Homeರಾಜ್ಯಡಿಕೆಶಿ ಸಿಎಂ ಆದ ಬಳಿಕವಾದರೂ ಬೆಂಗಳೂರಿನ ಸಮಸ್ಯೆಗಳಿಗೆ ಸಿಗುತ್ತಾ ಪರಿಹಾರ..?

ಡಿಕೆಶಿ ಸಿಎಂ ಆದ ಬಳಿಕವಾದರೂ ಬೆಂಗಳೂರಿನ ಸಮಸ್ಯೆಗಳಿಗೆ ಸಿಗುತ್ತಾ ಪರಿಹಾರ..?

Will Bangalore's problems be solved after DK Shivkumar becomes CM?

ಬೆಂಗಳೂರು, ಜೂ.3- ಬೆಂಗಳೂರು ಉಸ್ತುವಾರಿ ಸಚಿವರಾಗಿದ್ದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ನಗರದ ಅಭಿವೃದ್ಧಿ ವೇಗಗೊಳ್ಳಬಹುದು ಎಂಬ ಆಶಾಭಾವ ವ್ಯಕ್ತವಾಗಿದೆ.

ಬೆಂಗಳೂರು ಅಭಿವೃದ್ಧಿ ಸಚಿವರಾಗಿದ್ದ ಅವಧಿಯಲ್ಲಿ ಡಿ.ಕೆ. ಶಿವಕುಮಾರ್‌ ಅವರು ಬ್ರಾಂಡ್‌ ಬೆಂಗಳೂರು ಹಾಗೂ ಗ್ರೇಟರ್‌ ಬೆಂಗಳೂರು ಪರಿಕಲ್ಪನೆಗೆ ಹೆಚ್ಚಿನ ಒತ್ತು ನೀಡಿದ್ದರು. ನಗರವನ್ನು ಜಾಗತಿಕ ಮಟ್ಟದ ನಗರವನ್ನಾಗಿ ರೂಪಿಸುವ ಗುರಿಯೊಂದಿಗೆ ಹಲವು ಬೃಹತ್‌ ಮೂಲಸೌಕರ್ಯ ಯೋಜನೆಗಳನ್ನು ಘೋಷಿಸಿದ್ದರು.

ಇದೀಗ ಅವರೇ ರಾಜ್ಯದ ಮುಖ್ಯಮಂತ್ರಿಯಾಗುತ್ತಿರುವುದರಿಂದ ಆ ಯೋಜನೆಗಳಿಗೆ ಮತ್ತಷ್ಟು ವೇಗ ಸಿಗುವ ನಿರೀಕ್ಷೆ ವ್ಯಕ್ತವಾಗುತ್ತಿದೆ.ಕಳೆದ ಮೂರು ವರ್ಷಗಳಲ್ಲಿ ನಗರದ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಮಹತ್ವಾಕಾಂಕ್ಷಿ ಯೋಜನೆಗಳ ರೂಪುರೇಷೆಗಳನ್ನು ಸಿದ್ಧಪಡಿಸುವಲ್ಲಿ ಶಿವಕುಮಾರ್‌ ಪ್ರಮುಖ ಪಾತ್ರವಹಿಸಿದ್ದರು. ಸರ್ಕಾರದ ಆರ್ಥಿಕ ಮಿತಿಗಳ ನಡುವೆಯೂ ಮೂಲಸೌಕರ್ಯ ಕಾಮಗಾರಿಗಳಿಗೆ ಹಣಕಾಸು ಒದಗಿಸುವುದು, ನೀತಿ ಬದಲಾವಣೆಗಳನ್ನು ಜಾರಿಗೆ ತರುವುದು ಹಾಗೂ ಆಡಳಿತಾತ್ಮಕವಾಗಿ ಕಠಿಣ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಅವರು ಮುಂಚೂಣಿಯಲ್ಲಿದ್ದರು.

