ಬೆಂಗಳೂರು,ಮೇ 15- ಕೇರಳದಲ್ಲಿ ಮುಖ್ಯಮಂತ್ರಿ ಪಟ್ಟಕ್ಕೆ ವಿ.ಡಿ.ಸತೀಶನ್ ಅವರಿಗೆ ಕ್ಲಾರಿಟಿ ನೀಡಿದ ಬಳಿಕ ಕಾಂಗ್ರೆಸ್ ಹೈಕಮಾಂಡ್ ಈಗ ಕರ್ನಾಟಕದತ್ತ ತನ್ನ ಗಮನ ಹರಿಸಿದೆ. ಸಿಎಂ-ಡಿಸಿಎಂ ಪಟ್ಟದ ಫೈಟ್ಗೆ ಶೀಘ್ರದಲ್ಲೇ ಕ್ಲಾರಿಟಿ ಸಿಗುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಸಚಿವ ಸಂಪುಟ ಪುನರ್ರಚನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಪಟ್ಟು ಹಿಡಿದಿದ್ದಾರೆ. ಸಂಪುಟ ರಿ ಶಫಲ್ ಮಾಡಿ ತಮ ಸ್ಥಾನವನ್ನು ಸುರಕ್ಷಿತಗೊಳಿಸಿಕೊಳ್ಳುವುದು ಸಿದ್ದರಾಮಯ್ಯ ಅವರ ತಂತ್ರವಾಗಿದೆ ಎಂದು ಹೇಳಲಾಗುತ್ತಿದೆ. ಇತ್ತ ಡಿ.ಕೆ.ಶಿವಕುಮಾರ್ ಬಣದ ಶಾಸಕರು ಒಂದು ಅವಕಾಶ ಡಿ.ಕೆ.ಶಿ ಅವರಿಗೆ ಕೊಡಿ ಎಂದು ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದಾರೆ.
ಡಿ.ಕೆ.ಶಿವಕುಮಾರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಹೈಕಮಾಂಡ್ ಅವರಿಗೆ ದೊಡ್ಡ ಗಿಫ್್ಟ ನೀಡುವ ಸಾಧ್ಯತೆಯನ್ನು ಕೆಲವು ನಾಯಕರು ಚರ್ಚಿಸುತ್ತಿದ್ದಾರೆ. ಕೇರಳದಲ್ಲಿ ನಿರ್ಧಾರ ತೆಗೆದುಕೊಂಡಂತೆ ಕರ್ನಾಟಕದಲ್ಲೂ ಸ್ಪಷ್ಟತೆ ಬೇಕು ಎಂದು ಡಿಕೆಶಿ ಬಣದ ಶಾಸಕರು ಆಗ್ರಹಿಸುತ್ತಿದ್ದಾರೆ.
ದೆಹಲಿಯಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ ಮತ್ತು ಕೆ.ಸಿ. ವೇಣುಗೋಪಾಲ್ ಅವರು ರಾಜ್ಯದ ಪರಿಸ್ಥಿತಿಯನ್ನು ಗಮನಿಸುತ್ತಿದ್ದಾರೆ. ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್ ನಡುವಿನ ಸಮೀಕರಣವನ್ನು ಸಮತೋಲನಗೊಳಿಸುವುದು ಹೈಕಮಾಂಡ್ ಮುಂದಿನ ದೊಡ್ಡ ಸವಾಲಾಗಿದೆ.
ಕೆಲವು ಶಾಸಕರು ಸಂಪುಟ ಪುನರ್ರಚನೆಯಲ್ಲಿ ತಮಗೆ ಸ್ಥಾನ ಬೇಕು ಎಂದು ಒತ್ತಡ ಹೇರಿದ್ದಾರೆ. ಇದರಿಂದಾಗಿ ರಾಜ್ಯ ರಾಜಕೀಯ ತುಂಬಾ ಕಾವು ಪಡೆದಿದೆ. ಡಿ.ಕೆ.ಶಿವಕುಮಾರ್ ಅವರ ಹುಟ್ಟುಹಬ್ಬದ ನಂತರ ಹೈಕಮಾಂಡ್ ರಾಜ್ಯ ನಾಯಕರನ್ನು ದೆಹಲಿಗೆ ಕರೆಸಿ ಚರ್ಚೆ ನಡೆಸುವ ಸಾಧ್ಯತೆ ಇದೆ.
ಈಗ ಸದ್ಯ ಡಿ.ಕೆ.ಶಿವಕುಮಾರ್ ತಮ 64ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುವ ಖುಷಿಯಲ್ಲಿದ್ದಾರೆ. ಈ ಪಟ್ಟದ ಫೈಟ್ ಸಮಾಪ್ತಿಯಾಗಿ ಸಿಎಂ ಗದ್ದುಗೆ ಒಲಿದು ಬಂದರೆ ಇನ್ನಷ್ಟು ಖುಷಿಯಲ್ಲಿ ಮುಳುಗಿ ಏಳಲಿದ್ದಾರೆ. ಹೈಕಮಾಂಡ್ ಕಡೆಯಿಂದ ಈ ಪಟ್ಟದ ಫೈಟ್ ಗೊಂದಲ ನಿವಾರಣೆಯಾದರೆ ಡಿಕೆಶಿ ಮತ್ತು ಸಿದ್ದರಾಮಯ್ಯ ಇಬ್ಬರೂ ಸಹ ನಿರಾಳರಾಗುವ ಸಾಧ್ಯತೆ ಕಂಡುಬರುತ್ತದೆ. ಹಾಗೂ ಬಹಳ ದಿನಗಳಿಂದ ರಾಜ್ಯದ ಜನತೆ ಕಾದು ನೋಡುತ್ತಿದ್ದ ಪಟ್ಟ ಯಾರಿಗೆ ಎಂಬ ಪ್ರಶ್ನೆಗೂ ತೆರೆ ಬೀಳಲಿದೆ.
