಅಂತಿಮ ಮೀಸಲಾತಿ ಪಟ್ಟಿ ಪ್ರಕಟಗೊಂಡಿದೆ.ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆಗೆ ಸಂಬಂಧಿಸಿದಂತೆ ವಾರ್ಡ್‌ಗಳ ಅಂತಿಮ ಮೀಸಲಾತಿ ಪಟ್ಟಿಯನ್ನು ನಗರಾಭಿವೃದ್ಧಿ ಇಲಾಖೆ ಪ್ರಕಟಿಸಿದೆ.

ಒಟ್ಟು 369 ವಾರ್ಡ್‌ಗಳ ಪೈಕಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಕಲ್ಪಿಸಲಾಗಿದ್ದು, 185 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.ಈ ಹಿಂದೆ ಪ್ರಕಟಿಸಲಾಗಿದ್ದ ಕರಡು ಮೀಸಲಾತಿ ಪಟ್ಟಿಗೆ ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರಿಂದ ನೂರಾರು ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು. ಈ ಆಕ್ಷೇಪಣೆಗಳನ್ನು ಪರಿಶೀಲಿಸಿದ ಅಧಿಕಾರಿಗಳು ಕೆಲವು ಲೋಪದೋಷಗಳನ್ನು ಸರಿಪಡಿಸಿ ಅಂತಿಮ ಮೀಸಲಾತಿ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ.

ಕರಡು ಪಟ್ಟಿಯಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಕಲ್ಪಿಸುವಲ್ಲಿ ಕೆಲವು ಅಸಮತೋಲನ ಉಂಟಾಗಿದ್ದ ಹಿನ್ನೆಲೆಯಲ್ಲಿ ಆಕ್ಷೇಪಣೆಗಳು ವ್ಯಕ್ತವಾಗಿದ್ದವು. ಅಂತಿಮ ಪಟ್ಟಿಯಲ್ಲಿ ಆ ಸಮಸ್ಯೆಗಳನ್ನು ನಿವಾರಿಸಿ ಮಹಿಳೆಯರಿಗೆ ಸಮರ್ಪಕ ಮೀಸಲಾತಿ ನೀಡಲಾಗಿದೆ.
ಇದಲ್ಲದೆ, ಕೆಲ ಪ್ರದೇಶಗಳಲ್ಲಿ ಮೊದಲು ನಿಗದಿಪಡಿಸಲಾಗಿದ್ದ ಮೀಸಲಾತಿಯಲ್ಲಿ ಬದಲಾವಣೆ ಮಾಡಲಾಗಿದೆ. ಕೆಲ ವಾರ್ಡ್‌ಗಳಲ್ಲಿ ಟಿಕೆಟ್‌ ಕೈ ತಪ್ಪುವ ಸಾಧ್ಯತೆ ಇದೆ ಎಂದು ಕೆಲ ಯುವ ಕಾಂಗ್ರೆಸ್‌‍ ಕಾರ್ಯಕರ್ತರು ಒತ್ತಾಯ ಮಾಡಿದ ಹಿನ್ನೆಲೆಯಲ್ಲಿ ಆಡಳಿತ ಪಕ್ಷಕ್ಕೆ ಅನುಕೂಲವಾಗುವಂತೆ ಕೆಲವು ವಾರ್ಡ್‌ಗಳ ಮೀಸಲಾತಿಯನ್ನು ಬದಲಾಯಿಸಲಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಒಟ್ಟು 369 ವಾರ್ಡಗಳು.ಮೀಸಲಾತಿ ಪಟ್ಟಿಯಲ್ಲಿ ಮಹಿಳೆಯರಿಗೆ 185 ವಾರ್ಡ್‌ ಮೀಸಲು.ಒಟ್ಟು 43 ವಾರ್ಡ್‌ಗಳು ಎಸ್‌‍ಸಿ ಗೆ ಮೀಸಲು, ಎಸ್‌‍ಟಿ ವರ್ಗಕ್ಕೆ ಒಟ್ಟು 7 ವಾರ್ಡ್‌ ಮೀಸಲು, ಬಿಸಿಎ ವರ್ಗಕ್ಕೆ 97 ವಾರ್ಡ್‌ ಮೀಸಲು, ಬಿಸಿಬಿ ವರ್ಗಕ್ಕೆ 24 ವಾರ್ಡ್‌ಗಳು ಹಾಗೂ ಸಾಮಾನ್ಯ ವರ್ಗಕ್ಕೆ 192 ವಾರ್ಡ್‌ಗಳನ್ನು ಮೀಸಲಿಡಲಾಗಿದೆ.