ಪ್ರಮುಖ ಯೋಜನೆಗಳಿಗೆ ವೇಗ?ಶಿವಕುಮಾರ್‌ ಅವರ ಕನಸಿನ ಯೋಜನೆಗಳಲ್ಲಿ ಉತ್ತರದಕ್ಷಿಣ ಹಾಗೂ ಪೂರ್ವಪಶ್ಚಿಮ ಸುರಂಗ ರಸ್ತೆ ಯೋಜನೆಗಳು, 126 ಕಿ.ಮೀ ಎತ್ತರದ ಕಾರಿಡಾರ್‌ಗಳು, ಹೆಬ್ಬಾಳ ಜಂಕ್ಷನ್‌ ಸುರಂಗ ಮಾರ್ಗ, ಪೆರಿಫೆರಲ್‌ ರಿಂಗ್‌ ರಸ್ತೆ , ಬಿಡದಿಯ ಸಮಗ್ರ ಟೌನ್‌ಶಿಪ್‌‍ ಯೋಜನೆ ಹಾಗೂ ಮಳೆನೀರಿನ ಚರಂಡಿಗಳ ಬಫರ್‌ ವಲಯಗಳಲ್ಲಿ ರಸ್ತೆ ನಿರ್ಮಾಣ ಯೋಜನೆಗಳು ಸೇರಿವೆ.

ಇದರ ಜೊತೆಗೆ, ದಕ್ಷಿಣ ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ಸ್ಥಾಪನೆ ಕುರಿತೂ ಅವರು ನಿರಂತರವಾಗಿ ಧ್ವನಿ ಎತ್ತುತ್ತಿದ್ದಾರೆ. ಮುಖ್ಯಮಂತ್ರಿಯಾದರೆ ಇಂತಹ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ಮತ್ತು ನಿರ್ಧಾರ ಪ್ರಕ್ರಿಯೆ ಇನ್ನಷ್ಟು ವೇಗವಾಗಿ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಆಡಳಿತಾತ್ಮಕ ಸುಧಾರಣೆಗಳೂ ನಡೆದಿವೆ, ಅವರ ಅವಧಿಯಲ್ಲಿ ಕಟ್ಟಡ ವಿಚಲನ ಮಿತಿಯನ್ನು 5ರಿಂದ 15 ಶೇಕಡಕ್ಕೆ ಹೆಚ್ಚಿಸುವುದು, ಪ್ರೀಮಿಯಂ ಎಫ್‌ಎಆರ್‌ ಜಾರಿ, ಟಿಡಿಆರ್‌ ವ್ಯವಸ್ಥೆಯನ್ನು ಹೆಚ್ಚು ಆಕರ್ಷಕಗೊಳಿಸುವುದು ಹಾಗೂ ಜಾಹೀರಾತು ನೀತಿಯಲ್ಲಿ ಬದಲಾವಣೆ ತರಲು ಕಾನೂನು ತಿದ್ದುಪಡಿಗಳು ನಡೆದವು.

ಅದೇ ರೀತಿ, ಬಿಬಿಎಂಪಿಯನ್ನು ಐದು ನಗರ ಪಾಲಿಕೆಗಳಾಗಿ ಪುನರ್‌ರಚಿಸಿ ಗ್ರೇಟರ್‌ ಬೆಂಗಳೂರು ಆಡಳಿತ ವ್ಯವಸ್ಥೆಗೆ ಅಡಿಪಾಯ ಹಾಕಿದ ಹೆಗ್ಗಳಿಕೆಯೂ ಅವರಿಗಿದೆ.ಬೃಹತ್‌ ಯೋಜನೆಗಳ ಜೊತೆಗೆ ಮೂಲಭೂತ ಸಮಸ್ಯೆಗಳಿಗೂ ಪರಿಹಾರ ಬೇಕುಆದರೆ ನಗರದ ಜನರ ಮುಂದೆ ಇರುವ ಪ್ರಶ್ನೆ ಬೇರೆ. ಸುರಂಗ ರಸ್ತೆ, ಎಲಿವೇಟೆಡ್‌ ಕಾರಿಡಾರ್‌ಗಳಂತಹ ಬೃಹತ್‌ ಯೋಜನೆಗಳಿಗಿಂತಲೂ, ದೈನಂದಿನ ಬದುಕಿಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರವೇ ಜನರ ಮೊದಲ ಆದ್ಯತೆಯಾಗಿದೆ.

