ಬೆಂಗಳೂರು, ಆ.5- ಬೈಕ್ ಟ್ಯಾಕ್ಸಿ ಸೇವೆಗಳ ವಿರುದ್ಧ ಸಾರಿಗೆ ಇಲಾಖೆ ಇಂದು ಬೆಂಗಳೂರಿನಾದ್ಯಂತ ವ್ಯಾಪಕ ಕಾರ್ಯಾಚರಣೆ ನಡೆಸಿ, ನೂರಾರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದೆ. ಆಟೋ ಚಾಲಕರ ಸಂಘಟನೆಗಳು ನೀಡಿದ್ದ ದೂರು ಹಾಗೂ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಅನಧಿಕೃತವಾಗಿ ಬೈಕ್ ಟ್ಯಾಕ್ಸಿ ಸೇವೆಗಳು ನಡೆಯುತ್ತಿರುವುದರಿಂದ ಆಟೋ ಚಾಲಕರ ಜೀವನೋಪಾಯಕ್ಕೆ ಹೊಡೆತ ಬಿದ್ದಿದೆ ಎಂಬ ಆರೋಪವನ್ನು ಆಟೋ ಚಾಲಕರ ಸಂಘಟನೆಗಳು ಹಲವು ವರ್ಷಗಳಿಂದ ಮಾಡುತ್ತಿವೆ. ಇತ್ತೀಚೆಗೆ ಈ ಸಂಬಂಧ ಸಾರಿಗೆ ಇಲಾಖೆಯ ಕಚೇರಿಗಳಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದ ಸಂಘಟನೆಗಳೊಂದಿಗೆ ನಡೆದ ಮಾತುಕತೆಯಲ್ಲಿ ಅಧಿಕಾರಿಗಳು ಬೈಕ್ ಟ್ಯಾಕ್ಸಿ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಲಾಗಿತ್ತು.
ಅದರಂತೆ ಇಂದು ಬೆಳಗ್ಗೆ 7.30ರಿಂದಲೇ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಆಟೋ ಚಾಲಕರು ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿದರು. ಹಲವು ಸ್ಥಳಗಳಲ್ಲಿ ಆಟೋ ಚಾಲಕರು ಗುಂಪುಗಳಾಗಿ ನಿಂತು ಸಂಶಯಾಸ್ಪದ ದ್ವಿಚಕ್ರ ವಾಹನಗಳನ್ನು ತಡೆದು ಹಿಂಬದಿ ಸವಾರರನ್ನು ಪ್ರಶ್ನಿಸಿದ ಪರಿಣಾಮ ಕೆಲವೆಡೆ ಮಾತಿನ ಚಕಮಕಿ ಮತ್ತು ವಾಗ್ವಾದವೂ ನಡೆಯಿತು.
ಆಟೋ ಚಾಲಕರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ಮುಂದಿನ ಎರಡು ತಿಂಗಳವರೆಗೆ ಬೈಕ್ ಟ್ಯಾಕ್ಸಿಗಳ ವಿರುದ್ಧ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಸಾರಿಗೆ ಇಲಾಖೆ ಭರವಸೆ ನೀಡಿದೆ ಎಂದು ತಿಳಿಸಿದರು.
2016ರಿಂದಲೇ ಬೈಕ್ಟ್ಯಾಕ್ಸಿ ಸೇವೆಗಳ ವಿರುದ್ಧ ಹೋರಾಟ ನಡೆಸಲಾಗುತ್ತಿದೆ. ಆರಂಭದಲ್ಲಿ ಸರ್ಕಾರ ಎಲೆಕ್ಟ್ರಿಕ್ ಬೈಕ್ಗಳನ್ನು ಮಾತ್ರ ಟ್ಯಾಕ್ಸಿ ಸೇವೆಗೆ ಬಳಸಲು ಅನುಮತಿ ನೀಡಿತ್ತು. ಆದರೆ ನಂತರ ಆ ಅನುಮತಿಯನ್ನು ರದ್ದುಪಡಿಸಲಾಗಿದೆ. ಹೈಕೋರ್ಟ್ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಿಲ್ಲ. ಈ ಕುರಿತು ಸುಪ್ರೀಂ ಕೋರ್ಟ್ನಲ್ಲಿ ಮೇಲನವಿ ವಿಚಾರಣೆ ನಡೆಯುತ್ತಿರುವುದನ್ನು ನೆಪ ಮಾಡಿಕೊಂಡು ಕೆಲವು ಅಗ್ರಿಗೇಟರ್ ಸಂಸ್ಥೆಗಳು ಮತ್ತೆ ಬೈಕ್ ಟ್ಯಾಕ್ಸಿ ಸೇವೆ ಆರಂಭಿಸಿವೆ. ಇದು ಸಂಪೂರ್ಣ ಕಾನೂನುಬಾಹಿರ ಎಂದು ನಾರಾಯಣಸ್ವಾಮಿ ಆರೋಪಿಸಿದರು.
