ಮೈಸೂರು,ಜು.2- ಪ್ರತೀ ವರ್ಷದಂತೆ ಚಾಮುಂಡಿಬೆಟ್ಟದಲ್ಲಿ ನಡೆಯಲಿರುವ ಆಷಾಡ ಶುಕ್ರವಾರ ಪೂಜೆಯಲ್ಲಿ ಭಕ್ತರಿಗೆ ಸುಗಮವಾಗಿ ದೇವಿಯ ದರ್ಶನಕ್ಕೆ ಅನುಕೂಲವಾಗುವಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಜು.17 ರಿಂದ ಆ.7 ರವರೆಗೆ ನಡೆಯಲಿರುವ ಆಷಾಡ ಶುಕ್ರವಾರ ಪೂಜೆ ಸಂಬಂಧ ಆಯೋಜಿಸಿದ್ದ ಪೂರ್ವಭಾವಿ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜು.17 ಮೊದಲ ಆಷಾಡ ಶುಕ್ರವಾರ. 24ರಲ್ಲಿ ಎರಡನೇ ಆಷಾಡ ಶುಕ್ರವಾರ, 31 ರಂದು 3ನೇ ಹಾಗೂ ಆ.7 ರಂದು ಕಡೆಯ ಆಷಾಡ ಶುಕ್ರವಾರ ಪೂಜೆ ನಡೆಯಲಿದ್ದು, ಅ.4 ರಂದು ಶ್ರೀ ಚಾಮುಂಡೇಶ್ವರಿ ದೇವಿಯ ವರ್ಧಂತೋತ್ಸವ ನಡೆಯಲಿದೆ ಎಂದು ತಿಳಿಸಿದರು.
ಆಷಾಡ ಶುಕ್ರವಾರ ದಿನಗಳಂದು ಮುಂಜಾನೆ 5.30 ರಿಂದ ರಾತ್ರಿಯವರೆಗೂ ದೇವಿಯ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಬೇಕು. ವಿಐಪಿ ಮತ್ತು ವಿವಿಐಪಿಗಳ ಭೇಟಿಯಿಂದ ಸಾರ್ವಜನಿಕರ ದರ್ಶನಕ್ಕೆ ತೊಂದರೆಯಾಗುತ್ತದೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ವಿಐಪಿ ಹಾಗೂ ವಿವಿಐಪಿಗಳಿಗೆ ಬೆಳಿಗ್ಗೆ 5.30 ರಿಂದ 9.30 ರವರೆಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ಚಾಮುಂಡೇಶ್ವರಿ ವರ್ಧಂತಿ ಸಂದರ್ಭದಲ್ಲಿ ಬೆಳಿಗ್ಗೆ 8 ರಿಂದ ದರ್ಶನ ವ್ಯವಸ್ಥೆ ಮಾಡಲಾಗುವುದು ಎಂದರು.
ಆಷಾಡ ಶುಕ್ರವಾರ, ಶನಿವಾರ, ಭಾನುವಾರ ದಿನಗಳಂದು ಚಾಮುಂಡೇಶ್ವರಿ ದರ್ಶನಕ್ಕೆ ರಾಜ್ಯದ ವಿವಿಧ ಮೂಲೆಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಇಂದು ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು.
ಸಾರ್ವಜನಿಕರು ತಮ ವಾಹನಗಳನ್ನು ಲಲಿತ ಮಹಲ್ ಹೆಲಿಪ್ಯಾಡ್ನಲ್ಲಿ ಪಾರ್ಕಿಂಗ್ ಮಾಡಿ ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ಬೆಟ್ಟಕ್ಕೆ ತೆರಳುವಂತೆ ಮನವಿ ಮಾಡಿದರು.ವಿಐಪಿಗಳು ಹಾಗೂ ವಿವಿಐಪಿಗಳ ವಾಹನವನ್ನು ಮಹಿಷಾಸುರನ ಪ್ರತಿಮೆವರೆಗೂ ತೆರಳುವ ಅವಕಾಶವಿದ್ದು, ಅಲ್ಲಿಂದ ಬ್ಯಾಟರಿ ಚಾಲಿತ ವಾಹನದಲ್ಲಿ ದೇವಸ್ಥಾನಕ್ಕೆ ಕರೆದೊಯ್ಯಲಾಗುವುದು.
2 ಸಾವಿರ ರೂ. ಟಿಕೆಟ್ :
ಆಷಾಡ ಶುಕ್ರವಾರ ಸಂದರ್ಭದಲ್ಲಿ ದೇವಿಯ ದರ್ಶನಕ್ಕೆ ಯಾವುದೇ ರೀತಿಯ ಪಾಸುಗಳನ್ನು ನೀಡಲಾಗುವುದಿಲ್ಲ. ಧರ್ಮದರ್ಶನ ಹಾಗೂ 2 ಸಾವಿರ ರೂ. ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. ಕಳೆದ ಬಾರಿ 300 ರೂ. ಟಿಕೆಟ್ ದರ ನಿಗದಿ ಮಾಡಲಾಗಿತ್ತು. ಆದರೆ ಆ ಟಿಕೆಟ್ ಪಡೆದವರು ಅಂತಿಮವಾಗಿ ಧರ್ಮದರ್ಶನದ ಸರದಿ ಸಾಲಿಗೆ ಬಂದು ಸೇರುತ್ತಿದ್ದರು.
ಈ ಹಿನ್ನೆಲೆಯಲ್ಲಿ ಟಿಕೆಟ್ ಪಡೆದವರಿಗೆ ಯಾವುದೇ ಪ್ರಯೋಜನವಾಗುತ್ತಿರಲಿಲ್ಲ ಎಂಬ ಕಾರಣಕ್ಕೆ ಈ ಟಿಕೆಟ್ ಅನ್ನು ರದ್ದುಪಡಿಸಿ ಕೇವಲ 2 ಸಾವಿರ ರೂ. ಟಿಕೆಟ್ ಮಾತ್ರ ಉಳಿಸಿಕೊಳ್ಳಲಾಗಿದೆ. ಈ ಟಿಕೆಟ್ಗಳನ್ನು ಲಲಿತ ಮಹಲ್ ಪ್ಯಾಲೆಸ್ ಮೈದಾನದಲ್ಲಿ ನೀಡಲಾಗುವುದು. ಬೆಟ್ಟ ಹತ್ತಿ ಬರುವ ಭಕ್ತರಿಗೆ ದೇವಾಲಯದ ಬಳಿಯೇ ಟಿಕೆಟ್ ಪಡೆಯಬಹುದಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ, ನಗರ ಪೊಲೀಸ್ ಆಯುಕ್ತರಾದ ಸೀಮಾ ಲಟ್ಕರ್, ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರೂಪ, ಜಿ.ಪಂ. ಸಿಇಒ ಯುಕೇಶ್ ಕುಮಾರ್, ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಇದ್ದರು.
