Homeರಾಜ್ಯ'ಪ್ರೇಮದ ಊರಲಿ' ಸಿನಿಮಾ ನೋಡಲು ಹೋಗಿದ್ದವರ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿ ಸಿಕ್ಕಿಬಿದ್ದ ಚೋರ

‘ಪ್ರೇಮದ ಊರಲಿ’ ಸಿನಿಮಾ ನೋಡಲು ಹೋಗಿದ್ದವರ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿ ಸಿಕ್ಕಿಬಿದ್ದ ಚೋರ

ಬೆಂಗಳೂರು,ಅ.12- ಕನ್ನಡ ಚಲನಚಿತ್ರ ಪ್ರೇಮದ ಊರಲಿ ಎಂಬ ಸಿನಿಮಾ ನೋಡಲು ಹೋಗಿದ್ದ ವೇಳೆ ಮನೆಗೆ ನುಗ್ಗಿದ ಖದೀಮನೊಬ್ಬ ಇನ್ನೇನು ದೋಚಿ ಪರಾರಿಯಾಗಬೇಕು ಎನ್ನುವಷ್ಟರಲ್ಲಿ ಮನೆ ಮಾಲೀಕನ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ.ಕೇರಳ ಮೂಲದ ಅಜಯ್‌ (27) ಬಂಧಿತ ಮನೆಗಳ್ಳ. ಊಬರ್‌ ಚಾಲಕ ವೃತ್ತಿ ಮಾಡು ತ್ತಿದ್ದ ಈತ ಯಲಹಂಕದ ಅಪಾರ್ಟ್‌ಮೆಂಟ್‌ನಲ್ಲಿ ಸ್ನೇಹಿತರೊಂದಿಗೆ ವಾಸವಾಗಿದ್ದಾನೆ.

ಈತನ ಮೇಲೆ ಕೇರಳದಲ್ಲಿ ಎರಡು ಪ್ರಕರಣಗಳು ದಾಖಲಾಗಿರುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.ವಿಜಯಪುರ ಪೊಲೀಸ್‌‍ ಠಾಣೆ ವ್ಯಾಪ್ತಿಯ ದೇವನಹಳ್ಳಿ ತಾಲ್ಲೂಕಿನ ಗೊಬ್ಬರಗುಂಟೆ ಗ್ರಾಮದ ನಿವಾಸಿ ವೇಣುಕುಮಾರ್‌ ಕುಟುಂಬದವರು ಮೊನ್ನೆ ಮಧ್ಯಾಹ್ನ ಪ್ರೇಮದ ಊರಲಿ ಚಲನಚಿತ್ರ ವೀಕ್ಷಿಸಲು ಹೋಗಿ ದ್ದಾರೆ.

ಆ ಸಂದರ್ಭದಲ್ಲಿ ಇವರ ಮನೆಗೆ ಕಳ್ಳ ನುಗ್ಗಿದ್ದಾನೆ. ವೇಣುಕುಮಾರ್‌ ಅವರ ಮನೆಯಲ್ಲಿ ಸಿಸಿ ಕ್ಯಾಮೆರಾ ಇದೆ. ಹಾಗಾಗಿ ಅವರು ಹೊರಗೆ ಹೋದಾಗ ಮೊಬೈಲ್‌ನಲ್ಲಿ ಸಿಸಿ ಕ್ಯಾಮರಾದ ದೃಶ್ಯಾವಳಿಗಳನ್ನು ನೋಡುತ್ತಿದ್ದರು. ಮೊನ್ನೆ ಸಿನಿಮಾ ನೋಡಲು ಹೋದಾಗ ಅವರ ಮನೆಗೆ ಕಳ್ಳ ನುಗ್ಗಿರುವುದು ಗೊತ್ತಾಗಿದೆ. ತಕ್ಷಣ ಅವರು ವಾಪಸ್‌‍ ಮನೆಗೆ ಬಂದಿದ್ದಾರೆ. ಕಳ್ಳ ಒಳಗಿರುವುದು ತಿಳಿದು ಹೊರಗಿನಿಂದ ಚಿಲಕ ಹಾಕಿದ್ದಾರೆ.

ಅಷ್ಟೊತ್ತಿಗಾಗಲೇ ಕಳ್ಳ 130 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿದ್ದನು. ಹೊರಗೆ ಯಾರೋ ಮನೆ ಬಳಿ ಬಂದಿರುವುದು ಗೊತ್ತಾಗಿ ಮಂಚದ ಕೆಳಗೆ ಅವಿತುಕೊಂಡಿದ್ದಾನೆ.
ವೇಣುಕುಮಾರ್‌ ಅವರು ನಿಧಾನವಾಗಿ ಒಳಗೆ ಹೋಗಿ ಮಂಚದ ಕೆಳಗಿದ್ದ ಕಳ್ಳನನ್ನು ಹಿಡಿದು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES
spot_img

Latest News