ಬೆಂಗಳೂರು, ಮಾ.17- ವಿಧಾನ ಸಭೆಯಲ್ಲಿ ಲಿಖಿತವಾಗಿ ಉತ್ತರಿಸಬೇಕಾದ ಪ್ರಶ್ನೆಗಳ ಪೈಕಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧೀನದಲ್ಲಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಮೊದಲ ಸ್ಥಾನದಲ್ಲಿ ಇದೆ.
ಎಂದಿನಂತೆ ವಿಧಾನಸಭೆಯಲ್ಲಿ ಇಂದು ಪ್ರಶ್ನೋತ್ತರದ ಬಳಿಕ, ಲಿಖಿತವಾಗಿ ಉತ್ತರಿಸಬೇಕಾದ ಚುಕ್ಕೆ ರಹಿತ ಗುರುತಿನ ಪ್ರಶ್ನೆಗಳಿಗೆ ಸರ್ಕಾರದ ಪರವಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಉತ್ತರ ಮಂಡಿಸಿದರು. ಒಟ್ಟು 221 ಪೈಕಿ 51 ಉತ್ತರಗಳನ್ನು ಮಂಡಿಸಲಾಗಿದೆ ಎಂದು ತಿಳಿಸಿದರು.
ಇದಕ್ಕೆ ಬಿಜೆಪಿಯ ಸುರೇಶ್ ಕುಮಾರ್ ಸೇರಿದಂತೆ ಮತ್ತಿತರರು ತಗಾದೆ ತೆಗೆದು, ಸಭಾಧ್ಯಕ್ಷರು ನಿನ್ನೆಯಷ್ಟೇ ಅಷ್ಟು ಕಠಿಣ ಮಾತುಗಳಲ್ಲಿ ಹೇಳಿದ್ದಾರೆ. ಆದರೂ ಸರ್ಕಾರ ಸುಧಾರಣೆ ಆಗಿಲ್ಲ ಎಂದು ಲೇವಡಿ ಮಾಡಿದರು. ಸಚಿವ ಪರಮೇಶ್ವರ್, ಈ ವಿಚಾರವಾಗಿ ಸಭಾಧ್ಯಕ್ಷರ ಆದೇಶವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ಸಚಿವರಿಗೆ ಸೂಚನೆ ನೀಡಿದ್ದಾರೆ.
ಮುಖ್ಯ ಕಾರ್ಯದರ್ಶಿ ಅವರ ಮೂಲಕ ಆಯಾ ಇಲಾಖೆಗಳ ಕಾರ್ಯದರ್ಶಿಗಳಿಗೂ ಆದೇಶ ನೀಡಲಾಗಿದೆ. ಒಂದು ವೇಳೆ ಯಾರಾದರೂ ನಿರ್ಲಕ್ಷ್ಯ ವಹಿಸಿದರೆ ಅಮಾನತುಗೊಳಿಸುವ ಎಚ್ಚರಿಕೆಯನ್ನು ನೀಡಿದ್ದಾರೆ. ನಾಳೆಯಿಂದ ಪರಿಸ್ಥಿತಿ ಸುಧಾರಣೆಯಾಗಲಿದೆ ಎಂದು ಭರವಸೆ ನೀಡಿದರು.
ಸಭಾಧ್ಯಕ್ಷ ಯು.ಟಿ.ಖಾದರ್ ವಿವಿಧ ಇಲಾಖೆಗಳಲ್ಲಿ ಬಾಕಿ ಇರುವ ಪ್ರಶ್ನೋತ್ತರದ ಮಾಹಿತಿಯನ್ನು ಸದನಕ್ಕೆ ನೀಡಿದರು. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ 73 ಪ್ರಶ್ನೆಗಳನ್ನು ಕೇಳಿದರೆ, ಆರಕ್ಕೆ ಮಾತ್ರ ಉತ್ತರ ಬಂದಿದೆ. ಆರ್ಥಿಕ ಇಲಾಖೆಯಿಂದ 33 ಪ್ರಶ್ನೆಗಳ ಪೈಕಿ ಆರಕ್ಕೆ ಮಾತ್ರ ಉತ್ತರ ಬಂದಿದೆ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಗೆ ಒಂಬತ್ತು ಪ್ರಶ್ನೆಗಳು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಗೆ 10 ಪ್ರಶ್ನೆಗಳು, ಸಹಕಾರ ಇಲಾಖೆಗೆ 12 ಪ್ರಶ್ನೆಗಳನ್ನು ಕೇಳಲಾಗಿದೆ ಆದರೆ ಒಂದಕ್ಕೂ ಉತ್ತರ ಬಂದಿಲ್ಲ .
