Homeರಾಜ್ಯಅಕ್ಟೋಬರ್‌ ವೇಳೆಗೆ ತುಮಕೂರಿಗೆ ಎತ್ತಿನಹೊಳೆ ನೀರು ಹರಿಸುವ ಗುರಿ : ಸಚಿವ ರಾಮಲಿಂಗಾರೆಡ್ಡಿ

ಅಕ್ಟೋಬರ್‌ ವೇಳೆಗೆ ತುಮಕೂರಿಗೆ ಎತ್ತಿನಹೊಳೆ ನೀರು ಹರಿಸುವ ಗುರಿ : ಸಚಿವ ರಾಮಲಿಂಗಾರೆಡ್ಡಿ

Aim to deliver Yettinahole water to Tumkur by October: Minister Ramalinga Reddy

ತುಮಕೂರು,ಜು.2- ಬರುವ ಅಕ್ಟೋಬರ್‌ ವೇಳೆಗೆ ಎತ್ತಿನಹೊಳೆ ಯೋಜನೆಯ ನೀರು ತುಮಕೂರಿನವರೆಗೆ ಹರಿಸುವ ಗುರಿ ಹೊಂದಿದ್ದು, ಉಳಿದಿರುವ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದು ಜಲಸಂಪನೂಲ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಗುಬ್ಬಿ ತಾಲೂಕಿನ ಪ್ಯಾಕೇಜ್‌ 11ರ ವ್ಯಾಪ್ತಿಯ ಕಂಚಿಗಾನಹಳ್ಳಿ ಹಾಗೂ ಮಾರಶೆಟ್ಟಿಹಳ್ಳಿ ಅರಣ್ಯ ಪ್ರದೇಶದಲ್ಲಿ ಬುಧವಾರ ಎತ್ತಿನಹೊಳೆ ಯೋಜನೆ ಕಾಮಗಾರಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಯೋಜನೆಯ ಒಟ್ಟು 252 ಕಿ.ಮೀ. ಕಾಮಗಾರಿಯಲ್ಲಿ ಈಗಾಗಲೇ 220 ಕಿ.ಮೀ. ಪೂರ್ಣಗೊಂಡಿದ್ದು, 23 ಕಿ.ಮೀ. ಕಾಮಗಾರಿ ಪ್ರಗತಿಯಲ್ಲಿದೆ. ಉಳಿದ 9 ಕಿ.ಮೀ. ಕಾಮಗಾರಿಯಲ್ಲಿ 6 ಕಿ.ಮೀ. ಅರಣ್ಯ ಪ್ರದೇಶದಲ್ಲಿ ಇರುವುದರಿಂದ ವಿಳಂಬವಾಗಿತ್ತು. ಕೇಂದ್ರ ಸರ್ಕಾರದ ಮಟ್ಟದಲ್ಲಿ ಅರಣ್ಯ ಸಂಬಂಧಿತ ಪ್ರಕರಣ ಇತ್ಯರ್ಥಗೊಂಡಿರುವ ಹಿನ್ನೆಲೆಯಲ್ಲಿ ಕಾಮಗಾರಿಗೆ ಇದ್ದ ಅಡ್ಡಿ ನಿವಾರಣೆಯಾಗಿದ್ದು, ಅಕ್ಟೋಬರ್‌ ವೇಳೆಗೆ ತುಮಕೂರಿನವರೆಗೆ ನೀರು ಹರಿಸುವ ಎಲ್ಲ ಸಾಧ್ಯತೆಗಳಿವೆ ಎಂದು ಹೇಳಿದರು.

ಮಾರಶೆಟ್ಟಿಹಳ್ಳಿ ಅರಣ್ಯ ಪ್ರದೇಶದಲ್ಲಿ 1.9 ಕಿ.ಮೀ. ಉದ್ದದ ಕಾಲುವೆ ನಿರ್ಮಾಣಕ್ಕೆ ಅಗತ್ಯ ಅನುಮತಿಗಳು ದೊರೆತಿದ್ದು, ಅರಣ್ಯದಲ್ಲಿನ ಪ್ರಾಣಿ-ಪಕ್ಷಿಗಳಿಗೆ ಯಾವುದೇ ತೊಂದರೆಯಾಗದಂತೆ ಮುಚ್ಚಿದ ಕಾಲುವೆ ನಿರ್ಮಿಸುವ ಷರತ್ತಿನಡಿ ಮರ ತೆರವಿಗೆ ಕಾರ್ಯಾದೇಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ತಕ್ಷಣ ಆರಂಭಿಸಿ, ಮುಂದಿನ 100 ದಿನಗಳಲ್ಲಿ ಒಟ್ಟಾರೆ 174 ಕಿ.ಮೀ. ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಈ ವರ್ಷ ಮುಂಗಾರು ಮಳೆ ಕೊರತೆಯಿಂದ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದ್ದು, ಮಧ್ಯ ಭಾರತದ ಸುಮಾರು 12 ರಾಜ್ಯಗಳಲ್ಲಿ ಮಳೆಯ ಅಭಾವ ಕಂಡುಬಂದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ರಾಜ್ಯದ ಬಹುತೇಕ ಕೆರೆ-ಕಟ್ಟೆಗಳು ತುಂಬಿದ್ದವು. ಪ್ರಸ್ತುತ ಎರಡು ತಿಂಗಳವರೆಗೆ ಕುಡಿಯುವ ನೀರಿನ ಸಮಸ್ಯೆ ಇಲ್ಲದಿದ್ದರೂ, ಕೃಷಿಗೆ ಉತ್ತಮ ಮಳೆಯ ಅಗತ್ಯವಿದೆ ಎಂದು ಹೇಳಿದರು.

ತುಮಕೂರಿನ ಹೇಮಾವತಿ ಲಿಂಕ್‌ ಕೆನಾಲ್‌ ಯೋಜನೆಗೆ ಸಂಬಂಧಿಸಿದ ಗೊಂದಲಗಳ ಬಗ್ಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಯೋಜನೆ ಅನುಷ್ಠಾನಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಪರಿಶೀಲನಾ ವೇಳೆ ಹೇಮಾವತಿ ನಾಲಾ ಯೋಜನೆಯ ಮುಖ್ಯ ಇಂಜಿನಿಯರ್‌ ಹೆಚ್‌.ಎಸ್‌‍. ಆನಂದ್‌, ಕಾರ್ಯಪಾಲಕ ಇಂಜಿನಿಯರ್‌ ಮುರುಳೀಧರ್‌, ಸಹಾಯಕ ಇಂಜಿನಿಯರ್‌ ಶಶಾಂಕ್‌, ತಹಶೀಲ್ದಾರ್‌ ಆರತಿ, ಹೆಚ್ಚುವರಿ ಪೊಲೀಸ್‌‍ ಅಧೀಕ್ಷಕ ಪುರುಷೋತ್ತಮ್‌ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

Latest News