ಗ್ರಾಹಕರು ಕೇವಲ 30-40 ಉಳಿಸುವ ಉದ್ದೇಶದಿಂದ ತಮ ಸುರಕ್ಷತೆಯನ್ನು ಕಡೆಗಣಿಸಬಾರದು. ಇತ್ತೀಚೆಗೆ ಬೈಕ್ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಅಪಘಾತಕ್ಕೀಡಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ವೆಚ್ಚವಾಗಿದ್ದರೂ ಯಾವುದೇ ಅಗ್ರಿಗೇಟರ್ ಸಂಸ್ಥೆ ಅಥವಾ ಸರ್ಕಾರ ನೆರವಿಗೆ ಬಂದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸಾರಿಗೆ ಇಲಾಖೆ ಅಧಿಕಾರಿಗಳು ಮಾತನಾಡಿ, ಖಾಸಗಿ ಬಳಕೆಗೆ ನೋಂದಾಯಿಸಲಾದ ದ್ವಿಚಕ್ರ ವಾಹನಗಳನ್ನು ಬಾಡಿಗೆ ಸೇವೆಗೆ ಬಳಸುವುದು ಮೋಟಾರು ವಾಹನ ಕಾಯ್ದೆಯ ಉಲ್ಲಂಘನೆಯಾಗಿದೆ. ಅಂತಹ ವಾಹನಗಳನ್ನು ವಶಪಡಿಸಿಕೊಳ್ಳಲಾಗುವುದು. ನಿಯಮ ಉಲ್ಲಂಘಿಸಿದವರ ವಿರುದ್ಧ 10 ಸಾವಿರದಿಂದ 15 ಸಾವಿರದವರೆಗೆ ದಂಡ ವಿಧಿಸುವುದರ ಜೊತೆಗೆ ವಾಹನದ ನೋಂದಣಿ ಪ್ರಮಾಣಪತ್ರ (ಆರ್ಸಿ) ಮತ್ತು ಚಾಲನಾ ಪರವಾನಗಿಯ (ಡಿಎಲ್) ರದ್ದು ಪಡಿಸಲಾಗುವುದು ಎಂದು ಎಚ್ಚರಿಸಿದರು.
ಇನ್ನೊಂದೆಡೆ, ಬೈಕ್ ಟ್ಯಾಕ್ಸಿ ಚಾಲಕರು ಸಾರಿಗೆ ಇಲಾಖೆಯ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೇವೆ ಕಾನೂನುಬಾಹಿರ ಎಂಬ ಮಾಹಿತಿ ನಮಗೆ ಇರಲಿಲ್ಲ. ಅಗ್ರಿಗೇಟರ್ ಸಂಸ್ಥೆಗಳು ನ್ಯಾಯಾಲಯದಲ್ಲಿ ತಮ ಪರ ಆದೇಶವಿದೆ ಎಂದು ಹೇಳಿ ಸೇವೆ ನಡೆಸಲು ಒತ್ತಾಯಿಸುತ್ತಿವೆ. ಈಗ ಸಾರಿಗೆ ಇಲಾಖೆ ಪ್ರಕರಣ ದಾಖಲಿಸುತ್ತಿದೆ.
ಆಟೋ ಚಾಲಕರು ಹಾಗೂ ಅಗ್ರಿಗೇಟರ್ ಸಂಸ್ಥೆಗಳ ನಡುವಿನ ಸಂಘರ್ಷದಲ್ಲಿ ನಾವು ಸಿಲುಕಿ ಸಂಕಷ್ಟ ಅನುಭವಿಸುತ್ತಿದ್ದೇವೆ. ಸಂಕಷ್ಟದ ಸಂದರ್ಭದಲ್ಲಿ ಅಗ್ರಿಗೇಟರ್ ಸಂಸ್ಥೆಗಳು ನಮ ನೆರವಿಗೆ ಬರುತ್ತಿಲ್ಲ ಎಂದು ಬೈಕ್ ಟ್ಯಾಕ್ಸಿ ಚಾಲಕರು ಅಸಮಾಧಾನ ವ್ಯಕ್ತಪಡಿಸಿದರು.