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಒಂದು ಪ್ರಶ್ನೆ ಕೇಳಲಾಗಿತ್ತು. ಉತ್ತರ ಬಂದಿದೆ. ಜಲ ಸಂಪನೂಲ ಇಲಾಖೆಗೆ 33 ಪ್ರಶ್ನೆಗಳ ಪೈಕಿ ನಾಲ್ಕು, ನಗರಾಭಿವೃದ್ಧಿ ಇಲಾಖೆಯಿಂದ 21 ಪ್ರಶ್ನೆಗಳ ಪೈಕಿ ನಾಲ್ಕಕ್ಕೆ ಒಳಾಡಳಿತ ಇಲಾಖೆಯಿಂದ 35 ಪ್ರಶ್ನೆಗಳ ಪೈಕಿ 26 ಪ್ರಶ್ನೆಗಳಿಗೆ, ಕಾನೂನು ಮತ್ತು ಮಾನವ ಹಕ್ಕುಗಳ ಇಲಾಖೆಯಿಂದ 5 ಪ್ರಶ್ನೆಗಳ ಪೈಕಿ ಮೂರಕ್ಕೆ, ಪ್ರವಾಸೋದ್ಯಮ ಇಲಾಖೆಯಿಂದ 25 ಪ್ರಶ್ನೆಗಳ ಪೈಕಿ ಒಂದಕ್ಕೆ, ಸಣ್ಣ ನೀರಾವರಿ ಇಲಾಖೆಯಿಂದ 19 ಪ್ರಶ್ನೆಗಳ ಪೈಕಿ ಹದಿಮೂರಕ್ಕೆ ಉತ್ತರ ಬಂದಿದೆ.
ಮಾಹಿತಿ ತಂತ್ರಜ್ಞಾನ ಇಲಾಖೆಯಲ್ಲಿ ಎರಡು ಪ್ರಶ್ನೆಗಳ ಪೈಕಿ ಎರಡಕ್ಕೂ ಉತ್ತರ ಬಂದಿದೆ ಎಂದು ವಿವರ ನೀಡಿದರು. ನಿನ್ನೆಯಷ್ಟೇ ಮದ್ದು ನೀಡಿದ್ದೇವೆ ಏಕಾಏಕಿ ಗುಣಮುಖವಾಗುವುದಿಲ್ಲ ಎರಡು ಮೂರು ದಿನ ಬೇಕಾಗುತ್ತದೆ ಒಟ್ಟಿನಲ್ಲಿ ಪರಿಸ್ಥಿತಿ ಸರಿಹೋಗುತ್ತದೆ ಎಂದು ಸಭಾಧ್ಯಕ್ಷರು ಹೇಳಿದರು.
ಬಳಿಕ ಬಿಜೆಪಿಯ ಡಾ.ಸಿ.ಎನ್. ಅಶ್ವತ್‌್ಥ ನಾರಾಯಣ ಬೆಂಗಳೂರು ನಗರ ಅಭಿವೃದ್ಧಿ ಮತ್ತು ಆರೋಗ್ಯ ಇಲಾಖೆ ಸಂಬಂಧಪಟ್ಟ ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿದ್ದರು. ಇದೇ ದಿನ ಅವಕಾಶ ಮಾಡಿಕೊಡುವುದಾಗಿ ಸಭಾಧ್ಯಕ್ಷರು ಭರವಸೆ ನೀಡಿದರು.
