ಬೆಂಗಳೂರು,ಮಾ.7-ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವಾ ಪರೀಕ್ಷೆಯ ಈ ಬಾರಿ ಕರ್ನಾಟಕದಿಂದ ಒಟ್ಟು 22 ಮಂದಿ ಆಯ್ಕೆಯಾಗಿದ್ದಾರೆ. ಈ ಪೈಕಿ ಯಾದಗಿರಿ ಜಿಲ್ಲೆಯ ನಾಲ್ವರು ಅಪ್ರತಿಮ ಸಾಧನೆ ಮಾಡಿದ್ದಾರೆ.
ಸಂದೀಪ್ ಬಾಡದ್, ವೈದ್ಯೆ ಡಾ. ನಿವೇದಿತಾ ಭಾವಿಮನಿ, ಬಸವರಾಜ ಜವಳಿ, ಚಂದ್ರಶೇಖರ ಎಂಬುವರು ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸ್ ಆಗಿ ಜಿಲ್ಲೆಯ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಯಾದಗಿರಿಯ ಕಿರಾಣಿ ಅಂಗಡಿ ನಡೆಸುತ್ತಿರುವ ಬಸವರಾಜ್ ಬಾಡದ್ ಅವರ ದ್ವಿತೀಯ ಪುತ್ರ ಸಂದೀಪ್ ಬಾಡದ್ ಅಖಿಲ ಭಾರತ ಮಟ್ಟದಲ್ಲಿ 82ನೇ ರ್ಯಾಂಕ್ ಪಡೆದಿದ್ದಾರೆ.
ನ್ಯೂ ಕನ್ನಡ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿದ್ದ ಸಂದೀಪ್, ಶಹಾಪುರದ ಕೇಂದ್ರೀಯ ಜವಾಹರ್ ನವೋದಯ ವಿದ್ಯಾಲಯದಲ್ಲಿ ದ್ವಿತೀಯ ಪಿಯುಸಿವರೆಗೂ ಅಧ್ಯಯನ ಮಾಡಿ ಬಳಿಕ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಪದವಿ ಪೂರೈಸಿ, ಸಾಫ್ಟ್ ವೇರ್ ಕಂಪನಿಯಲ್ಲಿ 2 ವರ್ಷ ಕೆಲಸ ಮಾಡಿದ್ದರು. ನಂತರ, ದೆಹಲಿಯಲ್ಲಿ ಐಎಎಸ್ ಪರೀಕ್ಷೆಯ ತರಬೇತಿ ಪಡೆದಿದ್ದರು.
ವೈದ್ಯೆ ಡಾ. ನಿವೇದಿತಾ ಭಾವಿಮನಿ ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ 469ನೇ ರ್ಯಾಂಕ್ ಪಡೆದಿದ್ದಾರೆ. ನಿವೃತ್ತ ಸರ್ಕಾರಿ ನೌಕರ ಚಂದಪ್ಪ ಬಾವಿಮನಿ ಹಾಗೂ ವರ್ಕನಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮಿ ಬಾವಿಮನಿ ದಂಪತಿ ಪುತ್ರಿಯಾಗಿರುವ ನಿವೇದಿತಾ ಅವರು, ಯಾದಗಿರಿ ನಗರದ ದೋಕಾ ಜೈನ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದರು. ಬಳಿಕ ಕಲಬುರಗಿಯ ಎಸ್‌ಬಿಆರ್ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ದ್ವಿತೀಯ ಪಿಯುಸಿ (ವಿಜ್ಞಾನ), ಅಧ್ಯಯನ ಮಾಡಿ ಬಳಿಕ ಬೆಂಗಳೂರಿನ ಕೆಂಪೇಗೌಡ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್‌್ಸನಲ್ಲಿ ಎಂ.ಬಿ.ಬಿ.ಎಸ್ ಪದವಿ ಪಡೆದಿದ್ದರು.
ವೈದ್ಯೆಯಾಗಿದ್ದ ನಿವೇದಿತಾ ಅವರು ದೇಶ ಸೇವೆ ಕನಸು ಕಂಡ ಅವರು, 2ನೇ ಪ್ರಯತ್ನದಲ್ಲಿ ನಾಗರಿಕ ಸೇವಾ ಪರೀಕ್ಷೆಯಲ್ಲಿ 469ನೇ ರ್ಯಾಂಕ್ ಪಡೆದು ಉತ್ತೀರ್ಣರಾಗಿದ್ದಾರೆ.
ಇನ್ನು, ಶಹಾಪುರದ ಬಸವರಾಜ ಜವಳಿ 664ನೇ ರ್ಯಾಂಕ್ ಪಡೆದಿದ್ದಾರೆ. ಶಹಾಪುರ ಪಟ್ಟಣದ ಉದ್ಯಮಿ ವಿಶ್ವನಾಥ್-ಗಿರಿಜಾ ಜವಳಿ ದಂಪತಿ ಪುತ್ರ ಬಸವರಾಜ ಅವರು, 1 ರಿಂದ 7ನೇ ತರಗತಿಯವರೆಗೆ ಕನ್ನಡದಲ್ಲಿ ವ್ಯಾಸಂಗ ಮಾಡಿದ್ದರು, ನಂತರ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ, ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದು, ಇದೀಗ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಚೆನ್ನೂರು ಗ್ರಾಮದ ಕೃಷಿಕ ದಂಪತಿ ಪುತ್ರ ಚಂದ್ರಶೇಖರ 880ನೇ ರ್ಯಾಂಕ್ ಪಡೆದಿದ್ದಾರೆ. ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಕಂಪ್ಯೂಟರ್ ವಿಜ್ಞಾನದಲ್ಲಿ ಇಂಜಿನಿಯರಿಂಗ್ ಪದವಿ ಪಡೆದ ಚಂದ್ರಶೇಖರ್ ಮೂರು ಬಾರಿ ಸಂದರ್ಶನಕ್ಕೆ ಆಯ್ಕೆಯಾಗಿದ್ದರು ಈಗ 4ನೇ ಬಾರಿಗೆ 880ನೇ ರ್ಯಾಂಕ್ ಪಡೆದಿದ್ದಾರೆ