ಪ್ರತಿ ಮಳೆಗಾಲದಲ್ಲೂ ಜಲಾವೃತವಾಗುವ ಪ್ರದೇಶಗಳು, ಮಳೆನೀರಿನ ಚರಂಡಿಗಳಲ್ಲಿ ಹರಿಯುತ್ತಿರುವ ಕೊಳಚೆ ನೀರು, ಗುಂಡಿಮಯ ರಸ್ತೆಗಳು, ಹದಗೆಟ್ಟ ಪಾದಚಾರಿ ಮಾರ್ಗಗಳು, ಕಸದ ವಿಲೇವಾರಿ ಸಮಸ್ಯೆ, ಕೆರೆಗಳ ಸಂರಕ್ಷಣೆ, ಕುಡಿಯುವ ನೀರಿನ ಕೊರತೆ ಹಾಗೂ ವಿಳಂಬವಾಗುತ್ತಿರುವ ಮೆಟ್ರೋ ಕಾಮಗಾರಿಗಳು ಇನ್ನೂ ನಗರವನ್ನು ಕಾಡುತ್ತಿವೆ.

ನಗರದ ಹಲವು ಭಾಗಗಳಲ್ಲಿ ರಸ್ತೆ ಡಾಂಬರೀಕರಣ, ಸಮರ್ಪಕ ಫುಟ್‌ಪಾತ್‌‍ ನಿರ್ಮಾಣ, ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ಪರಿಸರ ಸಂರಕ್ಷಣೆ ಕುರಿತಂತೆ ನಾಗರಿಕರ ನಿರೀಕ್ಷೆಗಳು ಹೆಚ್ಚಿವೆ.ತಜ್ಞರ ಅಭಿಪ್ರಾಯವೇನು?ಮಾಜಿ ಕಾರ್ಪೊರೇಟರ್‌ ಅಬ್ದುಲ್‌ ವಾಜಿದ್‌ ಅವರ ಪ್ರಕಾರ, ಬೆಂಗಳೂರಿಗೆ ದೀರ್ಘಾವಧಿಯ ಸಂಚಾರ ಪರಿಹಾರಕ್ಕಾಗಿ ದೊಡ್ಡ ಮೂಲಸೌಕರ್ಯ ಯೋಜನೆಗಳು ಅಗತ್ಯ.

ಆರಂಭದಲ್ಲಿ ವಿರೋಧ ಎದುರಾದರೂ, ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ಜಾರಿಗೊಳಿಸಬೇಕು ಎನ್ನುವುದು ಅವರ ಅಭಿಪ್ರಾಯ.ಇನ್ನೊಂದೆಡೆ, ತಜ್ಞರು ಹೇಳುವುದು ಯಾವುದೇ ದೊಡ್ಡ ಯೋಜನೆ ಜಾರಿಗೆ ಮುನ್ನ ವೃತ್ತಿಪರ ಹಾಗೂ ವೈಜ್ಞಾನಿಕ ಪರಿಶೀಲನೆ ನಡೆಯಬೇಕು ಎಂದು ಸಲಹೆ ನೀಡಿದ್ದಾರೆ. ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರದ ಮೂಲಕ ಎಲ್ಲ ಚಲನಶೀಲತೆ ಯೋಜನೆಗಳನ್ನು ಪರಿಶೀಲಿಸಿದರೆ ಉತ್ತಮ ನಿರ್ಧಾರಗಳು ಸಾಧ್ಯವಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನಗರದ ಜನರ ಪ್ರಶ್ನೆ:ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿಯಾದರೆ ಬ್ರಾಂಡ್‌ ಬೆಂಗಳೂರು ಕನಸಿಗೆ ಹೊಸ ವೇಗ ಸಿಗಬಹುದು. ಬೃಹತ್‌ ಯೋಜನೆಗಳಿಗೆ ಚಾಲನೆ ದೊರೆಯಬಹುದು. ಆದರೆ ಅದೇ ಸಮಯದಲ್ಲಿ ನಗರದ ಜನರನ್ನು ಪ್ರತಿದಿನ ಕಾಡುತ್ತಿರುವ ಕಸ, ರಸ್ತೆ ಗುಂಡಿ, ಜಲಾವೃತ, ಕುಡಿಯುವ ನೀರು, ಫುಟ್‌ಪಾತ್‌‍ ಹಾಗೂ ಕೆರೆಗಳ ಅಭಿವೃದ್ಧಿಯಂತಹ ಮೂಲಭೂತ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ಸಿಗುತ್ತದೆಯೇ ಎಂಬುದು ಈಗ ಬೆಂಗಳೂರಿಗರನ್ನು ಕಾಡುತ್ತಿರುವ ದೊಡ್ಡ ಪ್ರಶ್ನೆಯಾಗಿದೆ.

RELATED ARTICLES

Latest News