ಬೆಂಗಳೂರು ನಗರ ಪಾಲಿಕೆ ;
ಒಟ್ಟು ವಾರ್ಡ್‌ಗಳು 72, ಎಸ್‌‍ಸಿಗೆ 7 ವಾರ್ಡ್‌ ಗಳು, ಎಸ್‌‍ಟಿಗೆ 1 ವಾರ್ಡ್‌, ಬಿಸಿಎಗೆ-19, ಬಿಸಿಬಿಗೆ 5 ಹಾಗೂ ಸಾಮಾನ್ಯ ವರ್ಗಕ್ಕೆ 40 ವಾರ್ಡ್‌.

ಬೆಂಗಳೂರು ಉತ್ತರ ನಗರ ಪಾಲಿಕೆ;
ಒಟ್ಟು ವಾರ್ಡ್‌ ಗಳು 72 ಎಸ್‌‍ಸಿಗೆ 9, ಎಸ್ಟಿಗೆ 2 , ಬಿಸಿಎಗೆ 19, ಬಿಸಿಬಿಎ 5 ಹಾಗೂ ಸಾಮಾನ್ಯ ವರ್ಗಕ್ಕೆ 37 ವಾರ್ಡ್‌ಗಳನ್ನು ನೀಡಲಾಗಿದೆ.

ಬೆಂಗಳೂರು ಪಶ್ಚಿಮ ನಗರ ಪಾಲಿಕೆ;
ಒಟ್ಟು ವಾರ್ಡ್‌ಗಳು 112 ಇದರಲ್ಲಿ ಎಸ್‌‍ಸಿಗೆ 9, ಎಸ್ಟಿಗೆ 2, ಬಿಸಿಎಗೆ 30, ಬಿಸಿಬಿ ಗೆ 7 ಹಾಗೂ ಸಾಮಾನ್ಯ ವರ್ಗಕ್ಕೆ 64 ವಾರ್ಡ್‌ಗಳು.

ಬೆಂಗಳೂರು ಪೂರ್ವ ನಗರ ಪಾಲಿಕೆ;
ಒಟ್ಟು ವಾರ್ಡ್‌ ಗಳು 50 ಇದರಲ್ಲಿ ಎಸ್‌‍ಸಿಗೆ7 , ಎಸ್ಟಿಗೆ ಒಂದು, ಬಿಸಿಎಗೆ 14, ಬಿಸಿಬಿಗೆ ಮೂರು ಹಾಗೂ ಸಾಮಾನ್ಯ ವರ್ಗಕ್ಕೆ 25 ವಾರ್ಡ್‌ಗಳನ್ನು ನಿಗದಿಗೊಳಿಸಲಾಗಿದೆ.

ಬೆಂಗಳೂರು ಕೇಂದ್ರ ನಗರ ಪಾಲಿಕೆ;
ಒಟ್ಟು ವಾರ್ಡ್‌ ಗಳು 63 ಇದರಲ್ಲಿ ಎಸ್‌‍ಸಿಗೆ – 11, ಎಸ್ಟಿಗೆ ಒಂದು, ಬಿಸಿಎಗೆ 15, ಬಿಸಿಬಿ ನಾಲ್ಕು ಹಾಗೂ ಸಾಮಾನ್ಯ ವರ್ಗಕ್ಕೆ 32 ಸ್ಥಾನಗಳನ್ನು ಕಲ್ಪಿಸಿಕೊಡಲಾಗಿದೆ.

RELATED ARTICLES

Latest News